VIDEO: ರನೌಟ್ಗೆ ಅವಕಾಶವಿದ್ದರೂ ಔಟ್ ಮಾಡದ ಚಹರ್ ವಿರುದ್ಧ ಆಕ್ರೋಶ..!
Deepak Chahar - Tristan Stubbs: ಐಸಿಸಿ ಅಕ್ಟೋಬರ್ 1 ರಿಂದ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ ಬೌಲರ್ ಚೆಂಡೆಸೆಯುವ ಮುನ್ನ ಬ್ಯಾಟ್ಸ್ಮನ್ ಕ್ರೀಸ್ ಬಿಟ್ಟಿದ್ದರೆ ನೇರವಾಗಿ ರನೌಟ್ ಮಾಡಬಹುದು.

ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ 3ನೇ ಟಿ20 ಪಂದ್ಯವು ರೋಚಕ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಆರಂಭದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದ ಭಾರತೀಯ ಬೌಲರ್ಗಳು ಆ ಬಳಿಕ ಲಯ ತಪ್ಪಿದ್ದರು. ಅದರಲ್ಲೂ ಪವರ್ಪ್ಲೇ ಬಳಿಕ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅಬ್ಬರಿಸಿದ್ದರು. 43 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್ನೊಂದಿಗೆ 68 ರನ್ ಬಾರಿಸಿದ್ದ ಡಿಕಾಕ್ ಕೊನೆಗೆ ರನೌಟ್ ಆಗಿ ಹೊರನಡೆದರು. ಇದರ ಬೆನ್ನಲ್ಲೇ ರಿಲೀ ರೊಸ್ಸೊ ಅಬ್ಬರ ಶುರು ಮಾಡಿದ್ದರು. ಒಂದೆಡೆ ರೊಸ್ಸೊ ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದರೆ, ಮತ್ತೊಂದೆಡೆ ಯುವ ಬ್ಯಾಟ್ಸ್ಮನ್ ಟ್ರಿಸ್ಟಾನ್ ಸ್ಟಬ್ಸ್ ಉತ್ತಮ ಸಾಥ್ ನೀಡಿದ್ದರು.
ಆದರೆ ಪಂದ್ಯದ 16ನೇ ಓವರ್ನಲ್ಲಿ ಸ್ಟಬ್ಸ್ ಅವರನ್ನು ಔಟ್ ಮಾಡುವ ಉತ್ತಮ ಅವಕಾಶ ದೀಪಕ್ ಚಹರ್ ಮುಂದಿತ್ತು. 16ನೇ ಓವರ್ನ ಮೊದಲ ಎಸೆತವನ್ನು ಎಸೆಯುವ ಮುನ್ನವೇ ಟ್ರಿಸ್ಟಾನ್ ಸ್ಟಬ್ಸ್ ನಾನ್ ಸ್ಟ್ರೈಕರ್ ಎಂಡ್ನಿಂದ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿದ ದೀಪಕ್ ಚಹರ್ಗೆ ರನೌಟ್ ಮಾಡುವ ಅವಕಾಶವಿತ್ತು. ಆದರೆ ಔಟ್ ಮಾಡದೇ ಸ್ಟಬ್ಸ್ಗೆ ಎಚ್ಚರಿಕೆ ನೀಡಿದರು.
ಐಸಿಸಿ ಹೊಸ ನಿಯಮದ ಪ್ರಕಾರ ಮಂಕಡ್ ರನೌಟ್ ನಿಯಮವನ್ನು ತೆಗೆದು ಹಾಕಲಾಗಿದೆ. ಬದಲಾಗಿ ನಾನ್ ಸ್ಟ್ರೈಕರ್ ಚೆಂಡೆಸೆಯುವ ಮುನ್ನ ಕ್ರೀಸ್ ಬಿಟ್ಟಿದ್ದರೆ ರನೌಟ್ ಮಾಡುವ ಅವಕಾಶ ಬೌಲರ್ಗಳಿಗೆ ನೀಡಲಾಗಿದೆ. ಇದಾಗ್ಯೂ ದೀಪಕ್ ಚಹರ್ ಔಟ್ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ.
Deepak Chahar Attempted Mankand IND vs SA pic.twitter.com/Ov9pcKLw6D
— MohiCric (@MohitKu38157375) October 4, 2022
ಇತ್ತ ದೀಪಕ್ ಚಹರ್ ನೀಡಿದ ಜೀವದಾನದಿಂದಾಗಿ ಟ್ರಿಸ್ಟಾನ್ ಸ್ಟಬ್ಸ್ ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದ ರೊಸೊಗೆ ಉತ್ತಮ ಸಾಥ್ ನೀಡಿದರು. ಅಲ್ಲದೆ 18 ಎಸೆತಗಳಲ್ಲಿ 23 ರನ್ಗಳಿಸಿದರು. ಐಸಿಸಿ ನಿಯಮದ ಪ್ರಕಾರ ಔಟ್ ಮಾಡುವ ಅವಕಾಶವಿದ್ದರೂ ದೀಪಕ್ ಚಹರ್ ರನೌಟ್ ಮಾಡದಿರುವ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಪ್ರತಿಯೊಂದು ರನ್ ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಚಹರ್ನಂತಹ ಆಟಗಾರರು ಸಿಗುವ ಅವಕಾಶವನ್ನು ಬಳಸಿಕೊಂಡಿಲ್ಲ ಎಂಬುದೇ ಅಚ್ಚರಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಟೀಮ್ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ದೀಪ್ತಿ ಶರ್ಮಾ ಮಂಕಡ್ ರನೌಟ್ ಮೂಲಕವೇ ಇಂಗ್ಲೆಂಡ್ ವಿರುದ್ಧ ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಆದರೆ ಬೃಹತ್ ಮೊತ್ತ ದಾಖಲಿಸುವತ್ತ ದಾಪುಗಾಲಿಟ್ಟಿದ್ದ ಸೌತ್ ಆಫ್ರಿಕಾ ತಂಡಕ್ಕೆ ಜೀವದಾನ ನೀಡುವ ದೀಪಕ್ ಚಹರ್ ಯಾರನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
Deepak chahar trying to recreate the scene… ??#IndvsSA #deepakchahar #Tristanstubbs #Indore #IndvsEng @deepak_chahar9 @TristanStubbs18 pic.twitter.com/oXptQKKH6D
— Mr.laZy (@shaik_ziaullah) October 4, 2022
ಐಸಿಸಿ ಅಕ್ಟೋಬರ್ 1 ರಿಂದ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ ಬೌಲರ್ ಚೆಂಡೆಸೆಯುವ ಮುನ್ನ ಬ್ಯಾಟ್ಸ್ಮನ್ ಕ್ರೀಸ್ ಬಿಟ್ಟಿದ್ದರೆ ನೇರವಾಗಿ ರನೌಟ್ ಮಾಡಬಹುದು. ಇಲ್ಲಿ ಯಾವುದೇ ಎಚ್ಚರಿಕೆ ನೀಡಬೇಕಾದ ಅವಶ್ಯಕತೆಯಿಲ್ಲ ಎಂದು ತಿಳಿಸಿದೆ. ಇದಾಗ್ಯೂ ದೀಪಕ್ ಚಹರ್ ರನೌಟ್ ಮಾಡದೇ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.




