Chris cairns: ನ್ಯೂಜಿಲೆಂಡ್ ಸ್ಟಾರ್ ಕ್ರಿಕೆಟಿಗನಿಗೆ ಮಾರಕ ಕಾಯಿಲೆ..!

| Updated By: ಝಾಹಿರ್ ಯೂಸುಫ್

Updated on: Feb 05, 2022 | 2:38 PM

Chris cairns: 'ಮುಂದೆ ಮತ್ತೊಂದು ಹೋರಾಟವಿದೆ. ಮೊದಲ ಸುತ್ತಿನಲ್ಲಿ ಈ ವಿಷಯವು ಇಲ್ಲಿಗೆ ಕೊನೆಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ನನಗೆ ಕರುಳಿನ ಕ್ಯಾನ್ಸರ್ ಇರುವುದು ದೃಢಪಟ್ಟಿದೆ.

Chris cairns: ನ್ಯೂಜಿಲೆಂಡ್ ಸ್ಟಾರ್ ಕ್ರಿಕೆಟಿಗನಿಗೆ ಮಾರಕ ಕಾಯಿಲೆ..!
Chris cairns
Follow us on

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಕ್ರಿಸ್ ಕೇನ್ಸ್ (Chris cairns)​ ಅವರಿಗೆ ಕರುಳಿನ ಕ್ಯಾನ್ಸರ್ ಇರುವುದು ದೃಢಪಟ್ಟಿದೆ . ಈ ಹಿಂದೆ ಕೇನ್ಸ್ ಕ್ಯಾನ್ಸರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಖುದ್ದು ಕೇನ್ಸ್ ಅವರೇ ಕರುಳಿನ ಕ್ಯಾನ್ಸರ್ ಇರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಕ್ರಿಸ್ ಕೇನ್ಸ್ ಈಗಾಗಲೇ ಅನೇಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ. 51 ವರ್ಷ ವಯಸ್ಸಿನ ಮಾಜಿ ಆಟಗಾರ ಇತ್ತೀಚೆಗೆ ನಾಲ್ಕು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಸಮಯದಲ್ಲಿ ಅವರು ಬೆನ್ನುಮೂಳೆಯ ಪಾರ್ಶ್ವವಾಯುವಿಗೆ ಒಳಗಾಗಬೇಕಾಯಿತು. ಇದರಿಂದಾಗಿ ಅವರ ಎಡಭಾಗವು ಪಾರ್ಶ್ವವಾಯುವಿಗೆ ತುತ್ತಾಗಿತ್ತು. ಇದರೊಂದಿಗೆ ಇದೀಗ ಕರುಳಿನ ಕ್ಯಾನ್ಸರ್ ಕೂಡ ಇರುವುದು ಗೊತ್ತಾಗಿದೆ. ಸದ್ಯ ಅವರನ್ನು ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ರಿಸ್ ಕೇನ್ಸ್ 1989 ರಿಂದ 2006 ರ ನಡುವೆ ನ್ಯೂಜಿಲೆಂಡ್‌ ಪರ 62 ಟೆಸ್ಟ್ ಮತ್ತು 215 ಏಕದಿನ ಪಂದ್ಯಗಳನ್ನು ಆಡಿದ್ದಾರೆ . ತಮ್ಮ ವೃತ್ತಿಜೀವನದ ಅವಧಿಯಲ್ಲಿ ವಿಶ್ವದ ಅಗ್ರ ದರ್ಜೆಯ ಆಲ್‌ರೌಂಡರ್ ಆಟಗಾರರಾಗಿ ಗುರುತಿಸಿಕೊಂಡಿದ್ದರು. 2006 ರ ಬಳಿಕ ಕ್ರಿಕೆಟ್ ಅಂಗಳದಿಂದ ದೂರ ಉಳಿದ ಕೇನ್ಸ್ ಇದೀಗ ಅನಾರೋಗ್ಯ ಸಂಬಂಧಿ ಸಮಸ್ಯೆಯಿಂದ ಸುದ್ದಿಯಾಗುತ್ತಿರುವುದು ದುರಂತ.

ಈ ಬಗ್ಗೆ ಮಾತನಾಡಿರುವ ಕ್ರಿಸ್ ಕೇನ್ಸ್ ‘ಮುಂದೆ ಮತ್ತೊಂದು ಹೋರಾಟವಿದೆ. ಆದರೆ ಮೊದಲ ಸುತ್ತಿನಲ್ಲಿ ಈ ವಿಷಯವು ಇಲ್ಲಿಗೆ ಕೊನೆಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ನನಗೆ ಕರುಳಿನ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಇದೊಂದು ದೊಡ್ಡ ಆಘಾತ. ಹಾಗಾಗಿ ವೈದ್ಯರು ಮತ್ತು ತಜ್ಞರೊಂದಿಗೆ ಎರಡನೇ ಸುತ್ತಿನ ಮಾತುಕತೆಗೆ ನನ್ನನ್ನು ನಾನು ಸಿದ್ಧಪಡಿಸುತ್ತಿದ್ದೇನೆ. ನಾನು ಇನ್ನೂ ಜೀವಂತವಾಗಿದ್ದೇನೆ ಮತ್ತು ನಾನು ಎಷ್ಟು ಅದೃಷ್ಟಶಾಲಿ ಎಂದು ನಾನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇನೆ ಎಂದು ಕ್ರಿಸ್ ಕೇನ್ಸ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಆಗಸ್ಟ್ 2021 ರಲ್ಲಿ ಕ್ರಿಸ್ ಕೇನ್ಸ್ ಹೃದಯಕ್ಕೆ ಸಂಬಂಧಿಸಿದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವುದು ತಿಳಿದು ಬಂದಿತ್ತು. ಹೀಗಾಗಿ ಸೆಪ್ಟೆಂಬರ್ 2021 ರಲ್ಲಿ ತುರ್ತು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ದುರಾದೃಷ್ಟ ಈ ಚಿಕಿತ್ಸೆಯ ಸಂದರ್ಭದಲ್ಲಿ ಕ್ರಿಸ್ ಕೇನ್ಸ್ ಪಾರ್ಶ್ವವಾಯುವಿಗೆ ಒಳಗಾದರು. ಇದರಿಂದ ಅವರ ಎರಡೂ ಕಾಲುಗಳು ನಿಷ್ಕ್ರಿಯಗೊಂಡಿವೆ. ಇದೀಗ ಮಾರಕ ಮಹಾಮಾರಿ ಕ್ಯಾನ್ಸರ್ ಇರುವುದು ದೃಢಪಟ್ಟಿದೆ.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್

(Chris cairns reveals he has bowel cancer)