
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ (Champions Trophy 2025) ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂದು ಆಸ್ಟ್ರೇಲಿಯಾ ಹಾಗೂ ಭಾರತ (Australia vs India) ಮುಖಾಮುಖಿಯಾಗಿದ್ದವು. ಎರಡೂ ತಂಡಗಳು ಬಲಿಷ್ಠ ಆಟಗಾರರ ಪಡೆಯನ್ನೇ ಹೊಂದಿದ್ದ ಕಾರಣ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಅದರಂತೆ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ, ಪೂರ್ಣ 50 ಓವರ್‌ಗಳನ್ನು ಆಡಲಾಗದೆ 49.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡರು 264 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಸುಲಭ ಜಯ ದಾಖಲಿಸಿತು. ಈ ಮೂಲಕ ರೋಹಿತ್ ಪಡೆ ಟೂರ್ನಿಯಲ್ಲಿ ಅಜೇಯ ತಂಡವಾಗಿ ಫೈನಲ್ಗೆ ಕಾಲಿರಿಸಿದೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 14 ವರ್ಷಗಳ ನಂತರ ಐಸಿಸಿ ಟೂರ್ನಮೆಂಟ್‌ನ ನಾಕೌಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ. ಈ ಹಿಂದೆ 2011 ರ ಏಕದಿನ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ, ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಿ ಸೆಮಿಫೈನಲ್ ಎಂಟ್ರಿಕೊಟ್ಟಿದಲ್ಲದೆ, ಆ ನಂತರ ನಡೆದ ಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗ ಟೀಂ ಇಂಡಿಯಾ, ಆಸ್ಟ್ರೇಲಿಯಾವನ್ನು ಸೆಮಿಫೈನಲ್‌ನಲ್ಲಿ ಸೋಲಿಸಿ ಟೂರ್ನಿಯಿಂದ ಹೊರದಬ್ಬಿದೆ.
ಮಂಗಳವಾರ ನಡೆದ ಈ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಅನುಭವಿ ಆಟಗಾರರ ಅಲಭ್ಯತೆಯ ನಡುವೆಯೂ ಉತ್ತಮ ಪ್ರದರ್ಶನ ನೀಡಿತು. ಇಂಜುರಿಯಿಂದಾಗಿ ಈಗಾಗಲೇ ಅನೇಕ ಆಟಗಾರರನ್ನು ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡವು 21 ವರ್ಷದ ಹೊಸ ಆಲ್‌ರೌಂಡರ್ ಕೂಪರ್ ಕೊನೊಲಿ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿತು. ಆದರೆ ಶಮಿಯಂತಹ ಅನುಭವಿ ಬೌಲರ್ ಮುಂದೆ ಖಾತೆ ತೆರೆಯಲು ಸಾಧ್ಯವಾಗದೆ ಕೊನೊಲಿ ಪೆವಿಲಿಯನ್ ಸೇರಿಕೊಂಡರೆ, ಮತ್ತೊಂದೆಡೆ, ಭಾರತದ ವಿರುದ್ಧ ಪ್ರತಿ ಪಂದ್ಯದಲ್ಲೂ ಆಕ್ರಮಣಕಾರಿ ಆಟವಾಡುವ ಟ್ರಾವಿಸ್ ಹೆಡ್, ಈ ಪಂದ್ಯದಲ್ಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮತ್ತೆ ಭಾರತ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಆದರೆ ವರುಣ್ ಚಕ್ರವರ್ತಿ ಇಲ್ಲಿಯೂ ತಮ್ಮ ಮ್ಯಾಜಿಕ್ ಪ್ರದರ್ಶಿಸಿ ಅವರನ್ನು ಪೆವಿಲಿಯನ್‌ಗೆ ವಾಪಸ್ ಕಳುಹಿಸಿದರು.
