‘ಯಾವಾಗಲೂ ಹಿಂದೂಗಳೇ ಏಕೆ?’; ಭಯೋತ್ಪಾದಕ ದಾಳಿಗೆ ಪಾಕಿಸ್ತಾನಿ ಕ್ರಿಕೆಟಿಗರ ಆಕ್ರೋಶ
Kashmir Terror Attack: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಹಿಂದೂ ಯಾತ್ರಿಗಳ ಮೇಲೆ ನಡೆಸಿದ ದಾಳಿಯಿಂದ 28 ಜನರು ಮೃತಪಟ್ಟಿದ್ದಾರೆ. ಈ ಘಟನೆ ಜಾಗತಿಕ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಈ ಘಟನೆಯನ್ನು ಖಂಡಿಸಿದ್ದು, ಸ್ಥಳೀಯರ ಬೆಂಬಲವಿಲ್ಲದೆ ಇಂತಹ ದಾಳಿಗಳು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

ಭೂ ಲೋಕದ ಸ್ವರ್ಗ ಕಾಶ್ಮೀರ, ಎರಡು ದಿನಗಳಿಂದ ನರಕವಾಗಿ ಮಾರ್ಪಟ್ಟಿದೆ. ಕುಟುಂಬದೊಂದಿಗೆ ಪ್ರಸಿದ್ಧ ಪ್ರವಾಸಿ ತಾಣವಾದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ಗೆ (Pahalgam attack) ತೆರಳಿದ್ದ ಹಿಂದೂಗಳ ಮಾರಣಹೋಮವಾಗಿದೆ. ಭಯೋತ್ಪಾದಕರ ಬಂದೂಕಿನ ಮೊರೆತಕ್ಕೆ 26 ಅಮಾಯಕ ಜೀವಗಳು ಪ್ರಾಣ ಬಿಟ್ಟಿವೆ. ಧರ್ಮ ಕೇಳಿ ಪ್ರವಾಸಿಗರನ್ನು ಕೊಂದ ಈ ಭಯೋತ್ಪಾದಕರ ಪೈಶಾಚಿಕ ಕೃತ್ಯಕ್ಕೆ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಭಯೋತ್ಪಾದಕ ಹೀನ ಕೃತ್ಯವನ್ನು ಖಂಡಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ (Danish Kaneria) ಕೂಡ ಈ ಘಟನೆಗೆ ಸ್ಥಳೀಯ ಜನರ ಬೆಂಬಲವೂ ಕಾರಣ ಎಂದು ಆರೋಪಿಸಿದ್ದಾರೆ.
ಯಾವಾಗಲೂ ಹಿಂದೂಗಳೇ ಏಕೆ?
ಭಯೋತ್ಪಾದಕ ದಾಳಿಯ ವಿರುದ್ಧ ಆಕ್ರೋಶ ಹೊರಹಾಕಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ, ‘ಸ್ಥಳೀಯ ಕಾಶ್ಮೀರಿಗಳು ಈ ಭಯೋತ್ಪಾದಕ ದಾಳಿಗಳಿಗೆ ಏಕೆ ಬಲಿಯಾಗುವುದಿಲ್ಲ?. ಭಯೋತ್ಪಾದಕರು ಎಂದಿಗೂ ಸ್ಥಳೀಯ ಕಾಶ್ಮೀರಿಗಳನ್ನು ಗುರಿಯಾಗಿಸಿಕೊಳ್ಳದೆ, ನಿರಂತರವಾಗಿ ಹಿಂದೂಗಳ ಮೇಲೆ ದಾಳಿ ಮಾಡುವುದೇಕೆ? ಅದು ಕಾಶ್ಮೀರಿ ಪಂಡಿತರಾಗಿರಲಿ ಅಥವಾ ಭಾರತದಾದ್ಯಂತದ ಹಿಂದೂ ಪ್ರವಾಸಿಗರಾಗಿರಲಿ? ಏಕೆಂದರೆ ಭಯೋತ್ಪಾದನೆಯನ್ನು ಹೇಗೆ ಮರೆಮಾಡಿದರೂ, ಅದೇ ಸಿದ್ಧಾಂತವನ್ನು ಅನುಸರಿಸುತ್ತದೆ. ಮತ್ತು ಇಡೀ ಜಗತ್ತು ಅದಕ್ಕೆ ಬೆಲೆ ತೆರುತ್ತಿದೆ” ಎಂದು ಕನೇರಿಯಾ ತಮ್ಮ ಸೋಶಿಯಲ್ ಮೀಡಿಯಾ ಖಾತೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
Why is it that they never target local Kashmiris, but consistently attack Hindus — be it Kashmiri Pandits or Hindu tourists from across India? Because terrorism, no matter how it’s disguised, follows one ideology — and the whole world is paying the price for it. #Pahalgam
— Danish Kaneria (@DanishKaneria61) April 23, 2025
ಇಂತಹ ಘಟನೆಗಳು ಸ್ಥಳೀಯ ಜನರ ಸಹಾಯವಿಲ್ಲದೆ ಜರುಗಲು ಸಾಧ್ಯವಿಲ್ಲ ಎಂದು ಮಾಡಿರುವ ಪೋಸ್ಟ್ ಅನ್ನು ರೀ ಪೋಸ್ಟ್ ಮಾಡಿರುವ ಕನೇರಿಯಾ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
Right! https://t.co/XrAFdaEofN
— Danish Kaneria (@DanishKaneria61) April 22, 2025
ದುಃಖ ವ್ಯಕ್ತಪಡಿಸಿದ ಹಫೀಜ್
ಮತ್ತೊಂದೆಡೆ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಕೂಡ ಪಹಲ್ಗಾಮ್ ಕೃತ್ಯದ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ‘ನನಗೆ ದುಃಖವಾಗಿದೆ, ನನ್ನ ಹೃದಯ ಮುರಿದಿದೆ.’ ಎಂದು ಬರೆದುಕೊಂಡಿದ್ದಾರೆ.
Sad & heartbroken 💔 #PahalgamTerroristAttack
— Mohammad Hafeez (@MHafeez22) April 23, 2025
ಇದುವರೆಗೆ 28 ಜನರ ಸಾವು
ಮಂಗಳವಾರ, ಏಪ್ರಿಲ್ 22 ರಂದು, ಕೆಲವು ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ಡಜನ್ಗಟ್ಟಲೆ ಪ್ರವಾಸಿಗರ ಮೇಲೆ ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದಾರೆ. ಈ ವೇಳೆ ಭಯೋತ್ಪಾದಕರು, ಪ್ರವಾಸಿಗರ ಧರ್ಮದ ಬಗ್ಗೆ ಕೇಳಿ, ಅವರು ಹಿಂದೂ ಧರ್ಮದವರು ಎಂಬುದು ಗೊತ್ತಾಗುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಘೋರ ಘಟನೆಯಲ್ಲಿ ಇಲ್ಲಿಯವರೆಗೆ 28 ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರಾಗಿದ್ದಾರೆ. ಈ ಘಟನೆಯ ನಂತರ ದೇಶಾದ್ಯಂತ ಆಕ್ರೋಶ ಹರಡಿದ್ದು, ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಭಯೋತ್ಪಾದಕರ ವಿರುದ್ಧ ಮಾತ್ರವಲ್ಲದೆ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೂ ಪಾಠ ಕಲಿಸಬೇಕೆಂಬ ಬೇಡಿಕೆ ಇದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Wed, 23 April 25