Fact Check: ಸ್ಟೇಡಿಯಂನ ಮೇಲ್ಛಾವಣಿ ಕುಸಿದು 5000 ಜನರು ಸಾವು?: ವೈರಲ್ ವಿಡಿಯೋದ ನಿಜಾಂಶ ಇಲ್ಲಿದೆ

ಈ ವಿಡಿಯೋ ಭಾರತದ ಯಾವುದೇ ಪ್ರದೇಶದ್ದಲ್ಲ ಮತ್ತು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಲೇಷ್ಯಾದ ಹಳೆಯ, ಶಿಥಿಲಗೊಂಡ ಕ್ರೀಡಾಂಗಣದ ಮೇಲ್ಛಾವಣಿಯನ್ನು ಯೋಜಿತವಾಗಿ ಕೆಡವುವ ವಿಡಿಯೋ ಸದ್ಯ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ.

Fact Check: ಸ್ಟೇಡಿಯಂನ ಮೇಲ್ಛಾವಣಿ ಕುಸಿದು 5000 ಜನರು ಸಾವು?: ವೈರಲ್ ವಿಡಿಯೋದ ನಿಜಾಂಶ ಇಲ್ಲಿದೆ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 12, 2024 | 12:50 PM

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವುದು ದೊಡ್ಡ ಸವಾಲಾಗಿದೆ. ದಿನಕ್ಕೆ ನೂರಾರು ಫೇಕ್ ನ್ಯೂಸ್ ಇಂಟರ್ನೆಟ್​ನಲ್ಲಿ ವೈರಲ್ ಆಗುತ್ತವೆ. ಇದೀಗ ಅಂತಹದೆ ಒಂದು ಸುದ್ದಿ ಇನ್​ಸ್ಟಾಗ್ರಾಮ್, ಎಕ್ಸ್, ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬಿಹಾರದಲ್ಲಿ ಕ್ರೀಡಾಂಗಣದ ಮೇಲ್ಛಾವಣಿ ಭಾರೀ ಪ್ರಮಾಣದಲ್ಲಿ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಅಪಘಾತದಲ್ಲಿ 5000 ಜನರು ಸಾವನ್ನಪ್ಪಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇ ಕಾ ಬಿಹಾರ್ ಮೇ ಹೋತಾ ಹಾಡು ಪ್ಲೇ ಆಗುತ್ತಿದೆ, ಇದರಿಂದಾಗಿ ಕೆಲವರು ಈ ಘಟನೆ ಬಿಹಾರದಲ್ಲಿ ಸಂಭವಿಇಸಿದೆ ಎಂದು ಭಾವಿಸುತ್ತಿದ್ದಾರೆ. ಇದೇ ವೇಳೆ ಕೆಲವರು ಇದು ಬಿಹಾರದ ಸ್ಟೇಡಿಯಂ ಅಲ್ಲ, ಉತ್ತರ ಪ್ರದೇಶದ ಸ್ಟೇಡಿಯಂ ಎಂದು ಕಮೆಂಟ್​ಗಳಲ್ಲಿ ಬರೆಯುತ್ತಿದ್ದಾರೆ.

Fact Check:

ಟಿವಿ9 ಕನ್ನಡ ಫ್ಯಾಕ್ಟ್ ಚೆಕ್​ನಲ್ಲಿ ಇದು ಮಲೇಷ್ಯಾದ ಶಾ ಆಲಂ ಸ್ಟೇಡಿಯಂನ ವಿಡಿಯೋ ಎಂದು ಕಂಡುಬಂದಿದೆ. ಹಳೆಯ ಮತ್ತು ದುರ್ಬಲಗೊಂಡ ಕ್ರೀಡಾಂಗಣವನ್ನು ಸ್ಥಳೀಯ ಸರ್ಕಾರವೇ ಕೆಡವಿತು. ಸ್ಟೇಡಿಯಂ ಧ್ವಂಸ ಸಂದರ್ಭದಲ್ಲಿ ಯಾರೂ ಪ್ರಾಣ ಕಳೆದುಕೊಂಡಿಲ್ಲ ಎಂದು ವರದಿ ಆಗಿರುವುದು ನಮಗೆ ಸಿಕ್ಕಿದೆ. ವೀಡಿಯೊದ ಕೀಫ್ರೇಮ್‌ಗಳನ್ನು ಹಿಮ್ಮುಖವಾಗಿ ಹುಡುಕಿದಾಗ ಸೆಪ್ಟೆಂಬರ್ 25, 2024 ರ ಟ್ವೀಟ್ ಒಂದು ನಮಗೆ ಸಿಕ್ಕಿತು. ಮಲೇಷ್ಯಾದ ಶಾ ಆಲಂ ಸ್ಟೇಡಿಯಂನಲ್ಲಿ ಈ ಘಟನೆ ನಡೆದಿದೆ ಎಂದು ಇಲ್ಲಿ ಹೇಳಲಾಗಿದೆ.

