David Warner: ಜೈ ಶ್ರೀರಾಮ್: ಹೃತ್ಪೂರ್ವಕ ಶುಭಾಶಯ ತಿಳಿಸಿದ ಡೇವಿಡ್ ವಾರ್ನರ್
David Warner: ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್ನಲ್ಲಿ ಮುಂದುವರೆದಿದ್ದಾರೆ. ಇದಾಗ್ಯೂ 2025 ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ 37 ವರ್ಷದ ವಾರ್ನರ್ ಅವರನ್ನು ಮುಂದಿನ ವರ್ಷ ಮತ್ತೆ ಏಕದಿನ ಪಂದ್ಯಕ್ಕೆ ಪರಿಗಣಿಸುವುದು ಅನುಮಾನ.
ಅಯೋಧ್ಯೆ ರಾಮಮಂದಿರದಲ್ಲಿ ರಾಮ ಲಲ್ಲಾನ ವಿಗ್ರಹದ ‘ಪ್ರಾಣ ಪ್ರತಿಷ್ಠಾಪನೆಯಾಗಿದೆ. ಈ ಶುಭ ಸಮಾರಂಭದ ಬಳಿಕ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಶುಭಾಶಯಗಳನ್ನು ತಿಳಿಸಿರುವುದು ವಿಶೇಷ. ವಿಶ್ವದ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ವಾರ್ನರ್, ‘ಜೈ ಶ್ರೀ ರಾಮ್’ ಘೋಷಣೆಯೊಂದಿಗೆ ತಮ್ಮ ಅಭಿನಂದನಾ ಸಂದೇಶವನ್ನು ತಿಳಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶ್ರೀರಾಮಚಂದ್ರನ ಆಗಮನದ ಫೋಟೋವೊಂದನ್ನು ಹಂಚಿಕೊಂಡಿರುವ ವಾರ್ನರ್, ಜೈ ಶ್ರೀರಾಮ್ ಇಂಡಿಯಾ ಎಂದು ಬರೆದುಕೊಂಡಿದ್ದಾರೆ. ಇದೀಗ ಡೇವಿಡ್ ವಾರ್ನರ್ ಅವರ ಈ ಪೋಸ್ಟ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ.
View this post on Instagram
ಇಂಟರ್ನ್ಯಾಷನಲ್ ಲೀಗ್ನಲ್ಲಿ ವಾರ್ನರ್:
ಡೇವಿಡ್ ವಾರ್ನರ್ ಸದ್ಯ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿ ಆಡುತ್ತಿದ್ದಾರೆ. ಯುಎಇನಲ್ಲಿ ನಡೆಯುತ್ತಿರುವ ಈ ಲೀಗ್ನಲ್ಲಿ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾಲೀಕತ್ವದ ದುಬೈ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗೆಯೇ ಮುಂಬರುವ ಐಪಿಎಲ್ನಲ್ಲಿ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ಪರ ಇನಿಂಗ್ಸ್ ಆರಂಭಿಸಲಿದ್ದಾರೆ.
ವಾರ್ನರ್ ವಿದಾಯ:
ಡೇವಿಡ್ ವಾರ್ನರ್ ಈಗಾಗಲೇ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಸಿಡ್ನಿಯಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ಮೂಲಕ ವಾರ್ನರ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಹಾಗೆಯೇ ಏಕದಿನ ವಿಶ್ವಕಪ್ ಫೈನಲ್ ಬಳಿಕ ಒಡಿಐ ಕ್ರಿಕೆಟ್ನಿಂದ ಕೂಡ ನಿವೃತ್ತಿ ಘೋಷಿಸಿದ್ದಾರೆ.
ವಿಶೇಷ ಎಂದರೆ ಟೆಸ್ಟ್ ಕ್ರಿಕೆಟ್ನ ಅಂತಿಮ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಾರ್ನರ್ (57) ತಮ್ಮ ಕೊನೆಯ ಇನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದೊಂದಿಗೆ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು.
ಇದಕ್ಕೂ ಮುನ್ನ ಈ ದಾಖಲೆ ಮ್ಯಾಥ್ಯೂ ಹೇಡನ್ ಅವರ ಹೆಸರಿನಲ್ಲಿತ್ತು. ಆಸ್ಟ್ರೇಲಿಯಾ ತಂಡದ ಮಾಜಿ ಎಡಗೈ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಓಪನರ್ ಆಗಿ ಕಣಕ್ಕಿಳಿದು ಒಟ್ಟು 8625 ರನ್ ಕಲೆಹಾಕಿ ಇತಿಹಾಸ ಬರೆದಿದ್ದರು. ಇದೀಗ ಈ ದಾಖಲೆಯನ್ನು ಡೇವಿಡ್ ವಾರ್ನರ್ ಮುರಿದಿದ್ದಾರೆ.
ಆಸ್ಟ್ರೇಲಿಯಾ ಪರ 203 ಟೆಸ್ಟ್ ಇನಿಂಗ್ಸ್ ಆಡಿರುವ ಡೇವಿಡ್ ವಾರ್ನರ್ ಆರಂಭಿಕನ ಸ್ಥಾನದಲ್ಲಿ ಒಟ್ಟು 8786 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಆರಂಭಿಕ ಬ್ಯಾಟರ್ ಎಂಬ ದಾಖಲೆಯೊಂದಿಗೆ ವಾರ್ನರ್ ವಿದಾಯ ಹೇಳಿದ್ದರು.
ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ
ODI ವೃತ್ತಿ ಜೀವನ:
ಆಸ್ಟ್ರೇಲಿಯಾ ಪರ 161 ಏಕದಿನ ಇನ್ನಿಂಗ್ಸ್‌ಗಳನ್ನು ಆಡಿರುವ ವಾರ್ನರ್ 45.01 ರ ಸರಾಸರಿಯಲ್ಲಿ ಒಟ್ಟು 6,932 ರನ್ ಗಳಿಸಿದ್ದಾರೆ. ಈ ವೇಳೆ 22 ಶತಕಗಳು ಮತ್ತು 33 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ವಾರ್ನರ್ ಟಿ20 ಕ್ರಿಕೆಟ್ನಲ್ಲಿ ಮಾತ್ರ ಮುಂದುವರೆಯುತ್ತಿದ್ದಾರೆ. ಒಂದು ವೇಳೆ ಮುಂಬರುವ ಟಿ20 ವಿಶ್ವಕಪ್ಗಾಗಿ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆಯದಿದ್ದರೆ ಚುಟುಕು ಕ್ರಿಕೆಟ್ಗೂ ವಿದಾಯ ಹೇಳಬಹುದು.