10 ಫೋರ್, 2 ಸಿಕ್ಸ್​: ವಿಶ್ವ ದಾಖಲೆಯೇ ಉಡೀಸ್!

Fatima Sana Records: ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಸ್ಫೋಟಕ ಬ್ಯಾಟಿಂಗ್ ಅಬ್ಬರವೊಂದಕ್ಕೆ ಕರಾಚಿಯ ನ್ಯಾಷನಲ್ ಸ್ಟೇಡಿಯಂ ಸಾಕ್ಷಿಯಾಗಿದೆ. ಝಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ಮಹಿಳಾ ತಂಡದ ನಾಯಕಿ ಫಾತಿಮಾ ಸನಾ ಶರವೇಗದ ಅರ್ಧಶತಕ ಸಿಡಿಸಿ ಟಿ20 ಕ್ರಿಕೆಟ್​​ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

10 ಫೋರ್, 2 ಸಿಕ್ಸ್​: ವಿಶ್ವ ದಾಖಲೆಯೇ ಉಡೀಸ್!
Fatima Sana

Updated on: May 16, 2026 | 11:22 AM

ಪಾಕಿಸ್ತಾನ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಸಿಡಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಅಬ್ಬರಿಸಿದ ಫಾತಿಮಾ ಸನಾ, ಕೇವಲ 15 ಎಸೆತಗಳಲ್ಲಿ 50 ರನ್ ಪೂರೈಸಿದರು. ಈ ಮೂಲಕ ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಸನಾ ಇನಿಂಗ್ಸ್​ನ ಮುಖ್ಯಾಂಶಗಳು:

  •  ಬಿರುಗಾಳಿ ಬ್ಯಾಟಿಂಗ್: 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಫಾತಿಮಾ ಸನಾ ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಬ್ಯಾಕ್ ಟು ಬ್ಯಾಕ್ ಸಿಕ್ಸ್-ಫೋರ್​ಗಳ ಸುರಿಮಳೆಯಾಯಿತು.
  •  ಒಂದೇ ಓವರ್‌ನಲ್ಲಿ 24 ರನ್: ಝಿಂಬಾಬ್ವೆಯ ನೋಮ್ವೆಲೊ ಸಿಬಾಂಡಾ ಎಸೆದ 19ನೇ ಓವರ್‌ನಲ್ಲಿ ಸನಾ 4, 4, 6, 6, 4 ರನ್ ಚಚ್ಚುವ ಮೂಲಕ ಕೇವಲ ಒಂದು ಓವರ್‌ನಲ್ಲಿ 24 ರನ್ ಕಲೆಹಾಕಿದರು.
  • ಅಂತಿಮ ಸ್ಕೋರ್: ಕೇವಲ 19 ಎಸೆತಗಳನ್ನು ಎದುರಿಸಿದ ಸನಾ, 10 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 62 ರನ್ ಚಚ್ಚಿದರು.

ದಾಖಲೆಗಳು ಉಡೀಸ್:

ಫಾತಿಮಾ ಸನಾ 15 ಎಸೆತಗಳ ಅರ್ಧಶತಕ ಸಿಡಿಸಿ ಮಹಿಳಾ ಮತ್ತು ಪುರುಷರ ಕ್ರಿಕೆಟ್‌ನ ಹಲವು ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ. ಅವುಗಳೆಂದರೆ…

  • ವಿಶ್ವ ದಾಖಲೆ ಉಡೀಸ್:  ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೋಫಿ ಡಿವೈನ್ (ನ್ಯೂಝಿಲೆಂಡ್), ಫೀಬಿ ಲಿಚ್‌ಫೀಲ್ಡ್ (ಆಸ್ಟ್ರೇಲಿಯಾ) ಮತ್ತು ರಿಚಾ ಘೋಷ್ (ಭಾರತ) 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು. ಇದೀಗ 15 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿ ಫಾತಿಮಾ ಸನಾ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
  • ಪಾಕಿಸ್ತಾನದ ಸಾರ್ವಕಾಲಿಕ ದಾಖಲೆ: ಪಾಕಿಸ್ತಾನ ಮಹಿಳಾ ತಂಡದ ನಿದಾ ದಾರ್ (20 ಎಸೆತ) ಮತ್ತು ಪಾಕಿಸ್ತಾನ ಪುರುಷರ ತಂಡದ ಶೋಯೆಬ್ ಮಲಿಕ್ (18 ಎಸೆತ) ಅವರ ಅತೀ ವೇಗದ ಅಂತಾರಾಷ್ಟ್ರೀಯ ಹಾಫ್ ಸೆಂಚುರಿ ದಾಖಲೆಗಳನ್ನೂ ಕೂಡ ಸನಾ ಮುರಿದಿದ್ದಾರೆ.

YouTube video player

ಮಹಿಳಾ ಟಿ20ಐನಲ್ಲಿನ ಅತ್ಯಂತ ವೇಗದ ಅರ್ಧಶತಕಗಳು:

  1. ಫಾತಿಮಾ ಸನಾ (ಪಾಕಿಸ್ತಾನ್) – 15 ಎಸೆತಗಳು (vs ಝಿಂಬಾಬ್ವೆ, 2026)
  2.  ಸೋಫಿ ಡಿವೈನ್ (ನ್ಯೂಝಿಲೆಂಡ್) – 18 ಎಸೆತಗಳು (vs ಭಾರತ, 2015)
  3.  ಫೀಬಿ ಲಿಚ್‌ಫೀಲ್ಡ್ (ಆಸ್ಟ್ರೇಲಿಯಾ) – 18 ಎಸೆತಗಳು (vs ವೆಸ್ಟ್ ಇಂಡೀಸ್, 2023)
  4. ರಿಚಾ ಘೋಷ್ (ಭಾರತ) – 18 ಎಸೆತಗಳು (vs ವೆಸ್ಟ್ ಇಂಡೀಸ್, 2024)

ಇದನ್ನೂ ಓದಿ: ಸ್ವಾಭಿಮಾನವೇ ಮುಖ್ಯ… ಟೆಸ್ಟ್ ನಿವೃತ್ತಿಗೆ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಪಾಕ್ ತಂಡಕ್ಕೆ ಗೆಲುವು:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಝಿಂಬಾಬ್ವೆ ತಂಡ 17.1 ಓವರ್​ಗಳಲ್ಲಿ ಕೇವಲ 90 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾಕಿಸ್ತಾನ್ ತಂಡ 133 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

 

 

Follow Us