ಕೈ ಹಿಡಿದ ಧೋನಿ…3 ಶತಕಗಳೊಂದಿಗೆ 624 ಬಾರಿಸಿ ಮಿಂಚಿದ ಪೂಜಾರ..!
Cheteshwar Pujara: ವಿಶೇಷ ಎಂದರೆ 2014 ರ ಬಳಿಕ ಐಪಿಎಲ್ನಲ್ಲಿ ಅವಕಾಶ ಪಡೆಯದಿದ್ದ ಚೇತೇಶ್ವರ ಪೂಜಾರ ಅವರನ್ನು ಐಪಿಎಲ್ 2021 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಿಎಸ್ಕೆ ತಂಡ ಖರೀದಿಸಿತ್ತು.
ಟೀಮ್ ಇಂಡಿಯಾದ (Team India) ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ (Cheteshwar Pujara) ಸೀಮಿತ ಓವರ್ಗಳ ಪಂದ್ಯಗಳಲ್ಲಿ ಈ ಪಾಟಿ ಬ್ಯಾಟ್ ಬೀಸುತ್ತಾರೆ ಎಂಬುದು ಬಹುಶಃ ಕೌಂಟಿ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳುವ ತನಕ ಯಾರಿಗೂ ಕೂಡ ಗೊತ್ತಿರಲಿಲ್ಲ. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಪೂಜಾರ ಕೌಂಟಿ ಚಾಂಪಿಯನ್ಶಿಪ್ನತ್ತ ಮುಖ ಮಾಡಿದ್ದರು. ಅದರಂತೆ ಸಸೆಕ್ಸ್ ತಂಡದ ಪರ ರಾಯಲ್ ಲಂಡನ್ ಒನ್ ಡೇ ಕಪ್ನಲ್ಲಿ ಕಣಕ್ಕಿಳಿದ ಚೇತೇಶ್ವರ ಪೂಜಾರ ತಮ್ಮ ಬ್ಯಾಟಿಂಗ್ ಶೈಲಿಯನ್ನೇ ಬದಲಿಸಿದ್ದರು. ಇಡೀ ಟೂರ್ನಿಯುದ್ದಕ್ಕೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಪೂಜಾರ ಸಸೆಕ್ಸ್ ಪರ 9 ಪಂದ್ಯಗಳಿಂದ ಕಲೆಹಾಕಿದ್ದು ಬರೋಬ್ಬರಿ 624 ರನ್ಗಳು. ಇದರಲ್ಲಿ 3 ಅದ್ಭುತ ಶತಕಗಳು ಕೂಡ ಸೇರಿವೆ.
ಟೀಮ್ ಇಂಡಿಯಾ ಆಟಗಾರನ ಈ ಅಮೋಘ ಫಾರ್ಮ್ ಎಲ್ಲರನ್ನೂ ಅಚ್ಚರಿಗೊಳಿಸಿತು. ಏಕೆಂದರೆ ಟೆಸ್ಟ್ ಸ್ಪೆಷಲಿಸ್ಟ್ ಆಗಿದ್ದ ಪೂಜಾರ ಇಂಗ್ಲೆಂಡ್ನಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ದರು. ಬ್ಯಾಟಿಂಗ್ ಶೈಲಿಯಲ್ಲಿ ಇಂತಹದೊಂದು ಬದಲಾವಣೆಗೆ ಮುಖ್ಯ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಎಂಬ ವಿಚಾರವನ್ನು ಚೇತೇಶ್ವರ ಪೂಜಾರ ಬಹಿರಂಗಪಡಿಸಿದ್ದಾರೆ.
ಪಾಡ್‌ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ ಚೇತೇಶ್ವರ ಪೂಜಾರ, ಖಂಡಿತವಾಗಿಯೂ ನನ್ನ ಬ್ಯಾಟಿಂಗ್ ಶೈಲಿ ಬದಲಾಗಿದೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇಂಗ್ಲೆಂಡ್ನ ಪಿಚ್ ಚೆನ್ನಾಗಿತ್ತು. ಸ್ವಲ್ಪ ಸಮತಟ್ಟಾಗಿದ್ದರಿಂದ ಅಂತಹ ಪಿಚ್‌ಗಳಲ್ಲಿ ಹೆಚ್ಚಿನ ಸ್ಟ್ರೈಕ್ ರೇಟ್‌ನೊಂದಿಗೆ ಸ್ಕೋರ್ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾನು ಸದಾ ಶ್ರಮಿಸಿದ್ದೇನೆ ಎಂದು ಪೂಜಾರ ತಿಳಿಸಿದರು.
