Eoin Morgan: ಇಯಾನ್ ಮೋರ್ಗನ್ ಶೀಘ್ರದಲ್ಲೇ ನಿವೃತ್ತಿ: ಇಂಗ್ಲೆಂಡ್ ತಂಡಕ್ಕೆ ಹೊಸ ನಾಯಕ..!
Eoin Morgan: ಐಪಿಎಲ್ನಲ್ಲಿ ಈ ಹಿಂದೆ ಕೆಕೆಆರ್ ತಂಡದ ನಾಯಕರಾಗಿ ಕೂಡ ವಿಫಲವಾಗಿದ್ದರು. ಹೀಗಾಗಿ ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.
ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗನ್ (Eoin Morgan) ಶೀಘ್ರದಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮೋರ್ಗನ್ ಕ್ರಿಕೆಟ್ ಅಂಗಳಕ್ಕೆ ಗುಡ್ ಬೈ ಹೇಳಲು ಬಯಸಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಹೀಗಾಗಿ ಟೀಮ್ ಇಂಡಿಯಾ (Team India) ವಿರುದ್ದದ ಸರಣಿ ಇಯಾನ್ ಮೋರ್ಗನ್ ಪಾಲಿಗೆ ಕೊನೆಯ ಪಂದ್ಯವಾಗಿರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಮೋರ್ಗನ್ ನಿವೃತ್ತಿಯ ಬಳಿಕ ಜೋಸ್ ಬಟ್ಲರ್ ಇಂಗ್ಲೆಂಡ್ ತಂಡದ ಹೊಸ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇಂಗ್ಲೆಂಡ್ ತಂಡದ ಹಂಗಾಮಿ ನಾಯಕನಾಗಿ ಕಾಣಿಸಿಕೊಂಡಿರುವ ಬಟ್ಲರ್, ತಂಡದ ಉಪನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಬಟ್ಲರ್ ಅವರನ್ನು ಸೀಮಿತ ಓವರ್ಗಳ ತಂಡಕ್ಕೆ ನಾಯಕರಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಜೋ ರೂಟ್ ಬದಲಿಗೆ ಇತ್ತೀಚೆಗಷ್ಟೇ ನಾಯಕರಾಗಿ ಬೆನ್ ಸ್ಟೋಕ್ಸ್ ಆಯ್ಕೆಯಾಗಿದ್ದರು. ಹೀಗಾಗಿ ದೀರ್ಘಾವಧಿಯ ಕ್ರಿಕೆಟ್ನಲ್ಲಿ ನಾಯಕನ ಬದಲಾವಣೆ ಕಂಡು ಬರುವುದಿಲ್ಲ ಎಂದೇ ಹೇಳಬಹುದು.
ಕಳೆದ ಎರಡು ವರ್ಷಗಳಿಂದ ಮೋರ್ಗನ್ ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದಾರೆ. ಇತ್ತೀಚಿಗೆ ನೆದರ್ಲೆಂಡ್ಸ್ ವಿರುದ್ಧದ ಸರಣಿಯಲ್ಲೂ ಎರಡು ಬಾರಿ ಖಾತೆ ತೆರೆಯಲು ವಿಫಲರಾಗಿದ್ದರು. ಅಲ್ಲದೆ ಕೊನೆಯ ಪಂದ್ಯವನ್ನು ಗಾಯದ ಕಾರಣ ಆಡಿರಲಿಲ್ಲ. ಇತ್ತ ನಾಯಕನೇ ಕಳಪೆ ಫಾರ್ಮ್ನಲ್ಲಿರುವ ಕಾರಣ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಚಿಂತೆಗೀಡಾಗಿದೆ. ಏಕೆಂದರೆ ಈ ವರ್ಷ ಟಿ20 ವಿಶ್ವಕಪ್ ಹಾಗೂ ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯಲಿದೆ. ಇದಕ್ಕೂ ಮುನ್ನ ಬಲಿಷ್ಠ ಪಡೆಯನ್ನೇ ರೂಪಿಸಲು ಇಸಿಬಿ ಪ್ಲ್ಯಾನ್ ರೂಪಿಸಿದೆ.
ಹೀಗಾಗಿಯೇ ಕಳಪೆ ಫಾರ್ಮ್ನಲ್ಲಿರುವ ಇಯಾನ್ ಮೋರ್ಗನ್ ಟೀಮ್ ಇಂಡಿಯಾ ವಿರುದ್ದದ ಸರಣಿಯಲ್ಲಿ ವಿಫಲವಾದರೆ ತಂಡದಿಂದ ಹೊರಬೀಳುವುದು ಖಚಿತ ಎನ್ನಲಾಗಿತ್ತು. ಆದರೀಗ ಅದೇ ಸರಣಿಯ ಮೂಲಕ ಕ್ರಿಕೆಟ್ ಅಂಗಳಕ್ಕೆ ಗುಡ್ ಬೈ ಹೇಳಲು ಮೋರ್ಗನ್ ಬಯಸಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.
2019ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಇಯಾನ್ ಮೋರ್ಗನ್, ಕೆಲ ಸಮಯದಿಂದ ಕಳಪೆ ಫಾರ್ಮ್ನಲ್ಲಿದ್ದಾರೆ. ಐಪಿಎಲ್ನಲ್ಲಿ ಈ ಹಿಂದೆ ಕೆಕೆಆರ್ ತಂಡದ ನಾಯಕರಾಗಿ ಕೂಡ ವಿಫಲವಾಗಿದ್ದರು. ಹೀಗಾಗಿ ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದಾಗ್ಯೂ ಇಂಗ್ಲೆಂಡ್ ಪರ 248 ಏಕದಿನ ಪಂದ್ಯಗಳಿಂದ ಮೋರ್ಗನ್ 14 ಸೆಂಚುರಿ ಹಾಗೂ 47 ಹಾಫ್ ಸೆಂಚುರಿಯೊಂದಿಗೆ 8447 ರನ್ ಕಲೆಹಾಕಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್ನಲ್ಲಿ 115 ಪಂದ್ಯಗಳಲ್ಲಿ 2458 ರನ್ ಬಾರಿಸಿದ್ದಾರೆ.
ಇದೀಗ ಮೋರ್ಗನ್ ತಮ್ಮ 35ನೇ ವಯಸ್ಸಿನಲ್ಲಿ ನಿವೃತ್ತಿ ನೀಡಲು ಬಯಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಇದನ್ನು ಪುಷ್ಠೀಕರಿಸುವಂತೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇಯಾನ್ ಮೋರ್ಗನ್, ನಾನು ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿಲ್ಲ ಎಂದು ಭಾವಿಸಿದರೆ, ನನ್ನ ಇನಿಂಗ್ಸ್ ಅನ್ನು ಕೊನೆಗೊಳಿಸುತ್ತೇನೆ ಎಂದಿದ್ದರು. ಇದೀಗ ಆ ಮಾತಿನ ಅರ್ಥ ನಿವೃತ್ತಿ ಸುಳಿವು ಎಂದು ವಿಶ್ಲೇಷಿಸಲಾಗುತ್ತಿದೆ.
Published On - 12:40 pm, Mon, 27 June 22