AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್ ಕೋಚ್ ವಿರುದ್ಧ 6 ಪ್ರಕರಣ ದಾಖಲು; 3 ಪ್ರಕರಣಗಳಲ್ಲಿ 99 ವರ್ಷ ಜೈಲು ಶಿಕ್ಷೆ..!

POCSO Verdict: ತಿರುವನಂತಪುರಂ ಕ್ರಿಕೆಟ್ ಕೋಚ್ ಮನು, ಮಹಿಳಾ ಆಟಗಾರ್ತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೊ ನ್ಯಾಯಾಲಯದಿಂದ ಮೂರು ಪ್ರಕರಣಗಳಲ್ಲಿ ಒಟ್ಟು 99 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ವಿಡಿಯೋ ರೆಕಾರ್ಡಿಂಗ್‌ಗಳನ್ನು ಬಳಸಿ ಬೆದರಿಸಿ, ದೌರ್ಜನ್ಯ ಎಸಗಿದ್ದನು. ಆರು ಪ್ರಕರಣಗಳಲ್ಲಿ ಮೂರರ ವಿಚಾರಣೆ ಮುಕ್ತಾಯಗೊಂಡಿದ್ದು, ಮನು ತನ್ನ ಜೀವನಪರ್ಯಂತ ಜೈಲಿನಲ್ಲೇ ಕಳೆಯಬೇಕಾಗಿದೆ.

ಕ್ರಿಕೆಟ್ ಕೋಚ್ ವಿರುದ್ಧ 6 ಪ್ರಕರಣ ದಾಖಲು; 3 ಪ್ರಕರಣಗಳಲ್ಲಿ 99 ವರ್ಷ ಜೈಲು ಶಿಕ್ಷೆ..!
Cricket Coach
ಪೃಥ್ವಿಶಂಕರ
|

Updated on:Jun 29, 2026 | 4:20 PM

Share

ಕ್ರಿಕೆಟ್ ತರಬೇತಿಗೆಂದು ಬರುತ್ತಿದ್ದ ಮಹಿಳಾ ಆಟಗಾರ್ತಿರ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ ಆರೋಪವನ್ನು ಹೊತ್ತಿದ್ದ ಕ್ರಿಕೆಟ್ ಕೋಚ್​ಗೆ ತಿರುವನಂತಪುರಂನ ಪೋಕ್ಸೊ ತ್ವರಿತ ನ್ಯಾಯಾಲಯವು ಸಧ್ಯಕ್ಕೆ ಮೂರು ಪ್ರಕರಣಗಳಲ್ಲಿ ಒಟ್ಟು 99 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ. ಆರೋಪಿಯ ವಿರುದ್ಧ ಪ್ರಸ್ತುತ 6 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿದ್ದು, ಮೂರು ಪ್ರಕರಣಗಳ ವಿಚಾರಣೆ ನಡೆಸಿರುವ ನ್ಯಾಯಾಲಯ ಆರೋಪಿತ ಕೋಚ್​, ಜೀವನ ಪರ್ಯಂತ ಜೈಲಿನಲ್ಲಿಯೇ ಕೊಳೆಯುವ ಶಿಕ್ಷೆಯನ್ನು ವಿಧಿಸಿದೆ.

ತರಬೇತಿಗೆ ಬರುತ್ತಿದ್ದವರಿಗೆ ಲೈಂಗಿಕ ಕಿರುಕುಳ

ತಿರುವನಂತಪುರದ ವಲ್ಲಕಡವು ಪ್ರದೇಶದ ಮನು ಎಂಬ ಹೆಸರಿನ ಕ್ರಿಕೆಟ್ ಕೋಚ್​ ಮೇಲೆ ಈ ಆರೋಪ ಹೊರಿಸಲಾಗಿದೆ. ಕೇರಳ ಕ್ರಿಕೆಟ್ ಅಸೋಸಿಯೇಷನ್ ​​ಪರವಾಗಿ ಕ್ರಿಕೆಟ್ ತರಬೇತಿ ನೀಡುತ್ತಿದ್ದ ಮನು ಅವರ ಬಳಿ 2018 ರಲ್ಲಿ ಯುವ ಆಟಗಾರ್ತಿಯೊಬ್ಬರು ತರಬೇತಿ ಪಡೆಯುತ್ತಿದ್ದರು. ಆ ಸಮಯದಲ್ಲಿ, ಮನು ಆಟಗಾರ್ತಿಗೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕ್ರಿಕೆಟ್ ಕೋಚ್​ನ ಈ ನಡೆಯಿಂದ ಆಘಾತಕ್ಕೊಳಗಾದ ಯುವತಿ ಈ ಘಟನೆಯ ನಂತರ ತರಬೇತಿಗೆ ಬರುವುದನ್ನು ನಿಲ್ಲಿಸಿದ್ದಾರೆ. ತನ್ನ ಹೀನ ಕೃತ್ಯವನ್ನು ಇಲ್ಲಿಗೆ ನಿಲ್ಲಿಸದ ಮನು ಮತ್ತಷ್ಟು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಒಟ್ಟು 6 ಪ್ರಕರಣ ದಾಖಲು

