IND vs PAK: ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ: ಭಾರತ ಮತ್ತು ಪಾಕ್ ಮುಖಾಮುಖಿ
India vs Pakistan: ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯನ್ನು ಸ್ಥಳಾಂತರಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಒಪ್ಪದಿದ್ದರೆ, ಟೂರ್ನಿಯು ಹೈಬ್ರೀಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಟೀಮ್ ಇಂಡಿಯಾದ ಪಂದ್ಯಗಳಿಗೆ ಯುಎಇ ಅಥವಾ ಶ್ರೀಲಂಕಾ ಆತಿಥ್ಯವಹಿಸುವ ಸಾಧ್ಯತೆಯಿದೆ. ಅದರಂತೆ ಎರಡು ದೇಶಗಳಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಬಹುದು.
ಚಾಂಪಿಯನ್ಸ್ ಟ್ರೋಫಿ 2025 (Champions Trophy 2025) ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಅಂದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿ ಎರಡು ದೇಶಗಳಲ್ಲಿ ಆಯೋಜಿಸುವ ಸಾಧ್ಯತೆಯಿದೆ. 2025 ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಂದಿದ್ದು, ಅದರಂತೆ ಟೂರ್ನಿಯು ಪಾಕ್ನಲ್ಲಿ ನಡೆಯಲಿದೆ. ಆದರೆ ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ. ಹೀಗಾಗಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವ ಸಾಧ್ಯತೆಯಿದೆ.
ಹೈಬ್ರಿಡ್ ಮಾದರಿ ಎಂದರೆ, ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಪಾಕಿಸ್ತಾನದಲ್ಲೇ ಆಯೋಜನೆಗೊಂಡರೂ, ಟೀಮ್ ಇಂಡಿಯಾದ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ಆಯೋಜಿಸಲಿದ್ದಾರೆ. ಅದರಂತೆ ಭಾರತದ ಪಂದ್ಯಗಳಿಗೆ ಯುಎಇ ಅಥವಾ ಶ್ರೀಲಂಕಾ ಆತಿಥ್ಯವಹಿಸುವ ಸಾಧ್ಯತೆ ದಟ್ಟವಾಗಿದೆ.
ಏಕೆಂದರೆ ಕಳೆದ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಪಾಕ್ ಕ್ರಿಕೆಟ್ ಮಂಡಳಿ ಹೊಂದಿತ್ತು. ಆದರೆ ಭಾರತ ತಂಡವು ಪಾಕ್ಗೆ ತೆರಳಲು ಹಿಂದೇಟು ಹಾಕಿದ್ದರಿಂದ ಟೂರ್ನಿಯನ್ನು ಹೈಬ್ರೀಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು.
ಅದರಂತೆ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್ನ್ನು ಆಯೋಜಿಸಲಾಗಿತ್ತು. ಇಲ್ಲಿ ಭಾರತ ತಂಡವು ಫೈನಲ್ ಸೇರಿದಂತೆ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಬರಲು ಟೀಮ್ ಇಂಡಿಯಾ ಹಿಂದೇಟು ಹಾಕಿದ್ದು, ಹೀಗಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಕೂಡ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕಾದ ಅನಿವಾರ್ಯತೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದಿದೆ.
ಐಸಿಸಿ ಟೂರ್ನಿ ಸ್ಥಳಾಂತರ ಸಾಧ್ಯವೇ?
ಐಸಿಸಿ ಟೂರ್ನಿಗಳನ್ನು ಸ್ಥಳಾಂತರಿಸಬೇಕಿದ್ದರೆ ನಿರ್ದಿಷ್ಠ ಕಾರಣಗಳಿರಬೇಕಾಗುತ್ತದೆ. ಇಲ್ಲಿ ಬಿಸಿಸಿಐ ಟೂರ್ನಿಯನ್ನು ಸ್ಥಳಾಂತರಿಸಲು ಸುರಕ್ಷತೆಯ ಕಾರಣಗಳನ್ನು ನೀಡಿದರೂ, ಅದಕ್ಕೆ ಇತರೆ ಕ್ರಿಕೆಟ್ ಮಂಡಳಿಗಳೂ ಕೂಡ ಕೈ ಜೋಡಿಸಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್, ಇಂಗ್ಲೆಂಡ್, ನ್ಯೂಝಿಲೆಂಡ್ ತಂಡಗಳು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಿದೆ. ಹೀಗಾಗಿ 2025 ರಲ್ಲಿ ಬಿಸಿಸಿಐ ಯಾವ ಕಾರಣಗಳನ್ನು ಮುಂದಿಡಲಿದೆ ಎಂಬುದೇ ಕುತೂಹಲ.
ಇತ್ತ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಿದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಹೆಚ್ಚಿನ ನಷ್ಟಯುಂಟಾಗುವ ಸಾಧ್ಯತೆಯಿದೆ. ಏಕೆಂದರೆ ಭಾರತದ ಪ್ರತಿ ಪಂದ್ಯಗಳಿಗೆ ಇತರೆ ತಂಡಗಳನ್ನು ಯುಎಇ ಅಥವಾ ಶ್ರೀಲಂಕಾಗೆ ಕಳುಹಿಸಬೇಕಾಗುತ್ತದೆ. ಹೀಗಾಗಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಿದೆಯಾ ಅಥವಾ ಸಂಪೂರ್ಣ ಟೂರ್ನಿಯನ್ನೇ ಸ್ಥಳಾಂತರಿಸಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2024: 5 ಓವರ್ಗಳಲ್ಲಿ 97 ರನ್ ಬಾರಿಸಿದ DC: RCB ದಾಖಲೆ ಸೇಫ್
ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿರುವ 8 ತಂಡಗಳು:
- ಭಾರತ
- ಸೌತ್ ಆಫ್ರಿಕಾ
- ಆಸ್ಟ್ರೇಲಿಯಾ
- ನ್ಯೂಝಿಲ್ಯಾಂಡ್
- ಪಾಕಿಸ್ತಾನ್ (ಆತಿಥೇಯ ರಾಷ್ಟ್ರ)
- ಅಫ್ಘಾನಿಸ್ತಾನ್
- ಇಂಗ್ಲೆಂಡ್
- ಬಾಂಗ್ಲಾದೇಶ್