
ಐಪಿಎಲ್‌ನಲ್ಲಿ (IPL) ಮೋಸದಾಟ ಆಡಿ 2 ವರ್ಷಗಳ ಕಾಲ ಲೀಗ್ನಿಂದ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ವಿರುದ್ಧ ಐಪಿಎಲ್ ನಿಯಮವನ್ನು ಮುರಿದಿರುವ ಆರೋಪ ಕೇಳಿಬಂದಿತ್ತು. ಈ ಆರೋಪ ಹುಟ್ಟಿಕೊಳ್ಳಲು ಸಿಎಸ್‌ಕೆ ಪರ ಆಡುತ್ತಿರುವ ರವಿಚಂದ್ರನ್ ಅಶ್ವಿನ್ (R Ashwin) ನೀಡಿದ್ದ ಅದೊಂದು ಹೇಳಿಕೆಯೇ ಕಾರಣವಾಗಿತ್ತು. ವಾಸ್ತವವಾಗಿ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ, ಸಿಎಸ್‌ಕೆ ನಿಗದಿತ ಮೊತ್ತಕ್ಕೂ ಹೆಚ್ಚಿನ ಹಣವನ್ನು ನೀಡಿ ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ (Dewald Brevis) ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು ಎಂದಿದ್ದರು. ಅಶ್ವಿನ್ ಅವರ ಈ ಹೇಳಿಕೆಯ ನಂತರ ಸಿಎಸ್‌ಕೆ ವಿರುದ್ಧ ಐಪಿಎಲ್ ನಿಯಮ ಮುರಿದ ಗಂಭೀರ ಆರೋಪ ಕೇಳಿಬಂದಿತ್ತು. ಇದೀಗ ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸಿಎಸ್‌ಕೆ ಫ್ರಾಂಚೈಸಿ, ಬ್ರೆವಿಸ್ ಅವರ ಖರೀದಿ ಐಪಿಎಲ್ ನಿಯಮಗಳಿಗೆ ಬದ್ಧವಾಗಿದೆ ಎಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿರುವ ಆರೋಪಗಳ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಹೇಳಿಕೆಯನ್ನು ನೀಡುವ ಮೂಲಕ ಎಲ್ಲಾ ವಿವಾದಗಳಿಗೆ ಅಂತ್ಯ ಹಾಡಲು ಪ್ರಯತ್ನಿಸಿದೆ. ಬ್ರೆವಿಸ್ ಅವರ ಆಯ್ಕೆಯನ್ನು ಐಪಿಎಲ್ 2025-27ರ ನಿಯಮಗಳ ಪ್ರಕಾರ ಮಾಡಲಾಗಿದೆ ಎಂದು ಸಿಎಸ್‌ಕೆ ಸ್ಪಷ್ಟಪಡಿಸಿದೆ. ಗಾಯಗೊಂಡ ಅಥವಾ ಲಭ್ಯವಿಲ್ಲದ ಆಟಗಾರರ ಬದಲಿಗೆ ಹೊಸ ಆಟಗಾರರನ್ನು ಸೇರಿಸಿಕೊಳ್ಳಲು ಅನುಮತಿಸುವ ಐಪಿಎಲ್‌ನ ‘ಬದಲಿ ಆಟಗಾರರ’ ನಿಯಮ (ಷರತ್ತು 6.6) ಅಡಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಎಸ್‌ಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಸಮಯದಲ್ಲಿ ಡೆವಾಲ್ಡ್ ಬ್ರೆವಿಸ್ ಅವರನ್ನು ಬದಲಿ ಆಟಗಾರನಾಗಿ ಸಹಿ ಮಾಡುವ ಪ್ರಕ್ರಿಯೆಯಲ್ಲಿ ಫ್ರಾಂಚೈಸಿ ತೆಗೆದುಕೊಂಡ ಎಲ್ಲಾ ಕ್ರಮಗಳು ಐಪಿಎಲ್‌ನ ನಿಯಮಗಳಿಗೆ ಸಂಪೂರ್ಣವಾಗಿ ಅನುಗುಣವಾಗಿವೆ. ಏಪ್ರಿಲ್ 2025 ರಲ್ಲಿ, ಸೌದಿ ಅರೇಬಿಯಾದ ಜೆಡ್ಡಾದ ಅಬಾದಿ ಎಐ ಜೋಹರ್ ಅರೆನಾದಲ್ಲಿ ನಡೆದ ಐಪಿಎಲ್ 2025 ರ ಆಟಗಾರರ ಹರಾಜಿನಲ್ಲಿ 2.2 ಕೋಟಿ ರೂ.