ಹಿಂದೆಂದೂ ಕಾಣದ ಟ್ವಿಸ್ಟ್​… ಸಣ್ಣ ತಪ್ಪಿನಿಂದ ಪಂದ್ಯದ ಫಲಿತಾಂಶವೇ ಬದಲಾಯ್ತು!

ಕ್ರಿಕೆಟ್ ಮೈದಾನದಲ್ಲಿ ಕೊನೆಯ ಎಸೆತದವರೆಗೂ ರೋಚಕತೆ ಇರುವುದು ಸಾಮಾನ್ಯ. ಆದರೆ ಸೂಪರ್ ಓವರ್ ಆಡಲು ಸಜ್ಜಾಗುತ್ತಿದ್ದ ತಂಡವೊಂದು, ಕೇವಲ ಒಂದು ಸೆಕೆಂಡ್‌ನ ತಾಂತ್ರಿಕ ತಪ್ಪಿನಿಂದಾಗಿ ಸೋತು ತಲೆಬಾಗಿ ಹೊರನಡೆಯುವಂತಾದರೆ? ಇಂತಹದ್ದೇ ಒಂದು ನಂಬಲಾಗದ ಹೈ-ಡ್ರಾಮಾಕ್ಕೆ ಮಹಿಳಾ ಬಿಗ್ ಬ್ಯಾಷ್ ಲೀಗ್ ಸಾಕ್ಷಿಯಾಗಿದೆ.

ಹಿಂದೆಂದೂ ಕಾಣದ ಟ್ವಿಸ್ಟ್​... ಸಣ್ಣ ತಪ್ಪಿನಿಂದ ಪಂದ್ಯದ ಫಲಿತಾಂಶವೇ ಬದಲಾಯ್ತು!
Wbbl
Image Credit source: WBBL

Updated on: Nov 05, 2026 | 12:36 PM

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿ ಮತ್ತು ಅಷ್ಟೇ ವಿಲಕ್ಷಣವಾದ ಮುಕ್ತಾಯಕ್ಕೆ ವುಮೆನ್ಸ್ ಬಿಗ್ ಬ್ಯಾಷ್ ಲೀಗ್ (WBBL) ಸಾಕ್ಷಿಯಾಗಿದೆ. ಹೋಬಾರ್ಟ್ ಹರಿಕೇನ್ಸ್ ಹಾಗೂ ಮೆಲ್ಬೋರ್ನ್ ರೆನೆಗೇಡ್ಸ್ ಮಹಿಳಾ ತಂಡಗಳ ನಡುವೆ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ, ವಿಕೆಟ್ ಕೀಪರ್ ಮಾಡಿದ ಒಂದು ತಾಂತ್ರಿಕ ತಪ್ಪು ಇಡೀ ಪಂದ್ಯದ ಫಲಿತಾಂಶವನ್ನೇ ಬದಲಿಸಿತು.

ಹೋಬಾರ್ಟ್​ನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ನಾಯಕಿ ಸೋಫಿ ಮೊಲಿನ್ಯು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೋಬಾರ್ಟ್ ಹರಿಕೇನ್ಸ್ ತಂಡ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿತು.

Loading...

155 ರನ್​ಗಳ ಗುರಿ ಪಡೆದ ಮೆಲ್ಬೋರ್ನ್​ ರೆನೆಗೇಡ್ಸ್ ಪರ ಆರಂಭಿಕ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ 59 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜಾರ್ಜಿಯಾ ವೆರ್ಹ್ಯಾಮ್ 17 ರನ್​ಗಳ ಕೊಡುಗೆ ನೀಡಿದರು. ಇದಾಗ್ಯೂ ಮೆಲ್ಬೋರ್ನ್​ ತಂಡಕ್ಕೆ ಗೆಲ್ಲಲು ಕೊನೆಯ ಓವರ್​ನಲ್ಲಿ 7 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ದಾಳಿಗಿಳಿದ ಹೋಬಾರ್ಟ್​ ಹರಿಕೇನ್ಸ್ ತಂಡ ನಾಯಕಿ ನಿಕೋಲಾ ಕೇರಿ ಕೊನೆಯ ಓವರ್​ನ ಮೊದಲ 4 ಎಸೆತಗಳಲ್ಲಿ ನೀಡಿದ್ದು ಕೇವಲ 2 ರನ್ ಮಾತ್ರ. ಇನ್ನು ಐದನೇ ಎಸೆತದಲ್ಲಿ ಥರ್ಡ್​ಮ್ಯಾನ್ ಬೌಂಡರಿಯತ್ತ ಫೋರ್ ಬಾರಿಸುವಲ್ಲಿ ಡಿಯಾಂಡ್ರ ಡಾಟಿನ್ ಯಶಸ್ವಿಯಾದರು. ಅದರಂತೆ ಕೊನೆಯ ಎಸೆತದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ ಕೇವಲ 1 ರನ್ ಬೇಕಿತ್ತು.

