ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನ್ ತಂಡಕ್ಕೆ ಆಘಾತ
Champions Trophy 2025: ಫೆಬ್ರವರಿ 23 ರಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಪಾಕಿಸ್ತಾನ್ ತಂಡದ ಸ್ಟಾರ್ ಆಟಗಾರ ಫಖರ್ ಝಮಾನ್ ಅಲಭ್ಯರಾಗುವುದು ಖಚಿತವಾಗಿದೆ. ಹೀಗಾಗಿ ಟೀಮ್ ಇಂಡಿಯಾ ವಿರುದ್ಧ ಪಾಕ್ ಪರ ಹೊಸ ಆರಂಭಿಕ ಆಟಗಾರ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲೇ ಸೋತಿರುವ ಪಾಕಿಸ್ತಾನ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಆರಂಭಿಕ ಆಟಗಾರ ಫಖರ್ ಝಮಾನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ. ನ್ಯೂಝಿಲೆಂಡ್ ವಿರುದ್ಧದ ಮೊದಲ ಪಂದ್ಯದ ವೇಳೆ ಫಖರ್ ಗಾಯಗೊಂಡಿದ್ದರು.
ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಫಖರ್ ಝಮಾನ್ ಚೆಂಡು ತಡೆಯುವ ವೇಳೆ ಗಾಯಗೊಂಡಿದ್ದರು. ಹೀಗಾಗಿ ಅವರು ಕೆಲ ಹೊತ್ತು ಮೈದಾನದಿಂದ ಹೊರಗುಳಿದಿದ್ದರು. ಇದಾಗ್ಯೂ ಅವರು ಬ್ಯಾಟಿಂಗ್ಗೆ ಆಗಮಿಸಿದ್ದರು.
ಆದರೆ ಆರಂಭಿಕನಾಗಿ ಕಣಕ್ಕಿಳಿಯಬೇಕಿದ್ದ ಫಖರ್ ಝಮಾನ್ ಗಾಯದ ಕಾರಣ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಇದೀಗ ಫಖರ್ ಅವರ ವೈದ್ಯಕೀಯ ವರದಿ ಬಂದಿದ್ದು, ಈ ರಿಪೋರ್ಟ್ ಪ್ರಕಾರ ಅವರಿಗೆ ಹೆಚ್ಚಿನ ವಿಶ್ರಾಂತಿ ಸೂಚಿಸಲಾಗಿದೆ. ಹೀಗಾಗಿ ಪಾಕಿಸ್ತಾನ್ ತಂಡದ ಮುಂದಿನ ಪಂದ್ಯಗಳಿಗೆ ಫಖರ್ ಝಮಾನ್ ಅಲಭ್ಯರಾಗಲಿದ್ದಾರೆ.
ಇನ್ನು ಫಖರ್ ಝಮಾನ್ ಅವರ ಸ್ಥಾನಕ್ಕೆ ಮತ್ತೋರ್ವ ಅನುಭವಿ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಅವರನ್ನು ಆಯ್ಕೆ ಮಾಡಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಫೆಬ್ರವರಿ 23 ರಂದು ಭಾರತದ ವಿರುದ್ಧದ ಪಂದ್ಯದಲ್ಲಿ ಇಮಾಮ್ ಉಲ್ ಹಕ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
2017 ರಲ್ಲಿ ಶತಕ ಸಿಡಿಸಿದ್ದ ಫಖರ್:
ಚಾಂಪಿಯನ್ಸ್ ಟ್ರೋಫಿ 2017ರ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಫಖರ್ ಝಮಾನ್ ಶತಕ ಬಾರಿಸಿದ್ದರು. ಅಂದು ಆರಂಭಿಕನಾಗಿ ಬ್ಯಾಟ್ ಬೀಸಿದ್ದ ಫಖರ್ 3 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 106 ಎಸೆತಗಳಲ್ಲಿ 114 ರನ್ ಕಲೆಹಾಕಿದ್ದರು. ಈ ಶತಕದ ನೆರವಿನಿಂದ ಪಾಕಿಸ್ತಾನ್ 50 ಓವರ್ಗಳಲ್ಲಿ 338 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 150 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲನುಭವಿಸಿತ್ತು.
ಇದೀಗ ಟೀಮ್ ಇಂಡಿಯಾ ವಿರುದ್ಧ ಅಬ್ಬರಿಸಿದ ಬ್ಯಾಟರ್ ಮುಂದಿನ ಪಂದ್ಯಕ್ಕೆ ಅಲಭ್ಯರಾಗುತ್ತಿರುವುದು ಪಾಕಿಸ್ತಾನ್ ತಂಡದ ಪಾಲಿಗೆ ಹಿನ್ನಡೆಯನ್ನು ಉಂಟು ಮಾಡಲಿದೆ.
ಇದನ್ನೂ ಓದಿ: Champions Trophy 2025: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ 13 ಆಟಗಾರರು ಔಟ್