ಇನ್ನು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಹೊಂದಲು ಮುಖ್ಯ ಕಾರಣ ಐಪಿಎಲ್. ಏಕೆಂದರೆ ನಾನು 2021 ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದ ಸಿಎಸ್ಕೆ ತಂಡದ ಭಾಗವಾಗಿದ್ದೆ. ನಾನು ಯಾವುದೇ ಪಂದ್ಯದಲ್ಲಿ ಆಡದಿದ್ದರೂ, ಅಭ್ಯಾಸದ ವೇಳೆ ಸಹ ಆಟಗಾರರ ತಯಾರಿಯನ್ನು ಗಮನಿಸುತ್ತಿದ್ದೆ. ಅಲ್ಲದೆ ಶಾರ್ಟ್ ಫಾರ್ಮಾಟ್ನಲ್ಲಿ ಆಡಬೇಕಾದರೆ ಯಾವ ರೀತಿ ಬ್ಯಾಟ್ ಬೀಸಬೇಕು, ದೊಡ್ಡ ಮೊತ್ತಗಳಿಸಬೇಕು ಎಂಬುದನ್ನು ಈ ವೇಳೆ ಅರಿತುಕೊಂಡೆ. ಇದರಿಂದ ನನ್ನ ಬ್ಯಾಟಿಂಗ್ ಶೈಲಿಯನ್ನು ಬದಲಿಸಲು ಅನುಕೂಲವಾಯಿತು ಎಂದರು.
ಹಾಗೆಯೇ ರಾಯಲ್ ಲಂಡನ್ ಕಪ್ ವೇಳೆ ಕೋಚ್ ಗ್ರಾಂಟ್ ಫ್ಲವರ್ ನನಗೆ ಶಾಟ್ಗಳ ಆಯ್ಕೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಅವರ ಬಳಿಕ ಕೆಲವು ಶಾಟ್ಗಳ ಬಗ್ಗೆ ಕೇಳಿಕೊಂಡಿದ್ದೆ. ಅವರು ನೀಡಿದ ಮಾರ್ಗದರ್ಶನದಂತೆ ನಾನು ಆಡುತ್ತಿದ್ದೆ. ಇದನ್ನು ನೋಡಿ ಕೋಚ್ ಬಂದು ನಾನು ಸೂಚಿಸಿದ್ದಂತೆ ಆಡುತ್ತಿದ್ದೀಯಾ ಎಂದು ತಿಳಿಸುತ್ತಿದ್ದರು. ಕೋಚ್ನ ಈ ಮಾತಿನಿಂದ ಕೂಡ ನನ್ನ ಆತ್ಮವಿಶ್ವಾಸ ಹೆಚ್ಚಿತು ಎಂದು ಚೇತೇಶ್ವರ ಪೂಜಾರ ಹೇಳಿದರು.
ವಿಶೇಷ ಎಂದರೆ 2014 ರ ಬಳಿಕ ಐಪಿಎಲ್ನಲ್ಲಿ ಅವಕಾಶ ಪಡೆಯದಿದ್ದ ಚೇತೇಶ್ವರ ಪೂಜಾರ ಅವರನ್ನು ಐಪಿಎಲ್ 2021 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಿಎಸ್ಕೆ ತಂಡ ಖರೀದಿಸಿತ್ತು. 50 ಲಕ್ಷಕ್ಕೆ ಸಿಎಸ್ಕೆ ತಂಡದ ಪಾಲಾಗಿದ್ದ ಪೂಜಾರ ಆಯ್ಕೆ ಎಲ್ಲರಿಗೂ ಅಚ್ಚರಿಯಾಗಿತ್ತು. ಇದಾಗ್ಯೂ ಸಿಎಸ್ಕೆ ಪರ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಇದೀಗ ರಾಯಲ್ ಲಂಡನ್ ಕಪ್ನಲ್ಲಿ ಅಬ್ಬರಿಸುವ ಮೂಲಕ ಚೇತೇಶ್ವರ ಪೂಜಾರ ಸೀಮಿತ ಓವರ್ ಕ್ರಿಕೆಟ್ನಲ್ಲಿ ತಾನು ಕೂಡ ಬಿರುಸಿನ ಬ್ಯಾಟಿಂಗ್ ಮಾಡಬಲ್ಲೆ ಎಂಬುದನ್ನು ನಿರೂಪಿಸಿದ್ದಾರೆ.