ಗೆ ಆಯ್ಕೆಯಾದ ಗಾಯಗೊಂಡ ಗುರ್ಜಪ್ನೀತ್ ಸಿಂಗ್ ಬದಲಿಗೆ ಡೆವಾಲ್ಡ್ ಬ್ರೆವಿಸ್ ಅವರನ್ನು 2.2 ಕೋಟಿ ರೂ. ಲೀಗ್ ಶುಲ್ಕಕ್ಕೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಫ್ರಾಂಚೈಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ, ‘ಬ್ರೆವಿಸ್ ಬಗ್ಗೆ ನಾನು ನಿಮಗೆ ಹೇಳುತ್ತೇನೆ, ಅವರು ಚೆನ್ನೈ ತಂಡವನ್ನು ಸೇರಿಕೊಂಡ ಬಳಿಕ ಉತ್ತಮ ಪ್ರದರ್ಶನ ನೀಡಿದರು. ಆದರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಲವು ಫ್ರಾಂಚೈಸಿಗಳು ಪ್ರಯತ್ನ ಪಟ್ಟಿದ್ದವು. ಆದರೆ ಬೆಲೆಯ ಕಾರಣದಿಂದಾಗಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕೆಲವು ಫ್ರಾಂಚೈಸಿಗಳಿಗೆ ಸಾಧ್ಯವಾಗಿರಲಿಲ್ಲ. ಏಕೆಂದರೆ ಬ್ರೆವಿಸ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಬೇಕಾದರೆ, ಅವರನ್ನು ಮೂಲ ಬೆಲೆಗೆ ಖರೀದಿಸಬೇಕಿತ್ತು. ಆದರೆ ಇದಕ್ಕೆ ಆಟಗಾರರು ಒಪ್ಪುವುದಿಲ್ಲ. ಹೀಗಾಗಿ ಏಜೆಂಟ್‌ಗಳ ಮೂಲಕ ಮಾತುಕತೆ ನಡೆಸಬೇಕಾಗುತ್ತದೆ. ಆ ಸಮಯದಲ್ಲಿ ಆಟಗಾರರು ನೀವು ನನಗೆ ಸ್ವಲ್ಪ ಹೆಚ್ಚುವರಿ ಮೊತ್ತವನ್ನು ನೀಡಿದರೆ, ನಾನು ಆಡುತ್ತೇನೆ ಎಂದು ಹೇಳುತ್ತಾರೆ.
ಸಿಎಸ್‌ಕೆ ಡೆವಾಲ್ಡ್ ಬ್ರೆವಿಸ್ಗೆ ಅಧಿಕ ಹಣ ನೀಡಿದೆ..! ಆರ್ ಅಶ್ವಿನ್ ಸ್ಫೋಟಕ ಹೇಳಿಕೆ; ವಿಡಿಯೋ ನೋಡಿ
ಅದರಂತೆಯೇ ಏಜೆಂಟರೊಂದಿಗೆ ಮಾತುಕತೆ ನಡೆಸಿದ ನಂತರವೇ ಚೆನ್ನೈ ಸೂಪರ್ ಕಿಂಗ್ಸ್ ಬ್ರೆವಿಸ್ಗೆ ಹೆಚ್ಚುವರಿ ಹಣವನ್ನು ಪಾವತಿಸುವ ಮೂಲಕ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಐಪಿಎಲ್‌ನಲ್ಲಿ ಈ ರೀತಿ ನಡೆಯುವುದು ಸಹಜ. ಏಕೆಂದರೆ ಮುಂದಿನ ಸೀಸನ್ಗೂ ಮುನ್ನ ತಂಡ ನನ್ನನ್ನು ಬಿಡುಗಡೆ ಮಾಡಿದರೆ, ಹರಾಜಿನಲ್ಲಿ ನನಗೆ ಅಧಿಕ ಮೊತ್ತ ಸಿಗಲಿದೆ ಎಂಬುದು ಆಟಗಾರರ ಉದ್ದೇಶವಾಗಿರುತ್ತದೆ. ಹೀಗಾಗಿಯೇ ಅವರು ಅಧಿಕ ಮೊತ್ತಕ್ಕೆ ಬೇಡಿಕೆ ಇಡುತ್ತಾರೆ. ಅದರಂತೆ ಬ್ರೆವಿಸ್ ಅವರನ್ನು ಸಹ ನಿಗದಿತ ಮೊತ್ತಕ್ಕೂ ಅಧಿಕ ಹಣ ನೀಡಿ ಸಿಎಸ್‌ಕೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು ಎಂದು ಅಶ್ವಿನ್ ಹೇಳಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