ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಟಿ20 ಖೇಲ್ ಖತಂ: ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ
Team India: ನಾನು ಆಯ್ಕೆ ಸಮಿತಿಯ ಮುಖ್ಯಸ್ಥನಾದ ಮೇಲೆ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ದೀಪಕ್ ಹೂಡಾ, ಶುಭಮನ್ ಗಿಲ್ ಮತ್ತು ಇತರ 15-20 ಆಟಗಾರರನ್ನು ತಂಡಕ್ಕೆ ಕರೆತಂದಿದ್ದೇನೆ.

ಟೀಮ್ ಇಂಡಿಯಾ ಆಟಗಾರರು ಫಿಟ್ನೆಸ್ಗಾಗಿ ನಿಷೇಧಿತ ಚುಚ್ಚುಮದ್ದಿನ ಮೊರೆ ಹೋಗುತ್ತಿದ್ದಾರಾ? ಇಂತಹದೊಂದು ಪ್ರಶ್ನೆಯನ್ನು ಹುಟ್ಟುಹಾಕಿರುವುದು ಮತ್ಯಾರೂ ಅಲ್ಲ, ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ (Chetan Sharma). ಖಾಸಗಿ ನ್ಯೂಸ್ ಚಾನೆಲ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ, ಭಾರತ ಕ್ರಿಕೆಟ್ ತಂಡದ ಆಟಗಾರರು ಫಿಟ್ ಆಗಿಲ್ಲದಿದ್ದರೂ ಶೇ.100 ರಷ್ಟು ಫಿಟ್ ಆಗಲು ನಿಷೇಧಿತ ಚುಚ್ಚುಮದ್ದನ್ನು ಚುಚ್ಚಿರುವುದು ಬೆಳಕಿಗೆ ಬಂದಿದೆ ಎಂದು ಚೇತನ್ ಶರ್ಮಾ ಹೇಳಿದ್ದಾರೆ. ಅಲ್ಲದೆ ಈ ವೇಳೆ ಚುಚ್ಚುಮದ್ದುಗಳನ್ನು ಪರಿಶೀಲಿಸಿದಾಗ ಡ್ರಗ್ ಅಂಶಗಳು ಇರುವುದು ಕೂಡ ಪತ್ತೆಯಾಗಿತ್ತು. ಆದರೆ ಇದು ಡೋಪ್ ಪರೀಕ್ಷೆಯಲ್ಲಿ ಸಿಕ್ಕಿಬೀಳುವುದಿಲ್ಲ ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಆಟಗಾರರು 80% ಫಿಟ್ ಆಗಿದ್ದರೂ ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ. ಆ ಬಳಿಕ 100% ಫಿಟ್ ಆಗುತ್ತಾರೆ. ಇವು ನೋವು ನಿವಾರಕಗಳಲ್ಲ. ಈ ಚುಚ್ಚುಮದ್ದುಗಳು ಡೋಪ್ ಪರೀಕ್ಷೆಯಲ್ಲಿ ಸಿಕ್ಕಿಬೀಳದ ಔಷಧವನ್ನು ಒಳಗೊಂಡಿವೆ ಎಂದು ಚೇತನ್ ಶರ್ಮಾ ಹೇಳುತ್ತಿರುವುದು ಸ್ಟಿಂಗ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ಯಾರು ಆಡಬೇಕು ಯಾರು ಆಡಬಾರದು ಎಂಬುದನ್ನು ನಿರ್ಧರಿಸುವುದು ಕೂಡ ನಾವೇ. ನಮಗೆ ಬೇಕಾದವರಿಗೆ ಅವಕಾಶ ನೀಡುತ್ತೇವೆ. ಅಲ್ಲದೆ ನಾಯಕರು ಕೂಡ ತಮ್ಮ ನೆಚ್ಚಿನ ಆಟಗಾರರನ್ನು ಹೆಸರಿಸುತ್ತಾರೆ ಎಂಬುದನ್ನು ಕೂಡ ಚೇತನ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಕೊಹ್ಲಿ-ರೋಹಿತ್ ಟಿ20 ಖೇಲ್ ಖತಂ:
ಇದೇ ವೇಳೆ ಶುಭ್ಮನ್ ಗಿಲ್‌ಗೆ ಅವಕಾಶ ನೀಡಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಂತಹ ದೊಡ್ಡ ಆಟಗಾರರಿಗೆ ಟಿ20 ಕ್ರಿಕೆಟ್ನಿಂದ ವಿಶ್ರಾಂತಿ ನೀಡಲಾಗಿದೆ. ಭವಿಷ್ಯದಲ್ಲಿ ರೋಹಿತ್ ಶರ್ಮಾ ಟಿ20 ತಂಡದ ಭಾಗವಾಗುವುದಿಲ್ಲ. ಬದಲಾಗಿ ಹಾರ್ದಿಕ್ ಪಾಂಡ್ಯ ದೀರ್ಘಾವಧಿಗೆ ನಾಯಕರಾಗಿರುತ್ತಾರೆ ಎಂದು ಚೇತನ್ ಶರ್ಮಾ ಬಹಿರಂಗಪಡಿಸಿದರು.
ನಾನು ಆಯ್ಕೆ ಸಮಿತಿಯ ಮುಖ್ಯಸ್ಥನಾದ ಮೇಲೆ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ದೀಪಕ್ ಹೂಡಾ, ಶುಭಮನ್ ಗಿಲ್ ಮತ್ತು ಇತರ 15-20 ಆಟಗಾರರನ್ನು ತಂಡಕ್ಕೆ ಕರೆತಂದಿದ್ದೇನೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಇದೀಗ ಯಾವುದೇ ಸಂಘರ್ಷವಿಲ್ಲ. ಆದರೆ ಇವರಿಬ್ಬರ ನಡುವೆ ಅಹಂನ ಸಂಘರ್ಷ ಏರ್ಪಡುತ್ತದೆ ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಯುವ ಬ್ಯಾಟ್ಸ್‌ಮನ್‌ಗಳಾದ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಅವರ ಪ್ರಸ್ತುತ ಫಾರ್ಮ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಾ, ಅವರು ಖಂಡಿತವಾಗಿಯೂ ಶಿಖರ್ ಧವನ್, ಸಂಜು ಸ್ಯಾಮ್ಸನ್ ಮತ್ತು ಕೆಎಲ್ ರಾಹುಲ್ ಅವರ ವೃತ್ತಿಜೀವನವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಚೇತನ್ ಶರ್ಮಾ ಅವರ ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಆಟಗಾರರನ್ನು ತಮ್ಮ ಆದ್ಯತೆಯ ಮೇಲೆ ಆಯ್ಕೆ ಮಾಡುತ್ತಿರುವುದಾಗಿ ನೀಡಿರುವ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Published On - 10:27 pm, Tue, 14 February 23




