ಐಪಿಎಲ್ ಟ್ರೋಫಿ ಗೆದ್ದ ನಾಯಕನಿಂದಲೇ IPL ಫ್ರಾಂಚೈಸಿ ಬಗ್ಗೆ ಅಪಸ್ವರ..!
David Warner: ಈ ವಿಚಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಗಂಭೀರವಾಗಿ ಪರಿಗಣಿಸುವಂತೆ ಗಿಲ್‌ಕ್ರಿಸ್ಟ್ ಮನವಿ ಮಾಡಿದ್ದಾರೆ. ಏಕೆಂದರೆ ಆಸ್ಟ್ರೇಲಿಯಾದ ಇತರ ಕ್ರಿಕೆಟಿಗರೂ ವಾರ್ನರ್ ಹಾದಿಯನ್ನು ಅನುಸರಿಸಬಹುದು.
ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆ್ಯಡಂ ಗಿಲ್‌ಕ್ರಿಸ್ಟ್ (Adam Gilchrist) ಐಪಿಎಲ್ ಟೂರ್ನಿಯು ಇತರೆ ಕ್ರಿಕೆಟ್ ಲೀಗ್‌ಗಳಿಗೆ ದೊಡ್ಡ ಬೆದರಿಕೆ ಎಂದು ಬಣ್ಣಿಸಿದ್ದಾರೆ. ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಈ ಬಾರಿಯ ಬಿಗ್ ಬ್ಯಾಷ್ ಲೀಗ್ನಿಂದ ಹೊರಗುಳಿಯುವ ಸುದ್ದಿಯ ಬೆನ್ನಲ್ಲೇ ಐಪಿಎಲ್‌ನ ಪ್ರಭಾವ ಬಗ್ಗೆ ಗಿಲ್‌ಕ್ರಿಸ್ಟ್ ಪ್ರಶ್ನೆಗಳೆನ್ನೆತ್ತಿದ್ದಾರೆ. ಐಪಿಎಲ್‌ನ ಬೆಳವಣಿಗೆಯನ್ನು ಪ್ರಶ್ನಿಸಿದ ಗಿಲ್‌ಕ್ರಿಸ್ಟ್, ಈ ಲೀಗ್ ಈಗ ಇತರೆ ಲೀಗ್‌ಗಳಿಗೆ ಬೆದರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ. ವಾರ್ನರ್ ಅವರ ನಿರ್ಧಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ಗಿಲ್ಲಿ, ಕೆಲ ಆಟಗಾರರು ತಮ್ಮ ದೇಶದ ಲೀಗ್ಗಳಿಂದ ಹಿಂದೆ ಸರಿಯುತ್ತಿದ್ದಾರೆ. ಆದರೆ ಬೇರೆ ಲೀಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಆಟಗಾರರು ಐಪಿಎಲ್ ಅನ್ನೇ ಆಯ್ಕೆ ಮಾಡುತ್ತಿರುವುದು ಇತರೆ ಲೀಗ್ಗಳ ಪ್ರಭಾವ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದೆಡೆ ಡೇವಿಡ್ ವಾರ್ನರ್ ಬಿಗ್ ಬ್ಯಾಷ್ ಲೀಗ್ನಿಂದ ಹೊರಗುಳಿಯಲು ಮುಖ್ಯ ಕಾರಣ ಯುಎಇ ಟಿ20 ಲೀಗ್ ಎನ್ನಲಾಗುತ್ತಿದೆ. ಏಕೆಂದರೆ ಯುಎಇಯಲ್ಲಿ ನಡೆಯಲಿರುವ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳು ಹೂಡಿಕೆ ಮಾಡಿವೆ. ಹೀಗಾಗಿ ಬಿಗ್ ಬ್ಯಾಷ್ ವೇಳೆ ವಿಶ್ರಾಂತಿ ಪಡೆದು ಯುಎಇ ಟಿ20 ಲೀಗ್‌ನಲ್ಲಿ ಕಾಣಿಸಿಕೊಳ್ಳಲು ಡೇವಿಡ್ ವಾರ್ನರ್ ಬಯಸಿದ್ದಾರೆ ಎನ್ನಲಾಗುತ್ತಿದೆ.
