ರೋಹಿತ್ ಶರ್ಮಾ ನಾಯಕತ್ವ ತ್ಯಜಿಸುವ ಸಾಧ್ಯತೆ: ವರದಿ
Rohit Sharma: ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿ ಮೂಲಕ ಏಕದಿನ ಕ್ರಿಕೆಟ್ಗೆ ವಿದಾಯ ಹೇಳುವುದು ಬಹುತೇಕ ಖಚಿತ. ಆದರೆ ಅದಕ್ಕೂ ಮುನ್ನ ಅವರು ಫಾರ್ಮ್ ಕಂಡುಕೊಳ್ಳಬೇಕಿದೆ. ಇಲ್ಲದಿದ್ದರೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ಅವರು ನಾಯಕತ್ವದಿಂದ ಕೆಳಗಿಳಿಯಬೇಕಾಗಿ ಬರಬಹುದು. ಏಕೆಂದರೆ ಹಿಟ್ಮ್ಯಾನ್ ರನ್ಗಳಿಸಲು ಪರದಾಡುತ್ತಿರುವುದು ಟೀಮ್ ಇಂಡಿಯಾ ಪಾಲಿಗೆ ಹೊಸ ಚಿಂತೆಯನ್ನುಂಟು ಮಾಡಿದೆ.

ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ದಿನಗಳು ಮಾತ್ರ. ಫೆಬ್ರವರಿ 19 ರಿಂದ ಶುರುವಾಗಲಿರುವ ಈ ಟೂರ್ನಿಗಾಗಿ ಈಗಾಗಲೇ ಭಾರತ ತಂಡವನ್ನು ಘೋಷಿಸಲಾಗಿದೆ. 15 ಸದಸ್ಯರ ಈ ತಂಡದ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಆದರೀಗ ಟೂರ್ನಿಗೂ ಮುನ್ನ ಹಿಟ್ಮ್ಯಾನ್ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ರೋಹಿತ್ ಶರ್ಮಾ ಕಳಪೆ ಫಾರ್ಮ್ನಲ್ಲಿದ್ದು, ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಾಯಕತ್ವ ತ್ಯಜಿಸಲು ಚಿಂತಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಪಂದ್ಯಗಳಲ್ಲಿ ಹಿಟ್ಮ್ಯಾನ್ ಲಯಕ್ಕೆ ಮರಳಲು ಯಶಸ್ವಿಯಾದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಇದರ ಹೊರತಾಗಿ ಮತ್ತೆ ವೈಫಲ್ಯ ಅನುಭವಿಸಿದರೆ, ರೋಹಿತ್ ಶರ್ಮಾ ನಾಯಕತ್ವ ತ್ಯಜಿಸಲಿದ್ದಾರೆ. ಇದಾಗ್ಯೂ ಅವರು ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯಗಳಲ್ಲಿ ಕಣಕ್ಕಿಳಿಯಬಹುದು. ಅಲ್ಲೂ ಕೂಡ ವಿಫಲರಾದರೆ ಆಡುವ ಬಳಗದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಕ್ಯಾಪ್ಟನ್ ಯಾರು?
ರೋಹಿತ್ ಶರ್ಮಾ ಅರ್ಧದಲ್ಲೇ ಏಕದಿನ ತಂಡದ ನಾಯಕತ್ವ ತ್ಯಜಿಸಿದರೆ, ಹಾರ್ದಿಕ್ ಪಾಂಡ್ಯ ಅವರಿಗೆ ಕ್ಯಾಪ್ಟನ್ ಪಟ್ಟ ಸಿಗಲಿದೆ. ಈ ಬಗ್ಗೆ ಈಗಾಗಲೇ ಪಾಂಡ್ಯ ಜೊತೆ ಆಯ್ಕೆ ಸಮಿತಿ ಸದಸ್ಯರು ಚರ್ಚಿಸಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ.
ಹೀಗಾಗಿ ಕಳಪೆ ಫಾರ್ಮ್ನಲ್ಲಿರುವ ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಯಕತ್ವ ತೊರೆದರೆ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಹಿಟ್ಮ್ಯಾನ್ ಅವರ ಉತ್ತರಾಧಿಕಾರಿಯಾಗಿ ಹಾರ್ದಿಕ್ ಪಾಂಡ್ಯ ಅವರನ್ನು ನೇಮಿಸಲಾಗಿತ್ತು.