ಇದರ ನಂತರ ನಾವು ಈ ವಿಡಿಯೋಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 13, 2024 ರಂದು ಪ್ರಕಟವಾದ ವರದಿ ಕಂಡಿದ್ದೇವೆ. 2020 ರಲ್ಲಿ ಮಲೇಷ್ಯಾ ಫುಟ್‌ಬಾಲ್ ಲೀಗ್‌ನಲ್ಲಿ ಮಲೇಷ್ಯಾದ ರಾಜಧಾನಿ ಸೆಲಂಗೋರ್‌ನಲ್ಲಿರುವ ಶಾ ಆಲಂ ಕ್ರೀಡಾಂಗಣವನ್ನು ಅಸುರಕ್ಷಿತ ಎಂದು ಘೋಷಿಸಲಾಗಿದೆ ಎಂದು ಹೇಳಲಾಗಿದೆ. ಕಳಪೆ ನಿರ್ವಹಣೆಯಿಂದಾಗಿ ಅದರ ಮೇಲ್ಛಾವಣಿಯು ತುಂಬಾ ದುರ್ಬಲಗೊಂಡಿದೆ, ಇದರಿಂದಾಗಿ ಇಲ್ಲಿ ನಡೆಯಲಿರುವ ಪಂದ್ಯಗಳಿಗೆ ಮತ್ತೊಂದು ಕ್ರೀಡಾಂಗಣವನ್ನು ಹುಡುಕಬೇಕಾಯಿತು.

1994ರಲ್ಲಿ ನಿರ್ಮಿಸಿದ್ದ ಈ ಕ್ರೀಡಾಂಗಣವನ್ನು ಕೆಡವಿ ಆ ಜಾಗದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲು ಸರ್ಕಾರ ನಿರ್ಧರಿಸಿತ್ತು. ಜುಲೈ 2024 ರಲ್ಲಿ ಅದನ್ನು ಕೆಡವುವ ಕೆಲಸವನ್ನು ಪ್ರಾರಂಭಿಸಲಾಯಿತು. ಸೆಪ್ಟೆಂಬರ್‌ನಲ್ಲಿ ಕ್ರೀಡಾಂಗಣದ ಮೇಲ್ಛಾವಣಿ ಕುಸಿದು ಬಿದ್ದಾಗ ಅದರ ವಿಡಿಯೋ ವೈರಲ್ ಆಗಿದೆ. ಕ್ರೀಡಾಂಗಣವನ್ನು ಕೆಡವುವ ಸಂದರ್ಭದಲ್ಲಿ ಸ್ಥಳೀಯರಿಗೆ ಇದರಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಚ್ಚರಿಕೆ ಕೂಡ ವಹಿಸಲಾಗಿದೆ.

30 ವರ್ಷಗಳಷ್ಟು ಹಳೆಯದಾದ ಈ ಕ್ರೀಡಾಂಗಣದಲ್ಲಿ 80,000 ಕ್ಕೂ ಹೆಚ್ಚು ಜನರು ಕುಳಿತುಕೊಳ್ಳುತ್ತಿದ್ದರು. 1997 ರ ಫಿಫಾ ವಿಶ್ವ ಯೂತ್ ಚಾಂಪಿಯನ್‌ಶಿಪ್, 2007 ರ ಸೌತ್ ಈಸ್ಟ್ ಏಷ್ಯನ್ ಗೇಮ್ಸ್ ಸೇರಿದಂತೆ ಹಲವು ಪಂದ್ಯಾವಳಿಗಳ ಪಂದ್ಯಗಳು ಇಲ್ಲಿ ನಡೆದಿವೆ. ಹೀಗಾಗಿ ಈ ವಿಡಿಯೋ ಭಾರತದ ಯಾವುದೇ ಪ್ರದೇಶದ್ದಲ್ಲ ಮತ್ತು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಲೇಷ್ಯಾದ ಹಳೆಯ, ಶಿಥಿಲಗೊಂಡ ಕ್ರೀಡಾಂಗಣದ ಮೇಲ್ಛಾವಣಿಯನ್ನು ಯೋಜಿತವಾಗಿ ಕೆಡವುವ ವಿಡಿಯೋ ಸದ್ಯ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ.