ENG vs NZ: ಜೋ ರೂಟ್ ದಾಖಲೆಯ ಶತಕ; ಮೊದಲ ಟೆಸ್ಟ್​ನಲ್ಲಿ ಕಿವೀಸ್​ಗೆ ಸೋಲಿನ ರುಚಿ ತೋರಿಸಿದ ಆಂಗ್ಲರು

ENG vs NZ: ಲಾರ್ಡ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ನ್ಯೂಜಿಲೆಂಡ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು.

ENG vs NZ: ಜೋ ರೂಟ್ ದಾಖಲೆಯ ಶತಕ; ಮೊದಲ ಟೆಸ್ಟ್​ನಲ್ಲಿ ಕಿವೀಸ್​ಗೆ ಸೋಲಿನ ರುಚಿ ತೋರಿಸಿದ ಆಂಗ್ಲರು
ಜೋ ರೂಟ್
Follow us
TV9 Web
| Updated By: ಪೃಥ್ವಿಶಂಕರ

Updated on:Jun 05, 2022 | 5:20 PM

ಲಾರ್ಡ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ನ್ಯೂಜಿಲೆಂಡ್ (ENG vs NZ) ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ನ್ಯೂಜಿಲೆಂಡ್ ಇಂಗ್ಲೆಂಡ್ ಗೆಲುವಿಗೆ 277 ರನ್​ಗಳ ಗುರಿ ನೀಡಿತ್ತು. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನ ಕಳಪೆ ಪ್ರದರ್ಶನವನ್ನು ಬಿಟ್ಟು, ಮಾಜಿ ನಾಯಕ ಜೋ ರೂಟ್ (Joe Root) ಅವರ ಅತ್ಯುತ್ತಮ ಶತಕದ ಇನ್ನಿಂಗ್ಸ್‌ನ ಆಧಾರದ ಮೇಲೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಈ ಗುರಿಯನ್ನು ಸಾಧಿಸಿತು. ನೂತನ ನಾಯಕ ಬೆನ್ ಸ್ಟೋಕ್ಸ್ (Ben Stokes) ಮತ್ತು ನೂತನ ಟೆಸ್ಟ್ ಕೋಚ್ ಬ್ರೆಂಡನ್ ಮೆಕಲಮ್ (Brendon McCullum) ಅವರ ಮಾರ್ಗದರ್ಶನದಲ್ಲಿ ನ್ಯೂ ಇಂಗ್ಲೆಂಡ್ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮೊದಲ ಇನಿಂಗ್ಸ್‌ನಲ್ಲಿ ಎರಡೂ ತಂಡಗಳಿಗೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 132 ರನ್ ಗಳಿಸಿತ್ತು. ಮತ್ತೊಂದೆಡೆ, ಇಂಗ್ಲೆಂಡ್ ತಂಡ ಮೊದಲನೇ ಇನ್ನಿಂಗ್ಸ್‌ನಲ್ಲಿ 141 ರನ್‌ಗಳಿಗೆ ಆಲೌಟ್ ಆಗಿತ್ತು. ನಂತರ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 285 ರನ್ ಗಳಿಸಿ ಇಂಗ್ಲೆಂಡ್‌ಗೆ ಉತ್ತಮ ಗುರಿ ನೀಡಿತು.

ರೂಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 115 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 170 ಎಸೆತಗಳನ್ನು ಎದುರಿಸಿ 12 ಬೌಂಡರಿಗಳನ್ನು ಬಾರಿಸಿದರು. ನಾಯಕತ್ವ ತೊರೆದ ನಂತರ ರೂಟ್‌ಗೆ ಇದು ಮೊದಲ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಅವರು ತಮ್ಮ ಹಳೆಯ ಫಾರ್ಮ್‌ಗೆ ಮರಳಿದ್ದಾರೆ. ಇದು ಅವರ ವೃತ್ತಿ ಜೀವನದ 26ನೇ ಶತಕವಾಗಿದ್ದು, ಇದರೊಂದಿಗೆ ಟೆಸ್ಟ್‌ನಲ್ಲಿ 10,000 ರನ್ ಪೂರೈಸಿದ್ದಾರೆ. ಇವರಲ್ಲದೆ ನಾಯಕ ಬೆನ್ ಸ್ಟೋಕ್ಸ್ 54 ರನ್ ಗಳಿಸಿದರು. ಸ್ಟೋಕ್ಸ್ 110 ಎಸೆತಗಳ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್ ಮತ್ತು ಮೂರು ಬೌಂಡರಿ ಬಾರಿಸಿದರು.

