Suryakumar Yadav: ಸೂರ್ಯಕುಮಾರ್ಗೆ ಮತ್ತಷ್ಟು ಚಾನ್ಸ್ ನೀಡಬೇಕೆಂದ ಮಾಜಿ ಆಟಗಾರ
India vs West Indies: ಭಾರತ-ವೆಸ್ಟ್ ಇಂಡೀಸ್ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 19 ರನ್ಗಳಿಸಿ ಔಟಾಗಿದ್ದರು.
ಏಕದಿನ ಕ್ರಿಕೆಟ್ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್ ಮುಂದುವರೆದಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸೂರ್ಯ ಕಲೆಹಾಕಿದ್ದು ಕೇವಲ 19 ರನ್ ಮಾತ್ರ. ಅಂದರೆ ಕಳೆದ 5 ಏಕದಿನ ಇನಿಂಗ್ಸ್ನಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ನಿಂದ ಮೂಡಿಬಂದ ಒಟ್ಟು ಸ್ಕೋರ್ ಕೇವಲ 33 ರನ್ ಮಾತ್ರ. ಇದಾಗ್ಯೂ ಸೂರ್ಯಕುಮಾರ್ ಯಾದವ್ಗೆ ಸತತ ಅವಕಾಶ ನೀಡುತ್ತಿರುವ ಬಗ್ಗೆ ಇದೀಗ ಪ್ರಶ್ನೆಗಳೆದ್ದಿವೆ. ಈ ಟೀಕೆ ಟಿಪ್ಪಣಿಗಳ ನಡುವೆ ಸೂರ್ಯನಿಗೆ ಮತ್ತಷ್ಟು ಚಾನ್ಸ್ ನೀಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಆರ್.ಪಿ ಸಿಂಗ್.
2019 ರ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ಸ್ಮನ್ ಇರಲಿಲ್ಲ. ಇದು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಿತು. ಇದೀಗ ನಾಲ್ಕನೇ ಕ್ರಮಾಂಕಕ್ಕೆ ಪರಿಪೂರ್ಣ ಬ್ಯಾಟರ್ ಎನಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಪರೀಕ್ಷಿಸಲಾಗುತ್ತಿದೆ.
ಹಾಗಾಗಿ ಸೂರ್ಯಕುಮಾರ್ ಯಾದವ್ಗೆ ಮತ್ತಷ್ಟು ಅವಕಾಶ ನೀಡಬೇಕು ಎಂದು ಆರ್.ಪಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ನನ್ನು ಪ್ರಕಾರ ಈಗಲೂ ಮಧ್ಯಮ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಉತ್ತಮ ಆಯ್ಕೆ. ನೀವು ಅವನನ್ನು ಬ್ಯಾಕ್ ಅಪ್ ಆಯ್ಕೆಯಾಗಿ ನೋಡುತ್ತಿದ್ದರೂ ಸಹ, ಅವನಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ಆರ್ಪಿ ಸಿಂಗ್ ತಿಳಿಸಿದ್ದಾರೆ.
ಸೂರ್ಯಕುಮಾರ್ ಯಾದವ್ 50 ಓವರ್ಗಳ ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿಬಲ್ಲ ಬ್ಯಾಟರ್. ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ. ಆದರೆ ದೀರ್ಘ ಓವರ್ಗಳ ಆವೃತ್ತಿಗೆ ತಮ್ಮ ಆಟವನ್ನು ಬದಲಿಸಬೇಕಾಗುತ್ತದೆ. ಇದಕ್ಕಾಗಿ ಸಮಯವಕಾಶ ತೆಗೆದುಕೊಳ್ಳಬಹುದು. ಹೀಗಾಗಿ ತಂಡದಲ್ಲಿ ಅವಕಾಶ ಪಡೆಯಲು ಅವರು ಅರ್ಹರು ಎಂದು ಆರ್ಪಿ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: Suryakumar Yadav: ಎಬಿಡಿಯನ್ನೇ ಹಿಂದಿಕ್ಕಿದ ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ ಅವರ ಕೊನೆಯ 5 ಏಕದಿನ ಇನಿಂಗ್ಸ್:
- 19(25) v ವೆಸ್ಟ್ ಇಂಡೀಸ್, ಜುಲೈ 27, 2023.
- 0(1) v ಆಸ್ಟ್ರೇಲಿಯಾ, ಮಾರ್ಚ್ 22, 2023.
- 0(1) v ಆಸ್ಟ್ರೇಲಿಯಾ, ಮಾರ್ಚ್ 19, 2023.
- 0(1) v ಆಸ್ಟ್ರೇಲಿಯಾ, ಮಾರ್ಚ್ 17, 2023.
- 14(9) v ನ್ಯೂಝಿಲೆಂಡ್, ಜನವರಿ 24, 2023
ಅಂದರೆ ಕೊನೆಯ 5 ಇನಿಂಗ್ಸ್ಗಳಲ್ಲಿ ಸೂರ್ಯಕುಮಾರ್ ಯಾದವ್ 3 ಬಾರಿ ಡಕೌಟ್ ಆಗಿದ್ದಾರೆ. ಇದಾಗ್ಯೂ ಅವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಮುಂದುವರೆಸುತ್ತಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ಇತ್ತ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಸಂಜು ಸ್ಯಾಮ್ಸನ್ ಇದ್ದರೂ, ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡುತ್ತಿಲ್ಲ. ಇದೇ ಕಾರಣದಿಂದಾಗಿ ಇದೀಗ ಸೂರ್ಯಕುಮಾರ್ ಯಾದವ್ ಅವರ ಆಯ್ಕೆಗೆ ಬಗ್ಗೆ ನೆಟ್ಟಿಗರು ಪ್ರಶ್ನೆಗಳನ್ನೆತ್ತುತ್ತಿದ್ದಾರೆ.