Pahalgam Attack: ಪಹಲ್ಗಾಮ್​ ದಾಳಿಗೆ ಕಂಬನಿ ಮಿಡಿದ ಕ್ರಿಕೆಟಿಗರು

ಜಮ್ಮು- ಕಾಶ್ಮೀರದ ಪಹಲ್ಗಾಮ್​​ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ. ಈ ಭೀಕರ ದಾಳಿಯನ್ನು ಖಂಡಿಸಿ ಟೀಮ್ ಇಂಡಿಯಾದ ಹಾಲಿ ಹಾಗೂ ಮಾಜಿ ಆಟಗಾರರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

Pahalgam Attack: ಪಹಲ್ಗಾಮ್​ ದಾಳಿಗೆ ಕಂಬನಿ ಮಿಡಿದ ಕ್ರಿಕೆಟಿಗರು
Kl Rahul - Sachin - Gill

Updated on: Apr 23, 2025 | 1:00 PM

Pahalgam Terror Attack: ಏಪ್ರಿಲ್ 22 ರಂದು (ಮಂಗಳವಾರ) ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್​ನ ಬೈಸರನ್ ಹುಲ್ಲುಗಾವಲಿನಲ್ಲಿ ಉಗ್ರರು ಅಟ್ಟಹಾಸ ಮರೆದಿದ್ದಾರೆ. ಪ್ರವಾಸಿಗರನ್ನು ಕೇಂದ್ರೀಕರಿಸಿ ನಡೆದ ಭಯೋತ್ಪಾದಕರ ಈ ದಾಳಿಯಿಂದಾಗಿ 26 ಭಾರತೀಯರು ಸಾವನ್ನಪ್ಪಿದ್ದಾರೆ. 2019 ರಲ್ಲಿ ನಡೆದ ಪುಲ್ವಾಮಾ ಬಾಂಬ್ ದಾಳಿಯ ನಂತರ ನಡೆದ ಅತ್ಯಂತ ಭೀಕರ ದಾಳಿ ಇದಾಗಿದ್ದು, ಈ ಘಟನೆಯಿಂದಾಗಿ ಇಡೀ ದೇಶವೇ ಬೆಚ್ಚಿ ಬಿದ್ದಿದೆ.

ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಟೀಮ್ ಇಂಡಿಯಾ ಕ್ರಿಕೆಟಿಗರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ ಮೃತಪಟ್ಟ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಗ್ಗೆ ಕೇಳಿ ಹೃದಯ ವಿದ್ರಾವಕವಾಗಿದೆ. ಅಸುನೀಗಿದವರಿಗೆ ಮತ್ತು ಅವರ ಕುಟುಂಬಗಳೊಂದಿಗೆ ನನ್ನ ಪ್ರಾರ್ಥನೆ ಇದೆ. ಈ ರೀತಿಯ ಹಿಂಸಾಚಾರಕ್ಕೆ ನಮ್ಮ ದೇಶದಲ್ಲಿ ಸ್ಥಾನವಿಲ್ಲ ಎಂದು ಶುಭ್​ಮನ್ ಗಿಲ್ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ಹೃದಯ ವಿದ್ರಾವಕವಾಯಿತು. ಬಲಿಪಶುಗಳ ಕುಟುಂಬಗಳೊಂದಿಗೆ ಸದಾ ನಿಲ್ಲುವೆ. ಶಾಂತಿ ಮತ್ತು ಶಕ್ತಿಗಾಗಿ ಪ್ರಾರ್ಥಿಸುತ್ತೇನೆ ಎಂದು ಕೆಎಲ್ ರಾಹುಲ್ ಬರೆದುಕೊಂಡಿದ್ದಾರೆ.

ಮೃತರ ಕುಟುಂಬಗಳಿಗಾಗಿ ಪ್ರಾರ್ಥಿಸುತ್ತೇನೆ. ಇದಕ್ಕೆ ಕಾರಣರಾದವರು ಬೆಲೆ ತೆರಬೇಕಾಗುತ್ತದೆ. ಭಾರತ ತಿರುಗೇಟು ನೀಡಲಿದೆ ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ದಾಳಿಯಿಂದ ತೀವ್ರ ದುಃಖವಾಗಿದೆ. ಬಲಿಯಾದವರಿಗೆ ಮತ್ತು ಅವರ ಕುಟುಂಬಗಳ ಶಕ್ತಿಗಾಗಿ ಪ್ರಾರ್ಥಿಸುತ್ತೇನೆ. ಎಲ್ಲರೂ ಭರವಸೆಯೊಂದಿಗೆ ಜೊತೆಗೆ ನಿಲ್ಲೋಣ ಎಂದು ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಬರೆದುಕೊಂಡಿದ್ದಾರೆ.

ಪ್ರತಿ ಬಾರಿ ಮುಗ್ಧ ಜೀವ ಕಳೆದುಹೋದಾಗಲೂ ಮಾನವೀಯತೆ ಕಳೆದುಕೊಳ್ಳುತ್ತದೆ. ಇಂದು ಕಾಶ್ಮೀರದಲ್ಲಿ ಏನಾಯಿತು ಎಂದು ನೋಡುವುದು ಮತ್ತು ಕೇಳುವುದು ಹೃದಯವಿದ್ರಾವಕವಾಗಿದೆ. ನಾನು ಎರಡು ದಿನಗಳ ಹಿಂದೆ ಅಲ್ಲಿಗೆ ಹೋಗಿದ್ದೆ. ಈ ನೋವು ತುಂಬಾ ಹತ್ತಿರದಂತೆ ಕಾಡುತ್ತಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ನಡೆದ ದಾಳಿಯಿಂದ ಆಘಾತ ಮತ್ತು ತೀವ್ರ ದುಃಖವಾಗಿದೆ. ಸಂತ್ರಸ್ತ ಕುಟುಂಬಗಳು ಊಹಿಸಲಾಗದಷ್ಟು ಕಠಿಣ ಪರೀಕ್ಷೆಯನ್ನು ಎದುರಿಸುತ್ತಿರಬೇಕು – ಈ ಕರಾಳ ಸಮಯದಲ್ಲಿ ಭಾರತ ಮತ್ತು ಜಗತ್ತು ಅವರೊಂದಿಗೆ ಒಗ್ಗಟ್ಟಾಗಿ ನಿಂತಿದೆ, ಜೀವಹಾನಿಗೆ ನಾವು ಶೋಕಿಸುತ್ತಿದ್ದೇವೆ ಮತ್ತು ನ್ಯಾಯಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಖಂಡನೀಯ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ತೀವ್ರ ನೋವುಂಟಾಗಿದೆ . ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಹೃದಯ ಮಿಡಿಯುತ್ತದೆ. ಗಾಯಗೊಂಡವರಿಗಾಗಿ ಪ್ರಾರ್ಥನೆಗಳು ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.