ತರಬೇತಿಗೆಂದು ಬರುತ್ತಿದ್ದ ಯುವತಿಯರನ್ನು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಮನು, ಯುವತಿಯರ ವಿಡಿಯೋಗಳನ್ನು ರೆಕಾರ್ಡ್​ ಮಾಡಿಕೊಂಡು ಅವುಗಳನ್ನು ಮುಂದಿಟ್ಟುಕೊಂಡು ಆ ಯುವತಿಯರ ಮೇಲೆ ನಿರಂತರವಾಗಿ ಲೈಂಗಕ ದೌರ್ಜನ್ಯ ನಡೆಸಿರುವುದಾಗಿ ಸಂತ್ರಸ್ತ ಯುವತಿ ತಿರುವನಂತಪುರಂದ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಒಂದು ದೂರು ದಾಖಲಾದ ಬಳಿಕ ಇದರಿಂದ ಪ್ರೇರಿತರಾದ ಉಳಿದ ಸಂತ್ರಸ್ತೆಯರು ಕೂಡ ದೂರುಗಳನ್ನು ದಾಖಲಿಸಿದ್ದಾರೆ.

ದೂರಿನನ್ವಯ ಆಪಾದಿತ ಕೋಚ್ ಮನುವನ್ನು ತಿರುವನಂತಪುರಂ ಪೊಲೀಸರು ಬಂದಿಸಿದ್ದಾರೆ. ಮನು ವಿರುದ್ಧ ಪ್ರಸ್ತುತ 6 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ವಿಚಾರಣೆ ತಿರುವನಂತಪುರಂ ಪೋಕ್ಸೊ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಮೊದಲ ಪ್ರಕರಣದಲ್ಲಿ ಮನುಗೆ ಕಳೆದ ತಿಂಗಳು 16 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿತ್ತು. ನಂತರ ಜೂನ್ 25 ರಂದು ನಡೆದಿದ್ದ ಎರಡನೇ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶೆ ಅಂಜು ಮೀರಾ ಬಿರ್ಲಾ, ಮನುಗೆ 35 ವರ್ಷ ಜೈಲು ಶಿಕ್ಷೆ ಮತ್ತು 66,000 ರೂ. ದಂಡ ವಿಧಿಸಿದ್ದರು.

3 ಪ್ರಕರಣಗಳಲ್ಲಿ 99 ವರ್ಷ ಜೈಲು ಶಿಕ್ಷೆ

ಇನ್ನು ಮೂರನೇ ಪ್ರಕರಣದಲ್ಲಿ ಆರೋಪಿತನಿಗೆ, ನ್ಯಾಯಾಧೀಶೆ ಅಂಜು ಮೀರಾ ಬಿರ್ಲಾ 48 ವರ್ಷ ಜೈಲು ಶಿಕ್ಷೆ ಮತ್ತು 79 ಸಾವಿರ ರೂ. ದಂಡ ವಿಧಿಸಿದ್ದಾರೆ. ಹಿಂದಿನ ಪ್ರಕರಣಗಳ ಶಿಕ್ಷೆ ಪೂರ್ಣಗೊಂಡ ನಂತರವೇ ಈ ಪ್ರಕರಣದ ಶಿಕ್ಷೆ ಆರಂಭವಾಗಲಿದೆ. ಅದರಂತೆ, 3 ಪ್ರಕರಣಗಳಿಂದ ಆರೋಪಿಗೆ ಒಟ್ಟು 99 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಉಳಿದಂತೆ 4 ನೇ ಪ್ರಕರಣದಲ್ಲಿಯೂ ಮನು ತಪ್ಪಿತಸ್ಥನೆಂದು ಸಾಬೀತಾಗಿದ್ದು, ಆ ಪ್ರಕರಣದ ಶಿಕ್ಷೆಯನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Mon, 29 June 26

Follow Us