ಇದನ್ನೂ ಓದಿ:ಜೋ ರೂಟ್ ಬದಲಿಗೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ಯಾರಿಗೆ ಸಿಗಲಿದೆ? ರೇಸ್​ನಲ್ಲಿರುವವರ ಪಟ್ಟಿ ಇಲ್ಲಿದೆ

ಗೆಲುವು ಖಚಿತವಾಗಿತ್ತು

ನಾಲ್ಕನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಐದು ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು. ಗೆಲುವಿನಿಂದ 61 ರನ್‌ಗಳ ಅಂತರದಲ್ಲಿದ್ದರು. ರೂಟ್ ನಾಲ್ಕನೇ ದಿನದಾಟವನ್ನು 77 ರನ್‌ಗಳಿಂದ ವಿಸ್ತರಿಸಿದರು. ಬೆನ್ ಫೋಕ್ಸ್ ಒಂಬತ್ತು ರನ್‌ಗಳೊಂದಿಗೆ ಇನ್ನಿಂಗ್ಸ್‌ ಆರಂಭಿಸಿದರು. ಈ ಇಬ್ಬರೂ ನ್ಯೂಜಿಲೆಂಡ್‌ಗೆ ಯಾವುದೇ ಯಶಸ್ಸು ಸಾಧಿಸಲು ಅವಕಾಶ ನೀಡಲಿಲ್ಲ. ಯಾವುದೇ ತೊಂದರೆಯಿಲ್ಲದೆ ರೂಟ್ ಶತಕ ಪೂರೈಸಿದರು. ಫೋಕ್ಸ್ 32 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರಿಬ್ಬರೂ ಆರನೇ ವಿಕೆಟ್‌ಗೆ 118 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಫೋಕ್ಸ್ 92 ಎಸೆತಗಳನ್ನು ಎದುರಿಸಿ ಮೂರು ಬೌಂಡರಿಗಳನ್ನು ಬಾರಿಸಿದರು.

ಕೈಲ್ ಜೇಮ್ಸನ್ ಉತ್ತಮ ಬೌಲಿಂಗ್

ಪಂದ್ಯದ ಮೂರನೇ ದಿನ, ನ್ಯೂಜಿಲೆಂಡ್‌ನ ಯುವ ಬಲಗೈ ವೇಗದ ಬೌಲರ್ ಕೈಲ್ ಜೇಮ್ಸನ್ ಇಂಗ್ಲೆಂಡ್‌ಗೆ ಸಾಕಷ್ಟು ತೊಂದರೆ ನೀಡಿದ್ದರು. ಅವರು ಅಲೆಕ್ಸ್ ಲೀಸ್ (20), ಜಾಕ್ ಕ್ರೌಲಿ (9), ಜಾನಿ ಬೈರ್‌ಸ್ಟೋವ್ (16), ಸ್ಟೋಕ್ಸ್ ಅವರ ವಿಕೆಟ್ ಪಡೆದರು. ಅವರನ್ನು ಹೊರತುಪಡಿಸಿ, ಟ್ರೆಂಟ್ ಬೌಲ್ಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿ ಒಲಿ ಪೋಪ್ (10) ಅವರನ್ನು ಔಟ್ ಮಾಡಿದರು. ಇದಕ್ಕೂ ಮುನ್ನ ನ್ಯೂಜಿಲೆಂಡ್‌ನ ಇಬ್ಬರು ಬ್ಯಾಟ್ಸ್‌ಮನ್‌ಗಳು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಉತ್ತಮ ಸ್ಕೋರ್‌ಗೆ ಕೊಂಡೊಯ್ದರು. ಡೆರಿಲ್ ಮಿಚೆಲ್ 108 ರನ್ ಮತ್ತು ಟಾಮ್ ಬ್ಲಂಡಲ್ 96 ರನ್ ಗಳಿಸಿದರು. ಮಿಚೆಲ್ ಮತ್ತು ಬ್ಲಂಡಲ್ 195 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು, ಅದರ ಆಧಾರದ ಮೇಲೆ ನ್ಯೂಜಿಲೆಂಡ್ 250 ರನ್ ದಾಟಲು ಸಾಧ್ಯವಾಯಿತು.

Published On - 4:48 pm, Sun, 5 June 22