ಅಫ್ಘಾನಿಸ್ತಾನ್ ತಂಡದ ಗೆಲುವಿನ ಹಿಂದಿದೆ ಇಂಗ್ಲೆಂಡ್ನ ಮಾಸ್ಟರ್ಮೈಂಡ್
ಅಫ್ಘಾನ್ ಆಟಗಾರರಿಗೆ ಇನಿಂಗ್ಸ್ ಆರಂಭಿಸುವ ಮುನ್ನ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಪ್ರದರ್ಶಿಸುವಂತೆ ಟ್ರಾಟ್ ಸೂಚನೆ ನೀಡಿದ್ದರು. ಅದರಂತೆ ನಿರ್ಭೀತಿಯಿಂದ ಬ್ಯಾಟ್ ಬೀಸಿದ್ದ ರಹಮಾನುಲ್ಲಾ ಗುರ್ಬಾಝ್ (80) ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿದ್ದರು.
ಏಕದಿನ ವಿಶ್ವಕಪ್ನ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿ ಅಫ್ಘಾನಿಸ್ತಾನ್ ಐತಿಹಾಸಿಕ ಗೆಲುವು ದಾಖಲಿಸಿದೆ. ಅಫ್ಘಾನ್ ಪಡೆಯ ಈ ಗೆಲುವಿನ ಹಿಂದಿರುವುದು ಇಂಗ್ಲೆಂಡ್ನ ಮಾಸ್ಟರ್ಮೈಂಡ್ ಎಂಬುದು ವಿಶೇಷ. ಈ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಫ್ಘಾನಿಸ್ತಾನ್ ತಂಡದ ಕೋಚ್, ನಮ್ಮ ತಂಡವು ಯಾವುದೇ ಟೀಮ್ ಅನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ ಎಂದಿದ್ದರು. ಕೋಚ್ನ ಹೇಳಿಕೆಯನ್ನು ಸಮರ್ಥಿಸುವಂತೆ ಅಫ್ಘಾನಿಸ್ತಾನ್ ತಂಡ ಬಲಿಷ್ಠ ಇಂಗ್ಲೆಂಡ್ ತಂಡವನ್ನೇ ಬಗ್ಗು ಬಡಿದಿದೆ.
ವಿಶೇಷ ಎಂದರೆ ಇಲ್ಲಿ ಅಫ್ಘಾನಿಸ್ತಾನ್ ತಂಡದ ಕೋಚ್ ಮಾಜಿ ಇಂಗ್ಲೆಂಡ್ ಆಟಗಾರ. ಹೀಗಾಗಿ ಆಂಗ್ಲರನ್ನು ಬಗ್ಗು ಬಡಿಯಲು ಅಫ್ಘಾನ್ ತಂಡ ಮುಖ್ಯ ಕೋಚ್ ಜೊನಾಥನ್ ಟ್ರಾಟ್ ವಿಶೇಷ ಯೋಜನೆ ರೂಪಿಸಿದ್ದರು. ಈ ಯೋಜನೆಯನ್ನು ಸಫಲಗೊಳಿಸುವಲ್ಲಿ ಅಫ್ಘಾನ್ ಆಟಗಾರರು ಯಶಸ್ವಿಯಾಗಿದ್ದಾರೆ.
ಅಫ್ಘಾನ್ ಆಟಗಾರರಿಗೆ ಇನಿಂಗ್ಸ್ ಆರಂಭಿಸುವ ಮುನ್ನ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಪ್ರದರ್ಶಿಸುವಂತೆ ಟ್ರಾಟ್ ಸೂಚನೆ ನೀಡಿದ್ದರು. ಅದರಂತೆ ನಿರ್ಭೀತಿಯಿಂದ ಬ್ಯಾಟ್ ಬೀಸಿದ್ದ ರಹಮಾನುಲ್ಲಾ ಗುರ್ಬಾಝ್ (80) ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿದ್ದರು.
ಅಲ್ಲದೆ ಈ ಇನಿಂಗ್ಸ್ ಅನ್ನು ಇತರೆ ಬ್ಯಾಟರ್ಗಳು ಉತ್ತಮವಾಗಿ ಕೊಂಡೊಯ್ದರು. ಪರಿಣಾಮ 49.5 ಓವರ್ಗಳಲ್ಲಿ ಅಫ್ಘಾನಿಸ್ತಾನ್ ಆಲೌಟ್ ಆದರೂ 284 ರನ್ ಕಲೆಹಾಕಿತ್ತು.
285 ರನ್ಗಳು ಬಲಿಷ್ಠ ಇಂಗ್ಲೆಂಡ್ ಪಾಲಿಗೆ ಸುಲಭ ಗುರಿ ಎಂಬುದು ಜೊನಾಥನ್ ಟ್ರಾಟ್ಗೂ ಚೆನ್ನಾಗಿ ಗೊತ್ತಿತ್ತು. ಆದರೆ ಅಫ್ಘಾನ್ ಸ್ಪಿನ್ನರ್ಗಳ ಮೇಲೆ ವಿಶ್ವಾಸವಿರಿಸಿದ್ದ ಕೋಚ್ ಪವರ್ಪ್ಲೇನಲ್ಲೇ ಮುಜೀಬ್ ರೆಹಮಾನ್ನಿಂದ ಓವರ್ ಹಾಕಿಸಲು ಸೂಚಿಸಿದ್ದರು.
