ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 40ನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ವಿಶೇಷ ದಾಖಲೆ ಬರೆದಿದೆ. ಈ ದಾಖಲೆಯ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿರುವ ರೆಕಾರ್ಡ್ ಅನ್ನು ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.
ಅಂದರೆ ಈ ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 15 ಓವರ್ಗಳ ಮುಕ್ತಾಯದ ವೇಳೆಗೆ 127 ರನ್ ಕಲೆಹಾಕಿತ್ತು. ಆದರೆ ಕೊನೆಯ ಐದು ಓವರ್ಗಳ ವೇಳೆ ಅಬ್ಬರಿಸಿದ ರಿಷಭ್ ಪಂತ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಪರಿಣಾಮ ಕೊನೆಯ 5 ಓವರ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬರೋಬ್ಬರಿ 97 ರನ್ ಕಲೆಹಾಕಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅಂತಿಮ 5 ಓವರ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ 2ನೇ ತಂಡ ಎಂಬ ದಾಖಲೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನದಾಗಿಸಿಕೊಂಡಿತು.
ಈ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬುದು ವಿಶೇಷ. 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ 5 ಓವರ್ಗಳಲ್ಲಿ 112 ರನ್ ಬಾರಿಸುವ ಮೂಲಕ ಆರ್ಸಿಬಿ ಈ ಭರ್ಜರಿ ದಾಖಲೆ ಬರೆದಿದೆ. ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ 5 ಓವರ್ಗಳಲ್ಲಿ 97 ರನ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ ಈ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದೆ.
ಇನ್ನು ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀಡಿದ 225 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 220 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ರನ್ಗಳ ರೋಚಕ ಜಯ ಸಾಧಿಸಿದೆ.
Published On - 8:02 am, Thu, 25 April 24