ಅಲ್ಲದೆ ಪಾಂಡ್ಯ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಹಲವು ಪಂದ್ಯಗಳನ್ನಾಡಿತ್ತು. ಆದರೆ ಗೌತಮ್ ಗಂಭೀರ್ ಕೋಚ್ ಆದ ಬಳಿಕ ಟಿ20 ತಂಡದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ಗೆ ನೀಡಲಾಯಿತು. ಅಲ್ಲದೆ ಏಕದಿನ ತಂಡದ ಉಪನಾಯಕನಾಗಿ ಶುಭ್ಮನ್ ಗಿಲ್ ಆಯ್ಕೆಯಾಗಿದ್ದರು.
ಇದೀಗ ಚಾಂಪಿಯನ್ಸ್ ಟ್ರೋಫಿಯಂತಹ ಮಹತ್ವದ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲು ಅನುಭವದ ಅಗತ್ಯತೆ ಇದೆ. ಹೀಗಾಗಿ ಉಪನಾಯಕ ಶುಭ್ಮನ್ ಗಿಲ್ಗೆ ಕ್ಯಾಪ್ಟನ್ ಪಟ್ಟ ನೀಡುವ ಬದಲು ಹಾರ್ದಿಕ್ ಪಾಂಡ್ಯಗೆ ನಾಯಕತ್ವ ವಹಿಸಲು ಚಿಂತಿಸಲಾಗಿದೆ.
ಹಿಟ್ಮ್ಯಾನ್ ಸೈಲೆಂಟ್:
2024 ರ ಟಿ20 ವಿಶ್ವಕಪ್ ನಂತರ ರೋಹಿತ್ ಶರ್ಮಾ ಒಟ್ಟು 8 ಟೆಸ್ಟ್ ಪಂದ್ಯಗಳು ಮತ್ತು 4 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು ಟೆಸ್ಟ್‌ನಲ್ಲಿ 10.93 ರ ಸರಾಸರಿಯಲ್ಲಿ ಕೇವಲ 164 ರನ್‌ಗಳನ್ನು ಗಳಿಸಿದ್ದಾರೆ. ಹಾಗೆಯೇ ಏಕದಿನ ಪಂದ್ಯಗಳಲ್ಲಿ ಅವರು 39.75 ಸರಾಸರಿಯಲ್ಲಿ 159 ರನ್ ಗಳಿಸಿದ್ದಾರೆ.
ಇನ್ನು ಕಳೆದ 10 ಅಂತರರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಕೇವಲ 3 ಬಾರಿ ಮಾತ್ರ ಎರಡಂಕಿ ಮೊತ್ತದ ಗಡಿದಾಟಿದ್ದಾರೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 2 ರನ್ಗಳಿಸಿ ಔಟಾಗಿದ್ದರು.
ರೋಹಿತ್ ಶರ್ಮಾ ಅವರ ಈ ಕಳಪೆ ಫಾರ್ಮ್ ಇದೀಗ ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದೆ. ಈ ಚಿಂತೆಯನ್ನು ದೂರ ಮಾಡಲೆಂದೇ ಮೊದಲ ಏಕದಿನ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಕಣಕ್ಕಿಳಿಸಲಾಗಿತ್ತು. ಅಂದರೆ ರೋಹಿತ್ ಶರ್ಮಾ ಕಳಪೆ ಫಾರ್ಮ್ನಲ್ಲಿ ಮುಂದುವರೆದರೆ, ಚಾಂಪಿಯನ್ಸ್ ಟ್ರೋಫಿ ನಡುವೆ ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ಆರಂಭಿಕರಾಗಿ ಕಾಣಿಸಿಕೊಳ್ಳುವುದು ಖಚಿತ.
ಇದನ್ನೂ ಓದಿ: ಬ್ರಾವೊ ವಿಶ್ವ ದಾಖಲೆ ಬೌಲ್ಡ್: ಹೊಸ ಇತಿಹಾಸ ನಿರ್ಮಿಸಿದ ರಶೀದ್ ಖಾನ್
ಅಲ್ಲದೆ ರೋಹಿತ್ ಶರ್ಮಾ ಆಡುವ ಬಳಗದಿಂದಲೇ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಆದರೆ ಅದಕ್ಕೂ ಮುನ್ನ ನಾಯಕತ್ವ ತ್ಯಜಿಸಿ ಹೊಸ ಕ್ಯಾಪ್ಟನ್ ಆಯ್ಕೆಗೆ ಹಿಟ್ಮ್ಯಾನ್ ಮುನ್ನಡಿ ಬರೆಯಲಿದ್ದಾರಾ ಎಂಬುದೇ ಈಗ ಪ್ರಶ್ನೆ.
Published On - 11:23 am, Sun, 9 February 25