2027 ರ ವಿಶ್ವಕಪ್ ಆಡ್ತಾರಾ ಕೊಹ್ಲಿ, ರೋಹಿತ್? ಯಾರಿಗೆ ಗೊತ್ತು ಎಂದ ಅಗರ್ಕರ್

Team India Australia Tour: ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಸಿದ್ಧವಾಗಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 7 ತಿಂಗಳ ನಂತರ ಮರಳುತ್ತಿದ್ದಾರೆ. ಆದರೆ, 2027ರ ವಿಶ್ವಕಪ್‌ನಲ್ಲಿ ಅವರ ಭಾಗವಹಿಸುವಿಕೆ ಅನುಮಾನ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಹೇಳಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ಮೊಹಮ್ಮದ್ ಶಮಿ ಫಿಟ್ನೆಸ್ ಕಾರಣದಿಂದ ಆಯ್ಕೆಯಾಗದಿರುವುದು ವಿವಾದಕ್ಕೆ ಕಾರಣವಾಗಿದೆ.

2027 ರ ವಿಶ್ವಕಪ್ ಆಡ್ತಾರಾ ಕೊಹ್ಲಿ, ರೋಹಿತ್? ಯಾರಿಗೆ ಗೊತ್ತು ಎಂದ ಅಗರ್ಕರ್
Team India

Updated on: Oct 17, 2025 | 7:01 PM

ಏಕದಿನ ಹಾಗೂ ಟಿ20 ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಸಿದ್ಧತೆಯಲ್ಲಿ ತೊಡಗಿದೆ. ಈ ಪ್ರವಾಸದಲ್ಲಿ ಎಲ್ಲರು ಕಣ್ಣುಗಳು ಟೀಂ ಇಂಡಿಯಾದ ಇಬ್ಬರು ಮಾಜಿ ನಾಯಕರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಮೇಲೆ ಇರುತ್ತದೆ. ಏಕೆಂದರೆ ಇವರಿಬ್ಬರು ಬರೋಬ್ಬರಿ 7 ತಿಂಗಳುಗಳ ನಂತರ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಈ ಆಸ್ಟ್ರೇಲಿಯಾ ಪ್ರವಾಸ ಅವರ ವೃತ್ತಿಜೀವನದ ಕೊನೆಯ ಪ್ರವಾಸ ಎಂಬುದು ಈಗಾಗಲೇ ಖಚಿತವಾಗಿದೆ. ಇದೆಲ್ಲದರ ನಡುವೆ ಇವರಿಬ್ಬರು 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​​ನಲ್ಲಿ (2027 World Cup) ಆಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಖಚಿತ ಉತ್ತರ ಸಿಕ್ಕಿಲ್ಲವಾದರೂ, ಬಿಸಿಸಿಐ ಪಾಳಾಯದಿಂದ ಬರುತ್ತಿರುವ ಉತ್ತರಗಳನ್ನು ನೋಡುತ್ತಿದ್ದರೆ, ಅವರಿಬ್ಬರು ವಿಶ್ವಕಪ್ ಆಡುವುದು ಅನುಮಾನ ಎನ್ನಬಹುದು.

ಯಾವುದು ಇನ್ನೂ ಸ್ಪಷ್ಟವಾಗಿಲ್ಲ

ವಾಸ್ತವವಾಗಿ ಟೀಂ ಇಂಡಿಯಾದ ಆಯ್ಕೆ ಮಂಡಳಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ಬಳಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 2027 ರ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತಾರಾ ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ‘ಯಾರಿಗೆ ಗೊತ್ತು, ಏಕೆಂದರೆ ಅವರನ್ನು ಬದಲಾಯಿಸಬಲ್ಲ ಅನೇಕ ಯುವ ಆಟಗಾರರಿದ್ದಾರೆ. ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಉತ್ತಮ ಆಟಗಾರರು ಮತ್ತು ಅವರು ಪ್ರತಿ ಪಂದ್ಯದಲ್ಲೂ ತಮ್ಮನ್ನು ತಾವು ಸಾಬೀತುಪಡಿಸುವ ಅಗತ್ಯವಿಲ್ಲ. ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರ ಪ್ರದರ್ಶನದ ಬಳಿಕ ನಾವು ಪರಿಸ್ಥಿತಿಯನ್ನು ನಿರ್ಣಯಿಸುತ್ತೇವೆ. ನಾವು ವೈಯಕ್ತಿಕ ಪ್ರದರ್ಶನವನ್ನು ನೋಡದೆ ಟ್ರೋಫಿಗಳನ್ನು ಗೆಲ್ಲಲು ಬಯಸುತ್ತೇವೆ. ಅವರು ಆಸ್ಟ್ರೇಲಿಯಾ ಸರಣಿಯಲ್ಲಿ ಮೂರು ಶತಕಗಳನ್ನು ಗಳಿಸಿದರೂ ಅಥವಾ ಯಾವುದೇ ರನ್ ಗಳಿಸದಿದ್ದರೂ, ಅವರು ವಿಶ್ವಕಪ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸರಣಿಯ ನಂತರ ಪರಿಸ್ಥಿತಿಯನ್ನು ಆಧರಿಸಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ನೇರವಾಗಿ ನನ್ನ ಬಳಿ ಹೇಳಬೇಕಿತ್ತು