ಅಂದರೆ ವಿಶ್ವದ ಇತರೆ ಲೀಗ್ಗಳ ಮೇಲೂ ಐಪಿಎಲ್ ಫ್ರಾಂಚೈಸಿಗಳು ಪ್ರಭಾವ ಬೀರುತ್ತಿದೆ ಎಂಬುದು ಸ್ಪಷ್ಟ. ಇದು ನೇರವಾಗಿ ಬಿಗ್ ಬ್ಯಾಷ್ ಸೇರಿದಂತೆ ಇತರೆ ಲೀಗ್ಗಳ ಮೇಲೆ ಹಾನಿಯುಂಟುಮಾಡಬಹುದು ಎಂದು ಗಿಲ್‌ಕ್ರಿಸ್ಟ್ ಅಭಿಪ್ರಾಯಪಟ್ಟಿದ್ದಾರೆ. ಡೇವಿಡ್ ವಾರ್ನರ್ ಅವರನ್ನು BBL ನಲ್ಲಿ ಆಡಲು ಬಲವಂತ ಮಾಡಲಾಗುವುದಿಲ್ಲ. ನಾನು ಇದನ್ನು ಅರ್ಥಮಾಡಿಕೊಂಡಿದ್ದೇನೆ.
ವಾರ್ನರ್ ಮಾತ್ರವಲ್ಲ, ಇತರ ಆಟಗಾರರೂ ಸಹ ಯುಎಇ ಲೀಗ್‌ಗೆ ಸೇರಲಿದ್ದಾರೆ. ಇದು ಇತರೆ ಕ್ರಿಕೆಟ್ ಲೀಗ್ಗಳ ಮೇಲೆ IPL ಫ್ರಾಂಚೈಸಿಗಳ ಜಾಗತಿಕ ಪ್ರಾಬಲ್ಯವಾಗಿದೆ. ಇದನ್ನೇ ನಾನು ಅಪಾಯಕಾರಿ ಎನ್ನುತ್ತೇನೆ. ಏಕೆಂದರೆ ಕ್ರಿಕೆಟ್ ಲೀಗ್ ಎಂಬುದು ಏಕಸ್ವಾಮ್ಯದತ್ತ ಸಾಗುತ್ತಿದೆ ಎಂದು ಇದೇ ವೇಳೆ ಗಿಲ್‌ಕ್ರಿಸ್ಟ್ ಹೇಳಿದರು.
ಇದೇ ವೇಳೆ ಈ ವಿಚಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಗಂಭೀರವಾಗಿ ಪರಿಗಣಿಸುವಂತೆ ಗಿಲ್‌ಕ್ರಿಸ್ಟ್ ಮನವಿ ಮಾಡಿದ್ದಾರೆ. ಏಕೆಂದರೆ ಆಸ್ಟ್ರೇಲಿಯಾದ ಇತರ ಕ್ರಿಕೆಟಿಗರೂ ವಾರ್ನರ್ ಹಾದಿಯನ್ನು ಅನುಸರಿಸಬಹುದು. ನಿಸ್ಸಂಶಯವಾಗಿ ಯುಎಇಯಲ್ಲಿ ನಡೆಯಲಿರುವ ಟಿ20 ಲೀಗ್‌ನಲ್ಲಿ ಆಟಗಾರರು ಬಿಗ್ ಬ್ಯಾಷ್‌ಗಿಂತ ಹೆಚ್ಚು ಹಣವನ್ನು ಪಡೆಯಲಿದ್ದಾರೆ. ಹೀಗಾಗಿ ಇಂತಹ ವಿಚಾರಗಳ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ಗಿಲ್ಲಿ ತಿಳಿಸಿದರು.
ವಿಶೇಷ ಎಂದರೆ ಆ್ಯಡಂ ಗಿಲ್‌ಕ್ರಿಸ್ಟ್ ಐಪಿಎಲ್ನಲ್ಲಿ ಎರಡು ತಂಡಗಳ ಪರ ಆಡಿದ್ದಾರೆ. ಡೆಕ್ಕನ್ ಚಾರ್ಜರ್ಸ್ (ಎಸ್ಆರ್ಹೆಚ್) ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ಆಡಿದ್ದ ಗಿಲ್‌ಕ್ರಿಸ್ಟ್ ಈ ಎರಡೂ ತಂಡಗಳ ನಾಯಕರಾಗಿ ಕಾಣಿಸಿಕೊಂಡಿದ್ದರು. ಅದರಲ್ಲೂ 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ ಗಿಲ್‌ಕ್ರಿಸ್ಟ್ ಚಾಂಪಿಯನ್ ಪಟ್ಟವನ್ನೂ ಕೂಡ ತಂದುಕೊಟ್ಟಿದ್ದರು. ಇದೀಗ ಐಪಿಎಲ್ ಫ್ರಾಂಚೈಸಿ ಇತರೆ ಲೀಗ್ ಮೇಲೆ ಬೀರುತ್ತಿರುವ ಪ್ರಭಾವ ಬಗ್ಗೆ ಪ್ರಶ್ನೆಗಳನ್ನೆತ್ತುವ ಮೂಲಕ ಗಮನ ಸೆಳೆದಿದ್ದಾರೆ.