ಆದರೆ ಅಂತಿಮ ಎಸೆತವನ್ನು ಡಿಯಾಂಡ್ರ ಡಾಟಿನ್ ಸಂಪೂರ್ಣವಾಗಿ ಮಿಸ್ ಮಾಡಿದರು. ಚೆಂಡು ನೇರವಾಗಿ ವಿಕೆಟ್ ಕೀಪರ್ ಲಿಸೆಲ್ ಲೀ ಕೈ ಸೇರಿತು. ಪಂದ್ಯ ‘ಟೈ’ ಆಗಿ, ಸೂಪರ್ ಓವರ್‌ಗೆ ದಾರಿಯಾಯಿತೆಂದು ಸಂಭ್ರಮಿಸುತ್ತಾ ಎರಡೂ ತಂಡಗಳ ಆಟಗಾರ್ತಿಯರು ಮೈದಾನದ ಮಧ್ಯಕ್ಕೆ ಧಾವಿಸಿದರು.

ಥರ್ಡ್ ಅಂಪೈರ್ ಟ್ವಿಸ್ಟ್ !

ಆದರೆ, ಅಸಲಿ ಟ್ವಿಸ್ಟ್ ಸಿಕ್ಕಿದ್ದೇ ಆಗ! ಕೀಪರ್ ಲಿಸೆಲ್ ಲೀ ಚೆಂಡನ್ನು ಹಿಡಿದ ರೀತಿಯನ್ನು ಥರ್ಡ್ ಅಂಪೈರ್ ಮರುಪರಿಶೀಲನೆ  ನಡೆಸಿದರು. ರಿಪ್ಲೇನಲ್ಲಿ ಲಿಸೆಲ್ ಲೀ ಚೆಂಡು ವಿಕೆಟ್ ಲೈನ್ ಅನ್ನು ಸಂಪೂರ್ಣವಾಗಿ ದಾಟುವ ಮುನ್ನವೇ, ಸ್ಟಂಪ್‌ಗಿಂತ ಸ್ವಲ್ಪ ಮುಂದೆ ಕೈಚಾಚಿ ಚೆಂಡನ್ನು ಗ್ಲೌಸ್‌ನಲ್ಲಿ ಹಿಡಿದಿರುವುದು ಸ್ಪಷ್ಟವಾಗಿ ಕಂಡುಬಂದಿತು.

ಕ್ರಿಕೆಟ್‌ನ ನಿಯಮ 27.3ರ ಪ್ರಕಾರ, ಬ್ಯಾಟರ್‌ನ ಬ್ಯಾಟ್ ಅಥವಾ ದೇಹಕ್ಕೆ ಚೆಂಡು ತಗುಲದೆ ಇದ್ದಲ್ಲಿ, ಅಥವಾ ಬ್ಯಾಟರ್ ರನ್ ಓಡಲು ಪ್ರಯತ್ನಿಸದಿದ್ದರೆ, ಚೆಂಡು ಸ್ಟಂಪ್ಸ್ ದಾಟುವವರೆಗೂ ವಿಕೆಟ್ ಕೀಪರ್ ಸ್ಟಂಪ್ಸ್‌ಗಿಂತ ಮುಂದೆ ಬರುವಂತಿಲ್ಲ. ಲೀ ಈ ನಿಯಮವನ್ನು ಉಲ್ಲಂಘಿಸಿದ್ದರಿಂದ ಅಂಪೈರ್‌ಗಳು ಅದನ್ನು ‘ನೋ-ಬಾಲ್’ ಎಂದು ಘೋಷಿಸಿದರು.

ರನ್ ಗಳಿಸದೆಯೇ ಗೆದ್ದ ರೆನೆಗೇಡ್ಸ್!

ಅಂಪೈರ್ ನೋ-ಬಾಲ್ ನೀಡುತ್ತಿದ್ದಂತೆ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ ಉಚಿತವಾಗಿ 1 ರನ್ ಲಭಿಸಿತು. ಇದರೊಂದಿಗೆ ಯಾವುದೇ ಹೆಚ್ಚುವರಿ ಬ್ಯಾಟಿಂಗ್ ಶ್ರಮವಿಲ್ಲದೆ ರೆನೆಗೇಡ್ಸ್ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಹೋಬಾರ್ಟ್ ಹರಿಕೇನ್ಸ್ ತಂಡ ಗೆಲುವಿನ ಹೊಸ್ತಿಲಲ್ಲಿ ನಿಯಮದ ಅರಿವಿಲ್ಲದೆ ಸೋಲೊಪ್ಪಿಕೊಳ್ಳಬೇಕಾಯಿತು. ಈ ವಿಲಕ್ಷಣ ತಪ್ಪು ಸದ್ಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us