IND vs ENG: ಇಂಗ್ಲೆಂಡ್​​ಗೆ ಕಠಿಣ ಗುರಿ ನೀಡಿದ ಟೀಮ್ ಇಂಡಿಯಾ

India vs England 2nd T20I: ಭಾರತ ಮತ್ತು ಇಂಗ್ಲೆಂಡ್ ಟಿ20 ಕ್ರಿಕೆಟ್​ನಲ್ಲಿ ಈವರೆಗೆ 31 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 18 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಇಂಗ್ಲೆಂಡ್ ಗೆದ್ದಿರುವುದು ಕೇವಲ 12 ಪಂದ್ಯಗಳಲ್ಲಿ ಮಾತ್ರ. ಇದೀಗ ಉಭಯ ತಂಡಗಳು 32ನೇ ಬಾರಿ ಮುಖಾಮುಖಿಯಾಗಿದೆ.

IND vs ENG: ಇಂಗ್ಲೆಂಡ್​​ಗೆ ಕಠಿಣ ಗುರಿ ನೀಡಿದ ಟೀಮ್ ಇಂಡಿಯಾ
Team India
Image Credit source: BCCI

Updated on: Jul 04, 2026 | 8:46 PM

ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 190 ರನ್​ ಕಲೆಹಾಕಿದೆ. ಮ್ಯಾಚೆಂಸ್ಟರ್​ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​ಗೆ 50 ರನ್​ ಪೇರಿಸಿದ ಬಳಿಕ ವೈಭವ್ ಸೂರ್ಯವಂಶಿ (14) ಸ್ಟಂಪ್ ಔಟ್ ಆಗಿ ಹೊರ ನಡೆದರು. ಈ ಹಂತದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಜೊತೆಗೂಡಿ ಅಭಿಷೇಕ್ ಶರ್ಮಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಪವರ್​ಪ್ಲೇನಲ್ಲೇ 65 ರನ್ ಕಲೆಹಾಕಿತು.

ಪವರ್​ಪ್ಲೇ ಮುಕ್ತಾಯವಾಗುತ್ತಿದ್ದಂತೆ ಭರ್ಜರಿ ಹೊಡೆತಕ್ಕೆ ಮುಂದಾಗಿ ಅಭಿಷೇಕ್ ಶರ್ಮಾ (43 ರನ್, 24 ಎಸೆತಗಳು) ವಿಕೆಟ್ ಒಪ್ಪಿಸಿದರು. ಈ ವೇಳೆ ಆಗಮಿಸಿದ ನಾಯಕ ಶ್ರೇಯಸ್ ಅಯ್ಯರ್ 22 ಎಸೆತಗಳಲ್ಲಿ 37 ರನ್ ಬಾರಿಸಿದರು.

ಮತ್ತೊಂದಡೆ ರನ್​ಗಳಿಸಲು ಪರದಾಡಿದ  ಇಶಾನ್ ಕಿಶನ್ 49 ರನ್​ ಬಾರಿಸಲು ತೆಗೆದುಕೊಂಡಿದ್ದು ಬರೋಬ್ಬರಿ 40 ಎಸೆತಗಳನ್ನು. ಈ ನಿಧಾನಗತಿಯ ಬ್ಯಾಟಿಂಗ್​ನಿಂದ ಭಾರತದ ಸ್ಕೋರ್ ವೇಗವು ಕುಂಠಿತವಾಯಿತು.  ಆ ಬಳಿಕ ಬಂದ ಶಿವಂ ದುಬೆ 5 ರನ್​ಗಳಿಸಿ ಔಟಾದರೆ, ಅಕ್ಷರ್ ಪಟೇಲ್ 2 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಜೋಫ್ರಾ ಆರ್ಚರ್ ಎಸೆದ 20ನೇ ಓವರ್​ನಲ್ಲಿ ಅಬ್ಬರಿಸಿದ ತಿಲಕ್ ವರ್ಮಾ ಮೊದಲ ಮೂರು ಎಸೆತಗಳಲ್ಲಿ 6,6,4 ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 190 ರನ್​ ಕಲೆಹಾಕಿದೆ.

ಭಾರತ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.

ಇದನ್ನೂ ಓದಿ: ಇತಿಹಾಸ ಬರೆದರೂ ವಿಶ್ವ ದಾಖಲೆ ಮುರಿಯಲು ಸಾಧ್ಯವಾಗಿಲ್ಲ!

ಇಂಗ್ಲೆಂಡ್ (ಪ್ಲೇಯಿಂಗ್ XI): ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಜೋಶ್ ಟಂಗ್.

 

 

Loading...
Unable to load recommendations.
Follow Us