ಇತ್ತ ವೇಗಿಗಳಿಗೆ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ದ ಇಂಗ್ಲೆಂಡ್ ಬ್ಯಾಟರ್ಗಳು ಸ್ಪಿನ್ನರ್ಗಳ ವಿರುದ್ಧ ರನ್ಗಳಿಸಲು ಪರದಾಡಿದರು. ಇದರ ಸಂಪೂರ್ಣ ಲಾಭ ಪಡೆದ ಮುಜೀಬ್ ಉರ್ ರೆಹಮಾನ್ 3 ವಿಕೆಟ್ ಉರುಳಿಸಿದರೆ, ಮೊಹಮ್ಮದ್ ನಬಿ 2 ವಿಕೆಟ್ ಪಡೆದರು. ಅಂತಿಮ ಹಂತದಲ್ಲಿ ಸ್ಪಿನ್ ಮೋಡಿ ಮಾಡಿದ ರಶೀದ್ ಖಾನ್ 3 ವಿಕೆಟ್ ಕಬಳಿಸಿದರು. ಇದರೊಂದಿಗೆ ಇಂಗ್ಲೆಂಡ್ ತಂಡವು 40.3 ಓವರ್ಗಳಲ್ಲಿ 215 ರನ್ಗಳಿಗೆ ಆಲೌಟ್ ಆಯಿತು.
ಈ ಮೂಲಕ ಸ್ಪಿನ್ ಅಸ್ತ್ರಗಳನ್ನೇ ಬಳಸಿ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿಯುವ ಕೋಚ್ ಜೊನಾಥನ್ ಟ್ರಾಟ್ ಅವರ ಮಾಸ್ಟರ್ಪ್ಲ್ಯಾನ್ ಯಶಸ್ವಿಯಾಯಿತು. ಇತ್ತ ಹಾಲಿ ಚಾಂಪಿಯನ್ನರಿಗೆ ಸೋಲುಣಿಸಿರುವ ಆತ್ಮ ವಿಶ್ವಾಸದಲ್ಲಿ ಅಫ್ಘಾನ್ ಪಡೆ ತೇಲುತ್ತಿದೆ. ಈ ಆತ್ಮವಿಶ್ವಾಸದಲ್ಲಿ ಮುಂಬರುವ ಪಂದ್ಯಗಳಲ್ಲಿ ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳಿಗೂ ಸೋಲುಣಿಸುವ ವಿಶ್ವಾಸದಲ್ಲಿದೆ ಅಫ್ಘಾನ್ ಪಡೆ.
ಇದನ್ನೂ ಓದಿ: ಚೇಸ್ ಮಾಸ್ಟರ್…ಸಚಿನ್ ವಿಶ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ
ಇಂಗ್ಲೆಂಡ್ ಪರ ಮಿಂಚಿದ್ದ ಟ್ರಾಟ್:
ಇಂಗ್ಲೆಂಡ್ ಪರ 68 ಏಕದಿನ ಪಂದ್ಯಗಳನ್ನಾಡಿರುವ ಜೊನಾಥನ್ ಟ್ರಾಟ್ ಒಟ್ಟು 2819 ರನ್ ಕಲೆಹಾಕಿದ್ದಾರೆ. ಈ ವೇಳೆ 4 ಶತಕ ಹಾಗೂ 22 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದರು.
ಹಾಗೆಯೇ 52 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಟ್ರಾಟ್ ಒಟ್ಟು 3835 ರನ್ ಗಳಿಸಿದ್ದರು. ಈ ವೇಳೆ 2 ದ್ವಿಶತಕ, 9 ಶತಕ ಹಾಗೂ 19 ಅರ್ಧಶತಕಗಳನ್ನು ಬಾರಿಸಿದ್ದಾರೆ.
2ನೇ ಬಾರಿ ಗೆದ್ದು ಬೀಗಿದ ಅಫ್ಘಾನ್:
ಏಕದಿನ ವಿಶ್ವಕಪ್ನಲ್ಲಿ ಇದು ಅಫ್ಘಾನಿಸ್ತಾನ್ ತಂಡದ 2ನೇ ಗೆಲುವು. ಇದಕ್ಕೂ ಮುನ್ನ 2015ರ ಏಕದಿನ ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನ್ ಪಡೆ 1 ವಿಕೆಟ್ಗಳ ರೋಚಕ ಜಯ ಸಾಧಿಸಿತ್ತು. ಇದೀಗ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸುವ ಮೂಲಕ ಅಫ್ಘಾನಿಸ್ತಾನ್ ತಂಡ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.