ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ (Champions Trophy 2025) ಟೂರ್ನಿಗಾಗಿ ತಾತ್ಕಾಲಿಕ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮುಂದಿನ ವರ್ಷ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ ಎಂದು ವರದಿಯಾಗಿದೆ. ಆದರೆ ಈ ಟೂರ್ನಿಯಲ್ಲಿ ಭಾರತ ತಂಡ ಪಾಲ್ಗೊಳ್ಳಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ಈ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಲಿದೆ. ಅಲ್ಲದೆ ತಾತ್ಕಾಲಿಕ ದಿನಾಂಕ ನಿಗದಿ ಬೆನ್ನಲ್ಲೇ, ಟೂರ್ನಿಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮೂರು ಸ್ಟೇಡಿಯಂಗಳನ್ನು ಆಯ್ಕೆ ಮಾಡಿಕೊಂಡಿದೆ.
ಅದರಂತೆ ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳು ನಡೆಯಲಿದೆ. ವಿಶೇಷ ಎಂದರೆ ಭಾರತ ತಂಡದ ಎಲ್ಲಾ ಪಂದ್ಯಗಳು ಲಾಹೋರ್ನ ಗಡ್ಡಾಫಿ ಸ್ಟೇಡಿಯಂನಲ್ಲಿ ಆಯೋಜಿಸಲಾಗುತ್ತದೆ ಎಂದು ವರದಿಯಾಗಿದೆ. ಅಂದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತದ ಪಂದ್ಯಗಳನ್ನು ಏಕೈಕ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಿದ್ದು, ಈ ಮೂಲಕ ಟೀಮ್ ಇಂಡಿಯಾ ಆಟಗಾರರಿಗೆ ಎಲ್ಲಾ ರೀತಿಯ ಸುರಕ್ಷತೆಯನ್ನು ಒದಗಿಸಲು ಬದ್ಧ ಎಂದು ಐಸಿಸಿಗೆ ತಿಳಿಸಿದೆ.
ಲಾಹೋರ್ ನಗರವು ಭಾರತದ ಗಡಿಗೆ ಸಮೀಪದಲ್ಲಿದೆ. ಇದರಿಂದ ಭಾರತೀಯ ಅಭಿಮಾನಿಗಳ ಪ್ರಯಾಣಕ್ಕೂ ಅನುಕೂಲವಾಗಲಿದೆ. ಈ ಮೂಲಕ ಟೀಮ್ ಇಂಡಿಯಾ ಅಭಿಮಾನಿಗಳ ಪಾಕ್ ಪ್ರಯಾಣಕ್ಕೂ ಅನುಕೂಲ ಕಲ್ಪಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ.
2006 ರ ಬಳಿಕ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿಲ್ಲ. ಆದರೆ ಮುಂದಿನ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿರುವುದರಿಂದ ಇದೀಗ ಭಾರತ ತಂಡ ಪಾಕ್ಗೆ ತೆರೆಳಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಐಸಿಸಿ ಟೂರ್ನಿಗಳನ್ನು ಸ್ಥಳಾಂತರಿಸಬೇಕಿದ್ದರೆ ನಿರ್ದಿಷ್ಠ ಕಾರಣಗಳಿರಬೇಕಾಗುತ್ತದೆ. ಇಲ್ಲಿ ಬಿಸಿಸಿಐ ಟೂರ್ನಿಯನ್ನು ಸ್ಥಳಾಂತರಿಸಲು ಸುರಕ್ಷತೆಯ ಕಾರಣಗಳನ್ನು ನೀಡಿದರೂ, ಅದಕ್ಕೆ ಇತರೆ ಕ್ರಿಕೆಟ್ ಮಂಡಳಿಗಳೂ ಕೂಡ ಕೈ ಜೋಡಿಸಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್, ಇಂಗ್ಲೆಂಡ್, ನ್ಯೂಝಿಲೆಂಡ್ ತಂಡಗಳು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಿದೆ.
ಇತ್ತ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಿದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಹೆಚ್ಚಿನ ನಷ್ಟಯುಂಟಾಗುವ ಸಾಧ್ಯತೆಯಿದೆ. ಏಕೆಂದರೆ ಭಾರತದ ಪ್ರತಿ ಪಂದ್ಯಗಳಿಗೆ ಇತರೆ ತಂಡಗಳನ್ನು ಯುಎಇ ಅಥವಾ ಶ್ರೀಲಂಕಾಗೆ ಕಳುಹಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಯ ಮುಂದಿಡಲಿದೆ.
ಇದನ್ನೂ ಓದಿ: India vs Pakistan: ಟೀಮ್ ಇಂಡಿಯಾ ಕೈಯಲ್ಲಿ ಪಾಕಿಸ್ತಾನ್ ತಂಡದ ಟಿ20 ವಿಶ್ವಕಪ್ ಭವಿಷ್ಯ
ಇದರ ನಡುವೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಲಾಹೋರ್ ಅನ್ನು ಕೇಂದ್ರೀಕರಿಸಿ ಭಾರತದ ಪಂದ್ಯಗಳನ್ನು ಆಯೋಜಿಸಲು ಪ್ಲ್ಯಾನ್ ರೂಪಿಸಿದೆ. ಈ ಮೂಲಕ ಟೀಮ್ ಇಂಡಿಯಾಗೆ ಎಲ್ಲಾ ರೀತಿಯ ಸುರಕ್ಷತೆಯನ್ನು ಒದಗಿಸಲಿದ್ದೇವೆ ಎಂಬ ವಾದವನ್ನು ಐಸಿಸಿ ಮುಂದಿಡಲಿದ್ದಾರೆ. ಹೀಗಾಗಿ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಸ್ಥಳಾಂತರಿಸಲು ಬಿಸಿಸಿಐ ಯಾವ ಕಾರಣಗಳನ್ನು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.