Mohammed Shami: ಆಸೀಸ್ ವಿರುದ್ಧದ ಸರಣಿಗೆ ಎರಡು ದಿನವಿರುವಾಗ ಭಾರತಕ್ಕೆ ದೊಡ್ಡ ಶಾಕ್
India vs Australia: ಬಹುಕಾಲದ ಬಳಿಕ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿದ್ದ ಮೊಹಮ್ಮದ್ ಶಮಿ (Mohammed Shami) ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.
ಏಷ್ಯಾಕಪ್ನ (Asia Cup) ಸೂಪರ್ 4 ಹಂತದಲ್ಲಿ ಮುಗ್ಗರಿಸಿ ತವರಿಗೆ ಬಂದ ಭಾರತ ಇದೀಗ ಆಸ್ಟ್ರೇಲಿಯಾ (India vs Australia) ವಿರುದ್ಧದ ಸರಣಿಗೆ ಸಜ್ಜಾಗುತ್ತಿದೆ. ಇದೇ ಸೆಪ್ಟಂಬರ್ 20 ರಂದು ಮೂರು ಪಂದ್ಯಗಳ ಟಿ20 ಸರಣಿ ಪೈಕಿ ಮೊದಲ ಪಂದ್ಯ ನಡೆಯಲಿದೆ. ಈಗಾಗಲೇ ಈ ಸರಣಿಗೆ ಟೀಮ್ ಇಂಡಿಯಾ ಕೂಡ ಪ್ರಕಟವಾಗಿದ್ದು ಆಟಗಾರರು ಮೊದಲ ಹಣಾಹಣಿಗಾಗಿ ಮೊಹಾಲಿ ತಲುಪಿದ್ದಾರೆ. ಹೀಗಿರುವಾಗ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ಬಹುಕಾಲದ ಬಳಿಕ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿದ್ದ ಮೊಹಮ್ಮದ್ ಶಮಿ (Mohammed Shami) ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಶಮಿ ಟಿ20 ವಿಶ್ವಕಪ್ನಲ್ಲಿ ಆಡುವ ಕನಸು ಬಹುತೇಕ ನುಚ್ಚುನೂರುಗೊಂಡಿದೆ.
ಮೊಹಮ್ಮದ್ ಶಮಿ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುವ ವಿಚಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಚಿತಪಡಿಸಿದೆ. ಶಮಿಗೆ ಕೋವಿಡ್-19 ದೃಢಪಟ್ಟಿದೆ. ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ವಿಶ್ರಾಂತಿಯಲ್ಲಿದ್ದಾರೆ. ಚಿಂತಿಸುವ ಅಗತ್ಯವೇನಿಲ್ಲ. ಅವರೀಗ ಪ್ರತ್ಯೇಕವಾಸದಲ್ಲಿ ಉಳಿಯಬೇಕಿದೆ ಮತ್ತು ಗುಣಮುಖರಾದ ನಂತರವಷ್ಟೇ ತಂಡ ಸೇರಿಕೊಳ್ಳಬಹುದಾಗಿದೆ ಎಂದು ಬಿಸಿಸಿಐ ತಿಳಿಸಿವೆ.
ಇನ್ನು ಮೊಹಮ್ಮದ್ ಶಮಿ ಅವರ ಬದಲು ವೇಗಿ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದುವರೆಗೆ 7 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತ ಪರ ಆಡಿರುವ ಉಮೇಶ್, 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಕೊನೆಯ ಸಲ ಟೀಮ್ ಇಂಡಿಯಾ ಚುಟುಕು ಕ್ರಿಕೆಟ್ನಲ್ಲಿ ಕಣಕ್ಕಿಳಿದ್ದರು.
ಭಾರತ ತಂಡ ಮೊದಲಿಗೆ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡಲಿದ್ದು ಇದಾದ ಬಳಿಕ ದಕ್ಷಿಣ ಆಫ್ರಿಕಾ ತಂಡದ ವಿರುದ್ಧವೂ ಟಿ20 ಮತ್ತು ಏಕದಿನ ಸರಣಿಯನ್ನು ಆಡಬೇಕಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ಗೂ ಮುನ್ನ ಭಾರತಕ್ಕೆ ಸಜ್ಜಾಗಲು ಈ ಎರಡು ಸರಣಿಗಳು ಮಾತ್ರ ಉಳಿದಿವೆ. ಟೀಮ್ ಇಂಡಿಯಾ ಮೊದಲಿಗೆ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಮೊದಲ ಪಂದ್ಯ ಸೆಪ್ಟಂಬರ್ 20 ರಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಆಯೋಜಿಸಲಾಗದೆ. ದ್ವಿತೀಯ ಟಿ20 ಸೆ. 23 ಹಾಗೂ ಅಂತಿಮ ಪಂದ್ಯ ಸೆ. 25 ರಂದು ಕ್ರಮವಾಗಿ ನಾಗ್ಪುರ ಮತ್ತು ಹೈದರಾಬಾದ್ನಲ್ಲಿ ನಡೆಯಲಿದೆ.
ಇದಾದ ಬಳಿಕ ಹರಿಣಗಳ ವಿರುದ್ಧ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿ ಆಡಲಿದೆ. ಸೆ. 28ಕ್ಕೆ ತಿರುವನಂತಪುರಂನಲ್ಲಿ ಮೊದಲ ಟಿ20, ಅಕ್ಟೋಬರ್ 2 ಮತ್ತು ಅ. 4 ರಂದು ಕ್ರಮವಾಗಿ ಗುವಾಹಟಿ ಮತ್ತು ಇಂಧೋರ್ನಲ್ಲಿ ದ್ವಿತೀಯ ಮತ್ತು ತೃತೀಯ ಟಿ20 ಆಯೋಜಿಸಲಾಗಿದೆ. ಇನ್ನು ಮೊದಲ ಏಕದಿನ ಅ. 6, ಅ. 9 ಮತ್ತು ಅ. 11 ರಂದು ಲಖನೌ, ರಾಂಚಿ ಮತ್ತು ಡೆಲ್ಲಿಯಲ್ಲಿ ನಡೆಯಲಿದೆ. ಟಿ20 ಪಂದ್ಯ ಸಂಜೆ 7:30ಕ್ಕೆ ಶುರುವಾದರೆ, ಏಕದಿನ ಪಂದ್ಯ ಮಧ್ಯಾಹ್ನ 1:30ಕ್ಕೆ ಪ್ರಾರಂಭಗೊಳ್ಳಲಿದೆ.
ಆಸೀಸ್ ವಿರುದ್ಧದ ಟಿ20 ಸರಣಿಗೆ ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್–ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್–ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಜಸ್‌ಪ್ರೀತ್ ಬುಮ್ರಾ, ಉಮೇಶ್ ಯಾದವ್.
Published On - 8:22 am, Sun, 18 September 22