ಪಾಕಿಸ್ತಾನ್ ಪ್ಲೇಯರ್ಸ್ ವೇತನ ಕಾರ್ಮಿಕರ ಸಂಬಳಕ್ಕಿಂತ ಕಡಿಮೆ..!
ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಸ್ಪಷ್ಟ. ಇದೇ ಕಾರಣದಿಂದಾಗಿ ಇದೀಗ ದೇಶೀಯ ಟೂರ್ನಿಗಳಲ್ಲಿ ಕಣಕ್ಕಿಳಿಯುವ ಆಟಗಾರರ ವೇತನವನ್ನು ಕಡಿತ ಮಾಡಿದೆ. ಅದರಲ್ಲೂ ಮಹಿಳಾ ಆಟಗಾರ್ತಿಯರ ವೇತನಕ್ಕೂ ಕತ್ತರಿ ಹಾಕಿದೆ. ಈ ಮೂಲಕ ಆರ್ಥಿಕ ಸಂಕಷ್ಟದಿಂದ ಪಾರಾಗಲು ಪಿಸಿಬಿ ಪ್ಲ್ಯಾನ್ ರೂಪಿಸುತ್ತಿದೆ.

ಚಾಂಪಿಯನ್ಸ್ ಟ್ರೋಫಿ ಆರಂಭವಾದಗಿನಿಂದಲೂ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸುದ್ದಿಯಲ್ಲಿದೆ. ಇದೀಗ ಚಾಂಪಿಯನ್ಸ್ ಟ್ರೋಫಿ ಮುಗಿದು ಪಾಕ್ ತಂಡ ಮತ್ತೊಂದು ಸರಣಿ ಆಡಲು ಶುರು ಮಾಡಿದರೂ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮಾತ್ರ ಸುದ್ದಿಯಲ್ಲೇ ಮುಂದುವರೆದಿದೆ. ಆದರೆ ಈ ಬಾರಿ ಸುದ್ದಿಯಾಗಿದ್ದು ಆಟಗಾರರ ವೇತನ ಕಡಿತದಿಂದ.
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೆಲ ದಿನಗಳ ಹಿಂದೆ ದೇಶೀಯ ಕ್ರಿಕೆಟ್ ಆಡುವ ಆಟಗಾರರ ವೇತವನ್ನು ಕಡಿತಗೊಳಿಸಿತ್ತು. ಈ ಹಿಂದೆ ಆಟಗಾರರಿಗೆ ಪಂದ್ಯ ಶುಲ್ಕವಾಗಿ 40,000 ರೂ. (PKR) ನೀಡಲಾಗುತ್ತಿತ್ತು. ಆದರೆ ಈ ಬಾರಿಯಿಂದ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯುವ ಆಟಗಾರರಿಗೆ 10,000 ರೂ. ಪಂದ್ಯ ಶುಲ್ಕ ನೀಡಲು ಪಿಸಿಬಿ ನಿರ್ಧರಿಸಿದೆ.
ಈ ವೇತನ ಕಡಿತದ ಸುದ್ದಿಯು ಚರ್ಚೆಯಲ್ಲಿರುವಾಗಲೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮತ್ತೊಂದು ಹೆಜ್ಜೆಯನ್ನಿಟ್ಟಿದೆ. ಅದು ಸಹ ಮಹಿಳಾ ಕ್ರಿಕೆಟಿಗರ ವೇತನಕ್ಕೆ ಕತ್ತರಿ ಹಾಕುವ ಮೂಲಕ. ಪಾಕಿಸ್ತಾನದ ದೇಶೀಯ ಮಹಿಳಾ ಕ್ರಿಕೆಟಿಗರ ಪಂದ್ಯ ಶುಲ್ಕ 25,000 ರೂ. (PKR) ನಿಂದ 5000 ರೂ. ಕಡಿತ ಮಾಡಲಾಗಿದೆ.
