ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಅತ್ಯಂತ ವಿನಾಶಕಾರಿ ಬ್ಯಾಟ್ಸ್‌ಮನ್ ಎಂದರೆ ಅದು ಕ್ರಿಸ್ ಗೇಲ್. ಇದಕ್ಕೆ ಸಾಕ್ಷಿ ಅವರು ಐಪಿಎಲ್ನಲ್ಲಿ ಸಿಡಿಸಿರುವ ಸಿಕ್ಸ್ಗಳ ಸಂಖ್ಯೆ. ಐಪಿಎಲ್ನಲ್ಲಿ 141 ಇನಿಂಗ್ಸ್ ಆಡಿರುವ ಗೇಲ್ ಬರೋಬ್ಬರಿ 357 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ವಿಶೇಷ ಎಂದರೆ ಕ್ರಿಸ್ ಗೇಲ್ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್ 300 ಸಿಕ್ಸ್ಗಳ ಗಡಿ ಮುಟ್ಟಿಲ್ಲ. ಬೌಲರ್ಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದ ಗೇಲ್, ರವಿಚಂದ್ರನ್ ಅಶ್ವಿನ್ ಅವರನ್ನು ಎದುರಿಸಲು ತಡಕಾಡುತ್ತಿದ್ದರು. ಅದರಲ್ಲೂ ಅಶ್ವಿನ್ ದಾಳಿಗೆ ಇಳಿದರೆ ಸಾಕು, ಕ್ರಿಸ್ ಗೇಲ್ ಅವರ ಕಾಲುಗಳು ನಡುಗುತ್ತಿದ್ದವು. ಹೀಗೆ ಹೇಳಿರುವುದು ಮತ್ಯಾರೂ ಅಲ್ಲ, ಟೀಮ್ ಇಂಡಿಯಾದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್.
ಚೆನ್ನೈನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕ್ರಿಸ್ ಶ್ರೀಕಾಂತ್, ಕ್ರಿಸ್ ಗೇಲ್ ಬೌಂಡರಿ ಮತ್ತು ಸಿಕ್ಸರ್ ಬಾರಿಸಬಲ್ಲರು, ಆದರೆ ಅವರು ಆರ್. ಅಶ್ವಿನ್ ಅವರನ್ನು ನಿಭಾಯಿಸಲು ಸಾಧ್ಯವಾಗಲೇ ಇಲ್ಲ. ಗೇಲ್ ಅವರನ್ನು ಔಟ್ ಮಾಡಲು ಅಶ್ವಿನ್ ಅವರಿಗೆ ಕೇವಲ ನಾಲ್ಕು ಎಸೆತಗಳು ಸಾಕಾಗಿದ್ದವು.
ರವಿಚಂದ್ರನ್ ಅಶ್ವಿನ್ ದಾಳಿಗಿಳಿದರೆ ಸಾಕು, ಕ್ರಿಸ್ ಗೇಲ್ ಅವರ ಕಾಲುಗಳು ನಡುಗುತ್ತಿದ್ದವು. ಅಶ್ವಿನ್ ಅಂತಹ ಪ್ರತಿಭಾವಂತ ಬೌಲರ್. ಅವರನ್ನು ಚಾಂಪಿಯನ್ ಬೌಲರ್ ಆಗಿ ಮಾಡಿದ್ದಕ್ಕಾಗಿ ಶ್ರೀಕಾಂತ್, ಎಂಎಸ್ ಧೋನಿ ಅವರನ್ನು ಶ್ಲಾಘಿಸಿದರು.
ಧೋನಿ ಟಿ20 ಕ್ರಿಕೆಟ್‌ನಲ್ಲಿ ಅಶ್ವಿನ್ ಅವರ ಪ್ರತಿಭೆಯನ್ನು ಗುರುತಿಸಿದರು. ಅಲ್ಲದೆ ಅವರನ್ನು ಮ್ಯಾಚ್ ವಿನ್ನರ್ ಬೌಲರ್ ಆಗಿ ರೂಪಿಸಿದರು. ನಂತರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಶ್ರೇಷ್ಠತೆಯನ್ನು ತೋರಿಸಿದರು. ಅಶ್ವಿನ್ ಉತ್ತಮ ಬೌಲರ್ ಮಾತ್ರವಲ್ಲ, ಅತ್ಯುತ್ತಮ ಬ್ಯಾಟ್ಸ್‌ಮನ್ ಕೂಡ ಎಂದು ಶ್ರೀಕಾಂತ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಐಪಿಎಲ್ನಲ್ಲಿ ಕ್ರಿಸ್ ಗೇಲ್, ಅಶ್ವಿನ್ ಅವರ 64 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 53 ರನ್ಗಳು ಮಾತ್ರ. ಅಂದರೆ ಅಶ್ವಿನ್ ವಿರುದ್ಧ ಗೇಲ್ ಅಬ್ಬರಿಸಿಯೇ ಇಲ್ಲ ಎನ್ನಬಹುದು.
ಏಕೆಂದರೆ ಅಶ್ವಿನ್ ವಿರುದ್ಧ ಕ್ರಿಸ್ ಗೇಲ್ ಅವರ ಸ್ಟ್ರೈಕ್ ರೇಟ್ ಕೇವಲ 82.8. ಹಾಗೆಯೇ 10.6 ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ. ಇದರ ನಡುವೆ ಅಶ್ವಿನ್ 5 ಬಾರಿ ಕ್ರಿಸ್ ಗೇಲ್ ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹೀಗಾಗಿ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರ ಅತ್ಯುತ್ತಮ ಪ್ರತಿಸ್ಪರ್ಧಿಯಾಗಿ ಅಶ್ವಿನ್ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ: IPL 2025: ಬರೆದಿಟ್ಕೊಳ್ಳಿ, ಈ ಸಲ ಕಪ್ ಇವರದ್ದೆ… ಎಬಿಡಿ ಭವಿಷ್ಯ
ಇದೀಗ ರವಿಚಂದ್ರನ್ ಅಶ್ವಿನ್ ಅಶ್ವಿನ್ 10 ವರ್ಷಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ಗೆ ಮರಳಲಿದ್ದಾರೆ. ಅನುಭವಿ ಆಲ್‌ರೌಂಡರ್ ಅವರನ್ನು ಮೆಗಾ ಹರಾಜಿನಲ್ಲಿ ಸಿಎಸ್ಕೆ ಫ್ರಾಂಚೈಸಿ 9.75 ಕೋಟಿ ರೂ.ಗೆ ಖರೀದಿಸಿದ್ದಾರೆ. ಹೀಗಾಗಿ ಈ ಬಾರಿ ಅಶ್ವಿನ್ ಸಿಎಸ್ಕೆ ಪರ ಕಣಕ್ಕಿಳಿಯಲಿದ್ದಾರೆ.