ಜಾಮ್ ನಗರ ಸಿಂಹಾಸನದ ಉತ್ತರಾಧಿಕಾರಿ ಅಜಯ್ ಜಡೇಜಾ
Ajay Jadeja: ಅಜಯ್ ಜಡೇಜಾ 1992-2000 ರ ನಡುವೆ ಟೀಮ್ ಇಂಡಿಯಾ ಪರ 15 ಟೆಸ್ಟ್ ಪಂದ್ಯಗಳು ಮತ್ತು 196 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 5935 ರನ್ ಕಲೆಹಾಕಿದ್ದಾರೆ. ಅಷ್ಟೇ ಅಲ್ಲದೆ 2023ರ ಏಕದಿನ ವಿಶ್ವಕಪ್ ವೇಳೆ ಅಫ್ಘಾನಿಸ್ತಾನ್ ತಂಡದ ಮೆಂಟರ್ ಆಗಿಯೂ ಜಡೇಜಾ ಕಾರ್ಯ ನಿರ್ವಹಿಸಿದ್ದರು.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರನ್ನು ಜಾಮ್ ನಗರದ ಸಿಂಹಾಸನದ ಉತ್ತರಾಧಿಕಾರಿ ಎಂದು ಘೋಷಿಸಲಾಗಿದೆ. ಅದರಂತೆ ಮುಂಬರುವ ದಿನಗಳಲ್ಲಿ ಜಡೇಜಾ, ಜಾಮ್ ನಗರ (ನವನಗರ) ರಾಜಮನೆತನದ ಜಾಮ್ ಸಾಹೇಬ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಗುಜರಾತ್‌ನ ಜಾಮ್ ನಗರದ ಜಾಮ್ ಸಾಹೇಬ್ ಶತ್ರುಸಲ್ಯಸಿನ್ಜಿ ಅವರು ದಸರಾ ದಿನದಂದು ಅಜಯ್ ಜಡೇಜಾ ಅವರನ್ನು ಮುಂದಿನ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿ ಜಾಮ್ ಸಾಹೇಬ್ ಪತ್ರ ಬರೆದಿದ್ದು, ದಸರಾ ದಿನದಂದು ಪಾಂಡವರು ವನವಾಸದಿಂದ ವಿಜಯಶಾಲಿಯಾಗಿ ಮರಳಿದರು. ಈ ಶುಭ ಸಂದರ್ಭದಲ್ಲಿ, ನನ್ನ ಸಂದಿಗ್ಧತೆ ಕೊನೆಗೊಂಡಿದೆ. ಅಜಯ್ ಜಡೇಜಾ ಅವರನ್ನು ನನ್ನ ಉತ್ತರಾಧಿಕಾರಿಯನ್ನಾಗಿ ಮಾಡಲು ನಿರ್ಧರಿಸಿದ್ದೇನೆ. ಅವರು ಜಾಮ್ ನಗರದ ಜನರ ಆಶೀರ್ವಾದವನ್ನು ಪಡೆಯಲಿದ್ದಾರೆ. ಅಲ್ಲದೆ ಜನರಿಗಾಗಿ ಅವರು ಸಂಪೂರ್ಣ ಭಕ್ತಿಯಿಂದ ಸೇವೆ ಸಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಜಾಮ್ ಸಾಹೇಬ್ ತಿಳಿಸಿದ್ದಾರೆ.
ಅಜಯ್ ಜಡೇಜಾ ಅವರ ಆಯ್ಕೆ ಯಾಕೆ?
ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಜಾಮ್ ನಗರದ ರಾಜಮನೆತನಕ್ಕೆ ಸೇರಿದವರು. ಇದಲ್ಲದೆ, ಅವರು ರಣಜಿತ್‌ಸಿನ್‌ಜಿ ಜಡೇಜಾ ಮತ್ತು ದುಲೀಪ್‌ಸಿನ್‌ಜಿ ಜಡೇಜಾ ಅವರ ಕುಟುಂಬದವರು. ರಣಜಿತ್‌ಸಿನ್‌ಜಿ ಅವರ ಹೆಸರಿನಲ್ಲಿಯೇ ಭಾರತದಲ್ಲಿ ರಣಜಿ ಟ್ರೋಫಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಹಾಗೆಯೇ ದುಲೀಪ್‌ಸಿನ್‌ಜಿ ಹೆಸರಿನಲ್ಲಿ ದುಲೀಪ್ ಟ್ರೋಫಿಗಳನ್ನು ಆಡಲಾಗುತ್ತದೆ.
ನವನಗರದ ರಾಜಪ್ರಭುತ್ವದ ರಾಜ್ಯಾಡಳಿ ಮಾಡಿದ್ದ ರಣಜಿತ್‌ಸಿನ್‌ಜಿ ಜಡೇಜಾ ಮತ್ತು ದುಲೀಪ್‌ಸಿನ್‌ಜಿ ಜಡೇಜಾ ಕ್ರಿಕೆಟಿಗರಾಗಿಯೂ ಮಿಂಚಿದ್ದರು. ಭಾರತೀಯ ಕ್ರಿಕೆಟ್‌ಗೆ ಇವರು ನೀಡಿದ ಕೊಡುಗೆಗಳಿಗಾಗಿ ಅವರ ಹೆಸರಿನಲ್ಲಿ ದೇಶೀಯ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ.
ಇದೀಗ 85 ವರ್ಷದ ಶತ್ರುಸಲ್ಯಸಿನ್ಜಿ ತಮಗೆ ಮಕ್ಕಳಿಲ್ಲದ ಕಾರಣ ಉತ್ತರಾಧಿಕಾರಿಯನ್ನು ಹೆಸರಿಬೇಕಾದ ಅನಿವಾರ್ಯತೆ ಎದುರಾಗಿದೆ. ಇದೇ ಕಾರಣಕ್ಕೆ ಅವರು ಈಗಾಗಲೇ ಖ್ಯಾತಿಗಳಿಸಿರುವ ಅಜಯ್ ಜಡೇಜಾ ಅವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ಜಡೇಜಾಗೆ ಜಾಮ್ ಸಾಹೇಬ್ ಆಪ್ತರು:
ಅಜಯ್ ಜಡೇಜಾ ಅವರಿಗೆ ಪ್ರಸ್ತುತ ಜಾಮ್ ನಗರದ ಜಾಮ್ ಸಾಹೇಬ್ ಶತ್ರುಸಲ್ಯಸಿನ್ಜಿ ಅವರು ತುಂಬಾ ಆಪ್ತರು. ಅದರಲ್ಲೂ ಇಬ್ಬರು ಕ್ರಿಕೆಟಿಗರು ಎಂಬುದು ವಿಶೇಷ. ಅಂದರೆ ಶತ್ರುಸಲ್ಯಸಿನ್ಜಿ 1958-59ರಲ್ಲಿ ಬಾಂಬೆ ವಿರುದ್ಧ ಸೌರಾಷ್ಟ್ರ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲದೆ 1959-60ರಲ್ಲಿ ಮೂರು ಪಂದ್ಯಗಳನ್ನು, 1961-63ರ ನಡುವೆ 8 ಪಂದ್ಯಗಳನ್ನು ಆಡಿದ್ದಾರೆ. ಹಾಗೆಯೇ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ಕ್ಲಬ್ ಸಸೆಕ್ಸ್ ಪರ ಕಣಕ್ಕಿಳಿದಿದ್ದಾರೆ.
ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 29 ಪಂದ್ಯಗಳನ್ನು ಆಡಿರುವ ಶತ್ರುಶಾಲಿಸಿಂಗ್‌ಜಿ ಒಟ್ಟು 1061 ರನ್‌ಗಳನ್ನು ಮತ್ತು 36 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಇತ್ತ ಅವರ ಬಳಿಕ ಜಾಮ್ ನಗರದ ರಾಜಮನೆತನದಿಂದ ಅಜಯ್ ಜಡೇಜಾ ಕ್ರಿಕೆಟ್ ಅಂಗಳದಲ್ಲಿ ಮಿಂಚಿದ್ದರು.
ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಮೂಲಕ ಸಂಚಲನವನ್ನೂ ಸಹ ಸೃಷ್ಟಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಶತ್ರುಸಲ್ಯಸಿನ್ಜಿ ಅವರಿಗೆ ಅಜಯ್ ಜಡೇಜಾ ಅವರ ಮೇಲೆ ವಿಶೇಷ ಪ್ರೀತಿಯಿತ್ತು ಎಂದು ಹೇಳಲಾಗಿದೆ. ಹೀಗಾಗಿಯೇ ಅವರನ್ನೇ ಈಗ ಜಾಮ್ ನಗರ ಸಿಂಹಾಸನದ ಉತ್ತರಾಧಿಕಾರಿಯಾಗಿ ನೇಮಿಸಿದ್ದಾರೆ.
ಜಾಮ್ ನಗರ (ನವ ನಗರ) ಇತಿಹಾಸ:
ನವ ನಗರವು ಐತಿಹಾಸಿಕ ಹಲಾರ್ ಪ್ರದೇಶದಲ್ಲಿ ಭಾರತೀಯ ರಾಜಪ್ರಭುತ್ವದ ರಾಜ್ಯವಾಗಿದ್ದು, ಇದು ಕಚ್ ಕೊಲ್ಲಿಯ ದಕ್ಷಿಣ ತೀರದಲ್ಲಿದೆ. ಈ ರಾಜ್ಯವು ಜಡೇಜಾ ರಜಪೂತ ರಾಜವಂಶದಿಂದ ಆಳಲ್ಪಟ್ಟಿದೆ. ಆ ಬಳಿಕ ಸ್ವಾತಂತ್ರ್ಯ ಭಾರತದ ಭಾಗವಾಯಿತು.
ನವ ನಗರವನ್ನು ಈಗ ಜಾಮ್‌ನಗರ ಎಂದು ಕರೆಯಲಾಗುತ್ತಿದೆ. ಇದು 3,791 ಚದರ ಮೈಲುಗಳಷ್ಟು (9,820 km 2 ) ವಿಸ್ತೀರ್ಣವನ್ನು ಹೊಂದಿದ್ದು, ಇಲ್ಲಿ 8 ಲಕ್ಷಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಸಿರಾಜ್ ಈಗ ಡಿಎಸ್ಪಿ: ಟೀಮ್ ಇಂಡಿಯಾಗೆ ಹೇಳ್ತಾರಾ ಗುಡ್ ಬೈ?
ಇನ್ನು ಜಾಮ್ ಸಾಹೇಬ್ ಎಂಬ ಬಿರುದನ್ನು ಬಳಸುವ ಅದರ ಆಡಳಿತಗಾರರು ಕಚ್‌ನ ರಾವ್ ಕುಲದವರೇ ಆಗಿರುತ್ತಾರೆ. 1966 ರಿಂದ ಶತ್ರುಸಲ್ಯಸಿನ್ಜಿ ಈ ರಾಜಮನೆತನದ ಜಾಮ್ ಸಾಹೇಬ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ಉತ್ತರಾಧಿಕಾರಿಯಾಗಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ನೇಮಕವಾಗಿದ್ದಾರೆ. ಇದರೊಂದಿಗೆ ಜಡೇಜಾ ಅವರ ನಿವ್ವಳ ಮೌಲ್ಯ ಸುಮಾರು 1455 ಕೋಟಿ ರೂ. ಆಗಿದೆ ಎಂದು ವರದಿಯಾಗಿದೆ.