India Capitals vs Gujarat Giants: 9 ಸಿಕ್ಸ್, 8 ಫೋರ್: ಸಿಡಿಲಬ್ಬರದ ಶತಕ ಸಿಡಿಸಿದ ವಿಂಡೀಸ್ ಆಟಗಾರ
Legends League Cricket: 180 ರನ್ಗಳ ಟಾರ್ಗೆಟ್ ಪಡೆದ ಇಂಡಿಯಾ ಕ್ಯಾಪಿಟಲ್ಸ್ ತಂಡ ಕೂಡ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ನಾಯಕ ಸೆಹ್ವಾಗ್ ಕೇವಲ 6 ರನ್ಗಳಿಸಿ ಹೊರನಡೆದಿದ್ದರು.
ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನವು ಲೆಜೆಂಡ್ಸ್ ಲೀಗ್ನ ಮೊದಲ ಪಂದ್ಯದಲ್ಲೇ ಸಿಕ್ಸ್-ಫೋರ್ಗಳ ಸುರಿಮಳೆಯಾಗಿದೆ. ಶನಿವಾರ ನಡೆದ ಈ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ನಾಯಕತ್ವದ ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಜಾಕ್ಸ್ ಕಾಲಿಸ್ ನೇತೃತ್ವದ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಗುಜರಾತ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ಗುಜರಾತ್ ಜೈಂಟ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಪವರ್ಪ್ಲೇನಲ್ಲೇ 34 ರನ್ಗಳಿಗೆ 4 ಪ್ರಮುಖ ವಿಕೆಟ್ ಕಳೆದುಕೊಂಡು ಗುಜರಾತ್ ತಂಡವು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕಣಕ್ಕಿಳಿದ ವೆಸ್ಟ್ ಇಂಡೀಸ್ ಆಟಗಾರ ಆ್ಯಶ್ಲೆ ನರ್ಸ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.
ಇಂಡಿಯಾ ಕ್ಯಾಪಿಟಲ್ಸ್ ತಂಡದ ಬೌಲರ್ಗಳ ಬೆಂಡೆತ್ತಿದ ನರ್ಸ್ 9 ಸಿಕ್ಸ್ ಹಾಗೂ 8 ಫೋರ್ನೊಂದಿಗೆ ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸಿದರು. ಅಲ್ಲದೆ 43 ಎಸೆತಗಳಲ್ಲಿ ಅಜೇಯ 103 ರನ್ ಬಾರಿಸುವ ಮೂಲಕ 20 ಓವರ್ಗಳಲ್ಲಿ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 179 ಕ್ಕೆ ತಂದು ನಿಲ್ಲಿಸಿದರು.
180 ರನ್ಗಳ ಟಾರ್ಗೆಟ್ ಪಡೆದ ಇಂಡಿಯಾ ಕ್ಯಾಪಿಟಲ್ಸ್ ತಂಡ ಕೂಡ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ನಾಯಕ ಸೆಹ್ವಾಗ್ ಕೇವಲ 6 ರನ್ಗಳಿಸಿ ಹೊರನಡೆದಿದ್ದರು. ಆದರೆ ಮತ್ತೋರ್ವ ಆರಂಭಿಕ ಐರ್ಲೆಂಡ್ನ ಕೆವಿನ್ ಓಬ್ರಿಯೆನ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದರು. ಪರಿಣಾಮ ಇಂಡಿಯಾ ಕ್ಯಾಪಿಟಲ್ಸ್ ತಂಡವು ವಿಕೆಟ್ ಕಳೆದುಕೊಳ್ಳುತ್ತಿದ್ದರೂ ರನ್ಗತಿ ಹೆಚ್ಚುತ್ತಾ ಹೋಯಿತು.
ಅದರಂತೆ ಕೆವಿನ್ ಓಬ್ರಿಯೆನ್ 61 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 15 ಫೋರ್ ಬಾರಿಸಿ ತಂಡವನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದರು. ಅಂತಿಮವಾಗಿ ಇಂಡಿಯಾ ಕ್ಯಾಪಿಟಲ್ಸ್ ತಂಡವು 18.4 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಬಾರಿಸುವ ಮೂಲಕ 3 ವಿಕೆಟ್ಗಳ ರೋಚಕ ಜಯವನ್ನು ತನ್ನದಾಗಿಸಿಕೊಂಡಿತು.
ಇನ್ನು ಈ ಸೋಲಿನ ಹೊರತಾಗಿಯೂ ಗುಜರಾತ್ ಜೈಂಟ್ಸ್ ಪರ ಕೇವಲ 41 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದ ಆ್ಯಶ್ಲೇ ನರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.