ಹಾಗೆಯೇ ಇದೇ ಸಮಯದಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡದಿರುವ ಬಗ್ಗೆ ಈಗಾಗಲೇ ಅಸಮಾಧಾನ ಭುಗಿಲೆದಿದ್ದ, ತಂಡವನ್ನು ಆಯ್ಕೆ ಮಾಡುವಾಗ, ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಶಮಿ ಅವರ ಫಿಟ್ನೆಸ್ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಅಗರ್ಕರ್ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಶಮಿ, ನನ್ನ ಫಿಟ್ನೆಸ್ ಬಗ್ಗೆ ಯಾರು ನನ್ನ ಬಳಿ ಕೇಳಿಲ್ಲ ಎಂದಿದ್ದರು. ಇದೀಗ ಶಮಿಯನ್ನು ಕಡೆಗಣಿಸಿರುವ ಬಗ್ಗೆ ಅಗರ್ಕರ್ ಬಳಿ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಅವರು, ‘ಶಮಿ ಟೀಂ ಇಂಡಿಯಾದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅವರಿಗೆ ಏನಾದರೂ ಹೇಳುವುದಿದ್ದರೆ, ಅವರು ಅದನ್ನು ನೇರವಾಗಿ ನನ್ನ ಬಳಿ ಹೇಳಬೇಕಿತ್ತು, ಅದು ನಮ್ಮ ನಡುವಿನ ವಿಷಯವಾಗಿರುತ್ತದೆ.

India vs Australia: ಸ್ಟಾರ್ ಬ್ಯಾಟರ್ ಔಟ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI

ಆದಾಗ್ಯೂ, ಇಂಗ್ಲೆಂಡ್ ಪ್ರವಾಸಕ್ಕೂ ಮೊದಲು, ಶಮಿ ಫಿಟ್ ಆಗಿದ್ದರೆ, ಅವರು ತಂಡದ ಭಾಗವಾಗುತ್ತಿದ್ದರು ಎಂದು ನಾವು ಹೇಳಿದ್ದೆವು. ಆದಾಗ್ಯೂ, ಅವರು ಫಿಟ್ ಆಗಿರಲಿಲ್ಲ. ನಮ್ಮ ದೇಶೀಯ ಋತುವು ಇದೀಗ ಪ್ರಾರಂಭವಾಗಿದೆ. ಅವರ ಫಿಟ್ನೆಸ್ ಹೇಗಿದೆ ಮತ್ತು ಅವರು ಯಾವ ರೀತಿಯ ಫಾರ್ಮ್‌ನಲ್ಲಿದ್ದಾರೆ ಎಂಬುದನ್ನು ನಾವು ನೋಡುತ್ತೇವೆ, ಅದು ಕೆಲವು ಪಂದ್ಯಗಳಲ್ಲಿ ನಮಗೆ ತಿಳಿಯುತ್ತದೆ. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರೆ, ಶಮಿಯಂತಹ ಬೌಲರ್ ಅನ್ನು ನಾವು ಹೇಗೆ ಹೊರಗಿಡಲು ಸಾಧ್ಯ? ಆದಾಗ್ಯೂ, ಕಳೆದ ಆರು ತಿಂಗಳುಗಳಿಂದ ಅವರ ಫಿಟ್ನೆಸ್ ಉತ್ತಮವಾಗಿಲ್ಲ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:59 pm, Fri, 17 October 25