ಅಲ್ಲದೆ ಇನ್ಮುಂದೆ ದೇಶೀಯ ಟೂರ್ನಿ ಆಡುವ ಮಹಿಳಾ ಆಟಗಾರ್ತಿಯರಿಗೆ 20,000 ರೂ. (PKR) ಮಾತ್ರ ನೀಡುವುದಾಗಿ ಪಿಸಿಬಿ ತಿಳಿಸಿದೆ. 20 ಸಾವಿರ ಪಿಕೆಆರ್ ಎಂದರೆ ಭಾರತೀಯ ರೂಪಾಯಿ ಮೌಲ್ಯ ಕೇವಲ 6000 ರೂ. ಮಾತ್ರ. ಈ ಮೂಲಕ ಮಹಿಳಾ ಕ್ರಿಕೆಟಿಗರ ವೇತನಕ್ಕೂ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೈ ಹಾಕಿದೆ.
ವೇತನ ವಿಳಂಬ, ಕಡಿಮೆ ಪಾವತಿ:
ಪಾಕಿಸ್ತಾನ್ ದೇಶೀಯ ಸೀಸನ್ ಒಪ್ಪಂದಗಳ ಪಟ್ಟಿಯಲ್ಲಿ 10 ಪಾಕಿಸ್ತಾನಿ ಆಟಗಾರ್ತಿಯರು, 62 ಉದಯೋನ್ಮುಖ ಆಟಗಾರ್ತಿಯರು ಮತ್ತು 18 ಅಂಡರ್-19 ಆಟಗಾರ್ತಿಯರು ಇದ್ದಾರೆ. ಕ್ಯಾಪ್ಡ್ ಆಟಗಾರ್ತಿಯರ ಪಟ್ಟಿಯಲ್ಲಿ ನಿದಾ ದಾರ್ ಮತ್ತು ಆಲಿಯಾ ರಿಯಾಜ್ ಕೂಡ ಸೇರಿದ್ದಾರೆ. ಇದಾಗ್ಯೂ ಅವರು ಕೇಂದ್ರ ಒಪ್ಪಂದದಲ್ಲಿ ಇಲ್ಲ ಎಂಬುದು ವಿಶೇಷ.
ಇದಲ್ಲದೆ, ದೇಶೀಯ ಒಪ್ಪಂದಗಳು ಸುಮಾರು ಒಂಬತ್ತು ತಿಂಗಳು ವಿಳಂಬವಾಗಿವೆ. ಅಲ್ಲದೆ ಆಟಗಾರ್ತಿಯರಿಗೆ ಮಾಸಿಕ 35,000 PKR, ಅಂದರೆ 10000 ರೂ.ಗಳ ವೇತನವನ್ನು ಮಾತ್ರ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದು ಪಾಕಿಸ್ತಾನದಲ್ಲಿ ಕಾರ್ಮಿಕರಿಗೆ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ (ರೂ. 11444) ಕಡಿಮೆ ಎಂಬುದೇ ಅಚ್ಚರಿ.
ಇದನ್ನೂ ಓದಿ: IPL 2025: ಬರೆದಿಟ್ಕೊಳ್ಳಿ, ಈ ಸಲ ಕಪ್ ಇವರದ್ದೆ… ಎಬಿಡಿ ಭವಿಷ್ಯ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಈ ನಿರ್ಧಾರಗಳು ಮಹಿಳಾ ಕ್ರಿಕೆಟಿಗರ ತೊಂದರೆಗಳನ್ನು ಹೆಚ್ಚಿಸಿವೆ. ಅಲ್ಲದೆ ಕಡಿಮೆ ಸಂಬಳ ಮತ್ತು ಕಡಿಮೆ ಅವಕಾಶಗಳಿಂದಾಗಿ, ಅನೇಕ ಪ್ರತಿಭಾನ್ವಿತ ಆಟಗಾರ್ತಿಯರು ಕ್ರಿಕೆಟ್ ತೊರೆಯುವ ಸಾಧ್ಯತೆ ಹೆಚ್ಚಿದೆ.