‘ಪಾಕ್ ಕ್ರಿಕೆಟ್ ಐಸಿಯುನಲ್ಲಿದೆ, ವೃತ್ತಿಪರ ವೈದ್ಯರು ಬೇಕು’: ಅಸಮಾಧಾನ ಹೊರಹಾಕಿದ ಅನುಭವಿ

|

Updated on: Sep 17, 2024 | 3:52 PM

Pakistan Cricket Team: ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ರಶೀದ್ ಲತೀಫ್, ‘ಪಾಕಿಸ್ತಾನ ಕ್ರಿಕೆಟ್ ಇತ್ತೀಚಿನ ದಿನಗಳಲ್ಲಿ ಐಸಿಯುನಲ್ಲಿದೆ. ತಂಡಕ್ಕೆ ವೃತ್ತಿಪರ ವೈದ್ಯರ ಅಗತ್ಯವಿದೆ. ತವರಿನಲ್ಲಾಗಲಿ ಅಥವಾ ವಿದೇಶಿ ನೆಲದಲ್ಲಾಗಲಿ ಉತ್ತಮವಾಗಿ ಆಡಲು ತಂಡಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

‘ಪಾಕ್ ಕ್ರಿಕೆಟ್ ಐಸಿಯುನಲ್ಲಿದೆ, ವೃತ್ತಿಪರ ವೈದ್ಯರು ಬೇಕು’: ಅಸಮಾಧಾನ ಹೊರಹಾಕಿದ ಅನುಭವಿ
ಪಾಕಿಸ್ತಾನ ತಂಡ
Follow us on

ಆಟಗಾರರ ಕಳಪೆ ಪ್ರದರ್ಶನದಿಂದಾಗಿ ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕಿಸ್ತಾನ ತಂಡಕ್ಕೆ ಪ್ರತಿಧಿನ ಟೀಕೆಗಳನ್ನು ಎದುರಿಸುವುದೇ ಕಾಯಕವಾಗಿದೆ. 2024 ರ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ತಂಡದ ವಿರುದ್ಧ ಅವಮಾನಕರ ಸೋಲಿಗೆ ತುತ್ತಾಗಿದ್ದ ಪಾಕ್ ಪಡೆ, ಇದೀಗ ತವರಿನಲ್ಲೇ ಬಾಂಗ್ಲಾದೇಶದ ವಿರುದ್ಧ ಕ್ಲೀನ್ ಸ್ವೈಪ್ ಅನುಭವಿಸಿದೆ. ಈ ಅವಮಾನಕರ ಸೋಲಿನಿಂದಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಅಭಿಮಾನಿಗಳ ಕೋಪಕ್ಕೆ ಗುರಿಯಾಗುವುದರ ಜತೆಗೆ ತಂಡದ ಮಾಜಿ ಅನುಭವಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಮಧ್ಯೆ ಮಾಜಿ ಹಿರಿಯ ಕ್ರಿಕೆಟಿಗ ರಶೀದ್ ಲತೀಫ್ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಐಸಿಯುನಲ್ಲಿದೆ ಎಂದಿದ್ದಾರೆ.

ಸತತ 10 ಪಂದ್ಯಗಳಲ್ಲಿ ಸೋಲು

ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ತವರು ನೆಲದಲ್ಲಿ ಕಳೆದ 10 ಟೆಸ್ಟ್ ಪಂದ್ಯಗಳಲ್ಲಿ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಈ 10 ಪಂದ್ಯಗಳ ಪೈಕಿ ಪಾಕಿಸ್ತಾನ 4 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರೆ, 6 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಾಕಿಸ್ತಾನ ತನ್ನ ತವರು ನೆಲದಲ್ಲಿ ಕೊನೆಯ ಬಾರಿಗೆ 2021 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು. ಇದರ ನಂತರ, ಪಾಕಿಸ್ತಾನವನ್ನು ಇಂಗ್ಲೆಂಡ್ 3-0, ಆಸ್ಟ್ರೇಲಿಯಾ 1-0 ಮತ್ತು ಬಾಂಗ್ಲಾದೇಶವನ್ನು 2-0 ಅಂತರದಿಂದ ಸೋಲಿಸಿವೆ.

ರಶೀದ್ ಲತೀಫ್ ಹೇಳಿದ್ದೇನು?

ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ರಶೀದ್ ಲತೀಫ್, ‘ಪಾಕಿಸ್ತಾನ ಕ್ರಿಕೆಟ್ ಇತ್ತೀಚಿನ ದಿನಗಳಲ್ಲಿ ಐಸಿಯುನಲ್ಲಿದೆ. ತಂಡಕ್ಕೆ ವೃತ್ತಿಪರ ವೈದ್ಯರ ಅಗತ್ಯವಿದೆ. ತವರಿನಲ್ಲಾಗಲಿ ಅಥವಾ ವಿದೇಶಿ ನೆಲದಲ್ಲಾಗಲಿ ಉತ್ತಮವಾಗಿ ಆಡಲು ತಂಡಕ್ಕೆ ಸಾಧ್ಯವಾಗುತ್ತಿಲ್ಲ. ತಂಡದ ವ್ಯವಹಾರಗಳನ್ನು ನಿಭಾಯಿಸಲು ತಾಂತ್ರಿಕವಾಗಿ ಪ್ರವೀಣ ವೃತ್ತಿಪರರ ಅವಶ್ಯಕತೆಯಿದೆ. ಅದು ದೈಹಿಕ ತರಬೇತಿಯಾಗಿರಲಿ ಅಥವಾ ಹಣಕಾಸು ನಿರ್ವಹಣೆಯಾಗಿರಲಿ. ಪಾಕಿಸ್ತಾನ ತಂಡದ ಸ್ಥಿತಿಯನ್ನು ಸುಧಾರಿಸಲು ಇನ್ನೂ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಪಾಕಿಸ್ತಾನ ಕ್ರಿಕೆಟ್ ಅಪಾಯಕ್ಕೆ ಸಿಲುಕಲಿದೆ ಎಂದು ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾ ವಿರುದ್ಧ ಮೊದಲ ಸೋಲು

ಇದುವರೆಗೆ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಪಂದ್ಯವನ್ನು ಸೋತಿರಲಿಲ್ಲ. ಹೀಗಾಗಿ ಬಾಂಗ್ಲಾದೇಶ ತಂಡ, ಪಾಕಿಸ್ತಾನ ಪ್ರವಾಸ ಕೈಗೊಂಡಾಗ ಪಾಕ್ ಕ್ರಿಕೆಟ್ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದರು. ಏಕೆಂದರೆ ಬಾಂಗ್ಲಾದೇಶದ ವಿರುದ್ಧ ತಂಡ ಜಯಗಳಿಸಿದ್ದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ ಫೈನಲ್ ತಲುಪುವುದು ಸುಲಭವಾಗುತ್ತಿತ್ತು. ಆದರೆ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿ ಸೋತಿತು. ಇದು ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳನ್ನು ಕೆರಳುವಂತೆ ಮಾಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