IND vs ENG Test: ಭಾರತವನ್ನು ಗೆಲ್ಲಿಸಿ ಮೊದಲ ಬಾರಿ ಮನೆಗೆ ಬಂದ ಧ್ರುವ್ ಜುರೆಲ್: ತಂದೆ-ತಾಯಿಗೆ ಕೊಟ್ಟ ಗಿಫ್ಟ್ ಏನು?
Dhruv Jurel Instagram: ಭಾರತ ಟೆಸ್ಟ್ ತಂಡದ ಯುವ ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಅವರು ಇಂಗ್ಲೆಂಡ್ ವಿರುದ್ಧದ ರಾಂಚಿ ಟೆಸ್ಟ್‌ನಲ್ಲಿ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮ ಪೋಷಕರಿಗೆ ಅರ್ಪಿಸಿದ್ದಾರೆ. ಜುರೆಲ್ ಅವರು ಮಾರ್ಚ್ 1 ರ ಶುಕ್ರವಾರದಂದು ತಮ್ಮ ಇನ್‌ಸ್ಟಾಗ್ರಾಮ್ ಚಾನೆಲ್‌ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಭಾರತದ ಯುವ ಆಟಗಾರರು ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಗಮನ ಸೆಳೆದಿರುವುದು ಧ್ರುವ ಜುರೆಲ್ (Dhruv Jurel). 22 ವರ್ಷದ ಭಾರತೀಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಈ ಸರಣಿಯಲ್ಲಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿ ಚೊಚ್ಚಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದಾರೆ. ರಾಂಚಿಯಲ್ಲಿ ನಡೆದ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ 129 ರನ್ ಗಳಿಸಿ ಟೀಮ್ ಇಂಡಿಯಾವನ್ನು ಪಂದ್ಯದ ಜೊತೆಗೆ ಸರಣಿಯನ್ನು ಗೆಲ್ಲುವಂತೆ ಮಾಡಿದರು.
5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವಿರಾಮದ ಕಾರಣ, ಧ್ರುವ್ ಜುರೆಲ್ ನೇರವಾಗಿ ಆಗ್ರಾದ ತಮ್ಮ ಮನೆಗೆ ತೆರಳಿದರು. ಟೀಮ್ ಇಂಡಿಯಾವನ್ನು ಗೆಲ್ಲಿಸಿದ ನಂತರ, ಅವರು ತಮ್ಮ ಕುಟುಂಬವನ್ನು ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಈ ಕುರಿತು ಧ್ರುವ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಂದರವಾದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಧ್ರುವ್ ತಂದೆ-ತಾಯಿಯ ಜೊತೆ ನಡುವಿನಲ್ಲಿ ಕುಳಿತಿದ್ದಾರೆ.
ಇಂಗ್ಲೆಂಡ್ ಸರಣಿಗೆ ಕಿಶನ್ ಅವರನ್ನು ಕೇಳಲಾಗಿತ್ತು: ಆಗ ಇಶಾನ್ ಕೊಟ್ಟ ಉತ್ತರ ಏನು ಗೊತ್ತೇ?
ಧ್ರುವ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಫೋಟೋ:
View this post on Instagram
ಧ್ರುವ್ ಜುರೆಲ್ ಮನೆಗೆ ಬಂದು ಪೋಷಕರಿಗೆ ವಿಶೇಷ ಉಡುಗೊರೆಯನ್ನೂ ನೀಡಿದ್ದಾರೆ. ಈ ಉಡುಗೊರೆಗಳು ರಾಂಚಿ ಟೆಸ್ಟ್‌ನಲ್ಲಿ ಪಡೆದ ಪ್ರಶಸ್ತಿಗಳಾಗಿವೆ. ನಾಲ್ಕನೇ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಧ್ರುವ್ ಪ್ರಶಸ್ತಿ ಪಡೆದುಕೊಂಡಿದ್ದರು. ಇದರಲ್ಲಿ ಅವರು ತಮ್ಮ ತಾಯಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಟ್ರೋಫಿಯನ್ನು ನೀಡಿದ್ದಾರೆ. ಹಾಗೆಯೆ ತಂದೆಗೆ ಸ್ಮಾರ್ಟ್ ಸೇವರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕೊಟ್ಟಿದ್ದಾರೆ. ಈ ಫೋಟೋ ಎಲ್ಲಡೆ ವೈರಲ್ ಆಗುತ್ತಿದೆ.
ಉದ್ದ ಕೂದಲು, ಫಿಟ್ ಬಾಡಿ: ಹಳೇ ಲುಕ್ನಲ್ಲಿ ಮಿಂಚಿದ ಎಂಎಸ್ ಧೋನಿ
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಧ್ರುವ್ ಜುರೆಲ್ ಅವರ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ಗೆ ಕ್ರಿಕೆಟ್ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ರಾಂಚಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ, ಜುರೆಲ್ 149 ಎಸೆತಗಳಲ್ಲಿ ಅದ್ಭುತ 90 ರನ್ ಗಳಿಸಿದರು. ಭಾರತದ ಸ್ಟಾರ್ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರೂ ಇವರು ಟೊಂಕ ಕಟ್ಟಿ ಕ್ರೀಸ್ನಲ್ಲಿ ನಿಂತಿದ್ದರು.
ಬಳಿಕ ಧ್ರುವ್ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 39 ರನ್ ಗಳಿಸಿ, ಶುಭ್ಮನ್ ಗಿಲ್ ಮೇಲಿನ ಒತ್ತಡವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಇವರಿಬ್ಬರು ನಿರ್ಣಾಯಕ 72 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಈ ಮೂಲಕ ತಂಡವು 3-1 ರಿಂದ ಸರಣಿ ಗೆಲುವನ್ನು ಸಾಧಿಸಿತು. ಧ್ರುವ್ ಅವರ ಆಟಕ್ಕೆ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟ್ ದಿಗ್ಗಜರು ಮನಸೋತಿದ್ದಾರೆ. ಈ ಯುವ ಆಟಗಾರನನ್ನು ಮಾಜಿ ಭಾರತ ನಾಯಕ ಎಂಎಸ್ ಧೋನಿಯೊಂದಿಗೆ ಹೋಲಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಮಾರ್ಚ್ 7 ರಂದು ಆರಂಭವಾಗಲಿದೆ. ಈ ಪಂದ್ಯದಲ್ಲಿ ಧ್ರುವ್ ಜುರೆಲ್ ಮೇಲೆ ಎಲ್ಲರ ಕಣ್ಣಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