ಇದಾದ ನಂತರ, ನಾಯಕ ಸ್ಟೀವ್ ಸ್ಮಿತ್ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿ, ಶತಕದಂಚಿನಲ್ಲಿ ಶಮಿಗೆ ಬಲಿಯಾದರು. ಕೊನೆಯಲ್ಲಿ, ಅಲೆಕ್ಸ್ ಕ್ಯಾರಿ ಮತ್ತೊಮ್ಮೆ ವೇಗದ ಇನ್ನಿಂಗ್ಸ್ ಆಡಿ 61 ರನ್ ಗಳಿಸಿದರು. ಆದರೆ 48ನೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ರನೌಟ್ ಮಾಡಿದರು. ಇದರಿಂದಾಗಿ ಆಸ್ಟ್ರೇಲಿಯಾದ ಸ್ಕೋರ್‌ಗೆ ಹೆಚ್ಚುವರಿ 15-20 ರನ್‌ಗಳು ಸೇರ್ಪಡೆಯಾಗುವ ಸಾಧ್ಯತೆ ಕೊನೆಗೊಂಡಿತು. ಟೀಂ ಇಂಡಿಯಾ ಪರ ಶಮಿ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು.
ಇದನ್ನೂ ಓದಿ: IND vs AUS: ಭಾರತದ ನಂಬರ್ 1 ಫೀಲ್ಡರ್ ಕೊಹ್ಲಿ; ಗೋಡೆ ದಾಖಲೆ ಉಡೀಸ್
ಆಸ್ಟ್ರೇಲಿಯಾ ನೀಡಿದ 264 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. ಆದರೆ ಆಸ್ಟ್ರೇಲಿಯಾ ಸತತ ಎರಡು ಓವರ್‌ಗಳಲ್ಲಿ ಎರಡು ಬಾರಿ ಕ್ಯಾಚ್‌ಗಳನ್ನು ಕೈಬಿಡುವ ಮೂಲಕ ಆರಂಭಿಕ ಒತ್ತಡವನ್ನು ಹೆಚ್ಚಿಸುವ ಅವಕಾಶವನ್ನು ಕಳೆದುಕೊಂಡಿತು. ಆದಾಗ್ಯೂ, ಶೀಘ್ರದಲ್ಲೇ ಶುಭ್ಮನ್ ಗಿಲ್ ಅವರನ್ನು ದ್ವಾರ್ಶುಯಿಸ್ ಔಟ್ ಮಾಡಿ ಮೊದಲ ಬ್ರೇಕ್‌ಥ್ರೂ ಪಡೆದರು. ಆ ನಂತರ ಬೌಲಿಂಗ್ಗೆ ಇಳಿದ ಕೊನೊಲಿ, ರೋಹಿತ್ ಶರ್ಮಾರನ್ನು ಎಲ್ಬಿ ಬಲೆಗೆ ಬೀಳಿಸಿ ಭಾರತಕ್ಕೆ ಮತ್ತೊಂದು ಆಘಾತ ನೀಡಿದರು.
ಇಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಇದೇ ವೇಳೆ ಕೊಹ್ಲಿಗೆ ಜೊತೆಯಾದ ಶ್ರೇಯಸ್ 91 ರನ್‌ಗಳ ಜೊತೆಯಾಟವನ್ನಾಡಿ ತಂಡವನ್ನು ಸಂಕಷ್ಟದಿಂದ ಹೊರತೆಗೆದರು. ಈ ವೇಳೆ ಕೊಹ್ಲಿ ತಮ್ಮ 73ನೇ ಅರ್ಧಶತಕವನ್ನು ಬಾರಿಸಿದರೆ, ಶ್ರೇಯಸ್ 45 ರನ್ ಬಾರಿಸ ಔಟಾದರು. ನಂತರ ಬಂದ ಅಕ್ಷರ್ (27) ಕೊಹ್ಲಿ ಜೊತೆಗೂಡಿ ಸ್ಕೋರ್ ಹೆಚ್ಚಿಸಲು ಪ್ರಯತ್ನಿಸಿದರು ಆದರೆ ನಾಥನ್ ಎಲ್ಲಿಸ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪಂದ್ಯವನ್ನು ರೋಮಾಂಚನಗೊಳಿಸಿದರು. ಇದಾದ ನಂತರ ರಾಹುಲ್ ಮತ್ತು ವಿರಾಟ್ 47 ರನ್‌ಗಳ ಜೊತೆಯಾಟ ನಡೆಸಿ ಗೆಲುವು ಖಚಿತಪಡಿಸಿದರು. ಕೊಹ್ಲಿ ಶತಕ ಗಳಿಸುವಲ್ಲಿ ವಿಫಲವಾದರೂ, ಹಾರ್ದಿಕ್ (28) ಮತ್ತು ರಾಹುಲ್ (ಅಜೇಯ 42) ಸತತ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:34 pm, Tue, 4 March 25