Devdutt Padikkal: ಟೀಮ್ ಇಂಡಿಯಾ ವಿಶೇಷ ದಾಖಲೆ ಬರೆದ ದೇವದತ್ ಪಡಿಕ್ಕಲ್
Team India: ವಿಜಯ್ ಹಜಾರೆ ಟ್ರೋಫಿ 2021 ರಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 737 ರನ್ ಬಾರಿಸಿದ್ದರು. ಇದರಲ್ಲಿ 4 ಶತಕಗಳು ಮತ್ತು 3 ಅರ್ಧಶತಕಗಳು ಮೂಡಿಬಂದಿದ್ದವು. 2020ರ ಸೀಸನ್ನಲ್ಲೂ ಎಡಗೈ ದಾಂಡಿಗ ಕರ್ನಾಟಕದ ಪರ 700 ರನ್ ಕಲೆಹಾಕಿದ್ದರು.
ಅಂತು ಇಂತು ದೇವದತ್ ಪಡಿಕ್ಕಲ್ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ದದ ಏಕದಿನ ಪಂದ್ಯದ ಮೂಲಕ ಪಡಿಕ್ಕಲ್ ಭಾರತದ ಪರ ಆಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 3 ಪಂದ್ಯಗಳ ಸರಣಿಯಲ್ಲಿ 20 ಮಂದಿ ಸದಸ್ಯರ ಟೀಮ್ ಇಂಡಿಯಾದಿಂದ 18 ಮಂದಿ ಕಣಕ್ಕಿಳಿದರೂ ಕನ್ನಡಿಗನಿಗೆ ಅವಕಾಶ ಸಿಕ್ಕಿರಲಿಲ್ಲ. ಇದರ ಬಳಿಕ ಟಿ20 ಸರಣಿಯಲ್ಲಿ ಚೊಚ್ಚಲ ಅವಕಾಶವನ್ನು ಎದುರು ನೋಡಲಾಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಪಡಿಕ್ಕಲ್ಗೆ ಅವಕಾಶ ಲಭಿಸಿರಲಿಲ್ಲ. ಇದೀಗ 2ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಹೊರಗುಳಿದ ಕಾರಣ ದೇವದತ್ ಪಡಿಕ್ಕಲ್ಗೆ ಅವಕಾಶ ಲಭಿಸಿದೆ. ಚೊಚ್ಚಲ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಎಡಗೈ ದಾಂಡಿಗ 23 ಎಸೆತಗಳಲ್ಲಿ 29 ರನ್ ಬಾರಿಸಿ ಗಮನ ಸೆಳೆದರು.
ಈ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ದೇವದತ್ ಪಡಿಕ್ಕಲ್ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದರು. ಹೌದು, 21ನೇ ಶತಮಾನದಲ್ಲಿ ಜನಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಕಾಲಿಟ್ಟ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಡಿಕ್ಕಲ್ ಪಾತ್ರಾಗಿದ್ದಾರೆ. ಅಂದರೆ 2000 ಇಸವಿ ಹಾಗೂ ಅದರ ಬಳಿಕ ಜನಿಸಿದ ಕ್ರಿಕೆಟಿಗನೊಬ್ಬ ಇದೇ ಮೊದಲ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ಪಡಿಕ್ಕಲ್ ಜುಲೈ 7, 2000 ರಂದು ಜನಿಸಿದ್ದು, ಇದೀಗ 21 ವರ್ಷ. ಇನ್ನು ಈ ಪಂದ್ಯದ ಮೂಲಕ ಟಿ20ಯಲ್ಲಿ ಟೀಮ್ ಇಂಡಿಯಾ ಪರ ಆಡಿದ 10ನೇ ಕಿರಿಯ ಆಟಗಾರ ಎಂಬ ಕೀರ್ತಿಗೂ ಪಡಿಕ್ಕಲ್ ಪಾತ್ರರಾಗಿದ್ದಾರೆ. ಮೂರನೇ ಟಿ20 ಪಂದ್ಯದಲ್ಲೂ ದೇವದತ್ ಪಡಿಕ್ಕಲ್ ಅವಕಾಶ ಸಿಗಲಿದ್ದು, ಈ ಪಂದ್ಯದಲ್ಲಿ ಮಿಂಚಿದರೆ ಟಿ20 ವಿಶ್ವಕಪ್ ತಂಡದ ಆಯ್ಕೆಗೆ ಪಡಿಕ್ಕಲ್ ಹೆಸರು ಪರಿಗಣಿಸಬಹುದು. ಹೀಗಾಗಿ ಶ್ರೀಲಂಕಾ ವಿರುದ್ದದ ಅಂತಿಮ ಟಿ20 ಹಾಗೂ ಐಪಿಎಲ್ನ ಉಳಿದ ಪಂದ್ಯಗಳು ಟೀಮ್ ಇಂಡಿಯಾ ಆಟಗಾರರಿಗೆ ಪ್ರಮುಖವಾಗಿದೆ.
ಪಡಿಕ್ಕಲ್ ಸಾಧನೆ: ಕಳೆದ ಎರಡು ಮೂರು ವರ್ಷಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶ ನೀಡಿದ್ದ ಪಡಿಕ್ಕಲ್ ಕೊನೆಗೂ ಟೀಮ್ ಇಂಡಿಯಾ ಪರ ಅವಕಾಶ ಪಡೆದಿದ್ದಾರೆ. ಈ ಹಿಂದೆ ವಿಜಯ್ ಹಜಾರೆ ಟ್ರೋಫಿ 2021 ರಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 737 ರನ್ ಬಾರಿಸಿದ್ದರು. ಇದರಲ್ಲಿ 4 ಶತಕಗಳು ಮತ್ತು 3 ಅರ್ಧಶತಕಗಳು ಮೂಡಿಬಂದಿದ್ದವು. 2020ರ ಸೀಸನ್ನಲ್ಲೂ ಎಡಗೈ ದಾಂಡಿಗ ಕರ್ನಾಟಕದ ಪರ 700 ರನ್ ಕಲೆಹಾಕಿದ್ದರು. ಈ ಮೂಲಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡು ಸೀಸನ್ನಲ್ಲಿ 700 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಟೀಮ್ ಇಂಡಿಯಾ ಸಂಪೂರ್ಣ ತಂಡ: ಶಿಖರ್ ಧವನ್ (ನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್, ನವದೀಪ್ ಸೈನಿ, ಚೇತನ್ ಸಕಾರಿಯಾ, ರಾಹುಲ್ ಚಹರ್, ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಸಾಯಿ ಕಿಶೋರ್, ಅರ್ಷ್‌ದೀಪ್ ಸಿಂಗ್ ಮತ್ತು ಸಿಮಾರ್ಜಿತ್ ಸಿಂಗ್
ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್..!
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ಗೆ ಅವಕಾಶ ಕೈತಪ್ಪುವ ಆತಂಕ
(Devdutt Padikkal creates this unique record on his debut for team india)
Published On - 5:15 pm, Thu, 29 July 21