Chris Gayle: ಅತೀ ವೇಗದ ಅರ್ಧಶತಕ: ಲೆಜೆಂಡ್ಸ್ ಲೀಗ್ನಲ್ಲೂ ಗೇಲ್ ಅಬ್ಬರ..!
Chris Gayle: ಈ ಬೃಹತ್ ಗುರಿ ಬೆನ್ನತ್ತಿದ ಭಿಲ್ವಾರ ಕಿಂಗ್ ತಂಡದ ಪರ ಆರಂಭಿಕ ಆಟಗಾರ ವಿಲಿಯಮ್ (40) ಉತ್ತಮ ಬ್ಯಾಟಿಂಗ್ ಮಾಡಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಯೂಸುಫ್ ಪಠಾಣ್ ಕೇವಲ 18 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 39 ರನ್ ಚಚ್ಚಿದರು.
ಜೋಧ್ಪುರದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ (Chris Gayle) ಅಕ್ಷರಶಃ ಅಬ್ಬರಿಸಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಭಿಲ್ವಾರಾ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಜಯಿಸಿದ ಭಿಲ್ವಾರ ತಂಡದ ನಾಯಕ ಇರ್ಫಾನ್ ಪಠಾಣ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಗುಜರಾತ್ ಜೈಂಟ್ಸ್ ಪರ ವೆಸ್ಟ್ ಇಂಡೀಸ್ ಕ್ರಿಕೆಟಿಗರಾದ ಲೆಂಡ್ಲ್ ಸಿಮನ್ಸ್ ಹಾಗೂ ಕ್ರಿಸ್ ಗೇಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಅತ್ತ ಗೇಲ್ ಆಗಮಿಸುತ್ತಿದ್ದಂತೆ ಹೊಸ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೂ ಯುನಿವರ್ಸ್ ಬಾಸ್ ನಿರಾಸೆ ಮೂಡಿಸಲಿಲ್ಲ.
ಎಂದಿನಂತೆ ಮೊದಲ ಓವರ್ನಿಂದಲೇ ಸ್ಪೋಟಕ ಇನಿಂಗ್ಸ್ ಆರಂಭಿಸಿದ ಗೇಲ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಗೇಲ್ ಬ್ಯಾಟ್ ಮೇಲೆತ್ತಿದರು. ಲೆಜೆಂಡ್ಸ್ ಲೀಗ್ನಲ್ಲಿ ಇದು ಅತೀ ವೇಗದ ಅರ್ಧಶತಕ ಎಂಬುದು ವಿಶೇಷ.
ಅರ್ಧಶತಕದ ಬಳಿಕ ಮತ್ತಷ್ಟು ಅಬ್ಬರಿಸಿದ ಗೇಲ್ 3 ಸಿಕ್ಸ್ ಹಾಗೂ 9 ಫೋರ್ನೊಂದಿಗೆ 40 ಎಸೆತಗಳಲ್ಲಿ 68 ರನ್ ಚಚ್ಚಿದರು. ಇದೇ ವೇಳೆ ಶೇನ್ ವಾಟ್ಸನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಯೂಸುಫ್ ಪಠಾಣ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮತ್ತೊಂದೆಡೆ 37 ಎಸೆತಗಳಲ್ಲಿ ಯಶ್ಪಾಲ್ ಸಿಂಗ್ 58 ರನ್ ಬಾರಿಸುವ ಮೂಲಕ ನಿಗದಿತ 20 ಓವರ್ಗಳಲ್ಲಿ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 186 ಕ್ಕೆ ತಂದು ನಿಲ್ಲಿಸಿದರು.
ಈ ಬೃಹತ್ ಗುರಿ ಬೆನ್ನತ್ತಿದ ಭಿಲ್ವಾರ ಕಿಂಗ್ ತಂಡದ ಪರ ಆರಂಭಿಕ ಆಟಗಾರ ವಿಲಿಯಮ್ (40) ಉತ್ತಮ ಬ್ಯಾಟಿಂಗ್ ಮಾಡಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಯೂಸುಫ್ ಪಠಾಣ್ ಕೇವಲ 18 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 39 ರನ್ ಚಚ್ಚಿದರು. ಅಂತಿಮ ಹಂತದಲ್ಲಿ ಇರ್ಫಾನ್ ಪಠಾಣ್ 14 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 24 ರನ್ ಬಾರಿಸಿದರು. ಈ ಮೂಲಕ 19.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ತಂಡವನ್ನು 187 ರನ್ಗಳ ಗುರಿ ಮುಟ್ಟಿಸಿದರು.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್:
ಗುಜರಾತ್ ಜೈಂಟ್ಸ್: ಕೆವಿನ್ ಓ ಬ್ರಿಯಾನ್ , ಕ್ರಿಸ್ ಗೇಲ್ , ಲೆಂಡ್ಲ್ ಸಿಮನ್ಸ್ , ಪಾರ್ಥಿವ್ ಪಟೇಲ್ (ನಾಯಕ) , ಯಶ್ಪಾಲ್ ಸಿಂಗ್ , ತಿಸಾರ ಪೆರೇರಾ , ಗ್ರೇಮ್ ಸ್ವಾನ್ , ರಾಯದ್ ಎಂರಿಟ್ , ಕೆಪಿ ಅಪ್ಪಣ್ಣ , ಮಿಚೆಲ್ ಮೆಕ್‌ಕ್ಲೆನಾನ್ , ಅಶೋಕ್ ದಿಂಡಾ , ಜೋಗಿಂದರ್ ಶರ್ಮಾ
ಭಿಲ್ವಾರ ಕಿಂಗ್ಸ್: ಮೊರ್ನೆ ವ್ಯಾನ್ ವೈಕ್, ವಿಲಿಯಂ ಪೋರ್ಟರ್‌ಫೀಲ್ಡ್ , ಶೇನ್ ವಾಟ್ಸನ್ , ಜೆಸಲ್ ಕರಿಯಾ , ಯೂಸುಫ್ ಪಠಾಣ್ , ರಾಜೇಶ್ ಬಿಷ್ಣೋಯ್ , ಇರ್ಫಾನ್ ಪಠಾಣ್ (ನಾಯಕ) , ಎಸ್ ಶ್ರೀಶಾಂತ್ , ಫಿಡೆಲ್ ಎಡ್ವರ್ಡ್ಸ್ , ಮಾಂಟಿ ಪನೇಸರ್ , ಸುದೀಪ್ ತ್ಯಾಗಿ , ನಿಕ್ ಕಾಂಪ್ಟನ್