AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MLC 2023: ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್​ಗೆ ಎಂಟ್ರಿಕೊಟ್ಟ ಎಂಐ ನ್ಯೂಯಾರ್ಕ್!

MLC 2023 Final: ನಿಕೋಲಸ್ ಪೂರನ್ ನಾಯಕತ್ವದ ಎಂಐ ನ್ಯೂಯಾರ್ಕ್ ತಂಡ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲ್ಲಿರುವ ಮೇಜರ್ ಲೀಗ್ ಕ್ರಿಕೆಟ್ 2023 ಫೈನಲ್‌ನಲ್ಲಿ ಸಿಯಾಟಲ್ ಓರ್ಕಾಸ್ ತಂಡವನ್ನು ಎದುರಿಸಲಿದೆ.

MLC 2023: ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್​ಗೆ ಎಂಟ್ರಿಕೊಟ್ಟ ಎಂಐ ನ್ಯೂಯಾರ್ಕ್!
ಮೇಜರ್ ಲೀಗ್ ಕ್ರಿಕೆಟ್ 2023Image Credit source: insidesport
ಪೃಥ್ವಿಶಂಕರ
|

Updated on:Jul 29, 2023 | 1:26 PM

Share

ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್​ನ (MLC 2023) ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ (Texas Super Kings) ವಿರುದ್ಧ 6 ವಿಕೆಟ್​ಗಳ ರೋಚಕ ಜಯ ಸಾಧಿಸಿದ ಎಂಐ ನ್ಯೂಯಾರ್ಕ್ (MI New York) ತಂಡ ಚೊಚ್ಚಲ ಆವೃತ್ತಿಯಲ್ಲೇ ಫೈನಲ್​ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಟ್ರೆಂಟ್ ಬೌಲ್ಟ್, ಡೆವಾಲ್ಡ್ ಬ್ರೆವಿಸ್ ಮತ್ತು ಟಿಮ್ ಡೇವಿಡ್ (Trent Boult, Dewald Brevis, and Tim David) ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶುಕ್ರವಾರ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಎಂಐ ನ್ಯೂಯಾರ್ಕ್ ತಂಡ 4 ವಿಕೆಟ್ ಕಳೆದುಕೊಂಡು 19ನೇ ಓವರ್​ನಲ್ಲೇ ಗೆಲುವಿನ ದಡ ಮುಟ್ಟಿತು. ಇದೀಗ ಫೈನಲ್​ಗೆ ಟಿಕೆಟ್ ಖಚಿತಪಡಿಸಿಕೊಂಡಿರುವ ನಿಕೋಲಸ್ ಪೂರನ್ ನಾಯಕತ್ವದ ಎಂಐ ನ್ಯೂಯಾರ್ಕ್ ತಂಡ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲ್ಲಿರುವ ಮೇಜರ್ ಲೀಗ್ ಕ್ರಿಕೆಟ್ 2023 ಫೈನಲ್‌ನಲ್ಲಿ ಸಿಯಾಟಲ್ ಓರ್ಕಾಸ್ ತಂಡವನ್ನು ಎದುರಿಸಲಿದೆ.

ಫಾಫ್ ಡು ಪ್ಲೆಸಿಸ್ ಫ್ಲಾಪ್ ಶೋ

ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ನ್ಯೂಯಾರ್ಕ್ ತಂಡ ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡದ ನಾಯಕ ಹಾಗೂ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್, ಡಿವೋನ್ ಕಾನ್ವೇ ಅವರೊಂದಿಗೆ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದರು. ಹೀಗಾಗಿ 12 ರನ್​ಗಳಿಗೆ ತಂಡ ಮೊದಲ ವಿಕೆಟ್ ಕಳೆದುಕೊಂಡಿತು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಮಿಚೆಲ್ ಸ್ಯಾಂಟ್ನರ್ ಕೂಡ 6 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಕೋಡಿ ಚೆಟ್ಟಿ ಕೂಡ 14 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು.

ನಿವೃತ್ತ ಆಟಗಾರರ ವಿರುದ್ಧ ಬಿಸಿಸಿಐ ಬ್ರಹ್ಮಾಸ್ತ್ರ; ಮೇಜರ್ ಲೀಗ್ ಕ್ರಿಕೆಟ್‌ನಿಂದ ಹಿಂದೆ ಸರಿದ ಅಂಬಟಿ ರಾಯುಡು!

4 ವಿಕೆಟ್ ಪಡೆದ ಬೌಲ್ಟ್

ಆದರೆ ಆರಂಭಿಕರಾಗಿ ಕಣಕ್ಕಿಳಿದು ಒಂದು ತುದಿಯಲ್ಲಿ ಜವಬ್ದಾರಿಯುತ ಬ್ಯಾಟಿಂಗ್ ಮಾಡಿದ ಕಾನ್ವೇ 35 ಎಸೆತಗಳಲ್ಲಿ 38 ರನ್​ಗಳ ಇನ್ನಿಂಗ್ಸ್ ಆಡಿದರು. ಮಧ್ಯಮ ಕ್ರಮಾಂಕದಲ್ಲಿ ಮಿಲಿಂದ್ ಕುಮಾರ್ ಕೂಡ 37 ರನ್​ಗಳ ಕೊಡುಗೆ ನೀಡಿದರು. ಈ ಇಬ್ಬರ ನಂತರ ಕೊನೆಯ ಹಂತದಲ್ಲಿ ಡೇವಿಡ್ ಮಿಲ್ಲರ್ 17 ರನ್​ಗಳ ಕೊಡುಗೆ ನೀಡಿದ್ದನ್ನು ಬಿಟ್ಟರೆ, ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಹೊರಬರಲಿಲ್ಲ. ಅಂತಿಮವಾಗಿ ಡು ಪ್ಲೆಸಿಸ್ ಪಡೆ 20ನೇ ಓವರ್​ನ ಕೊನೆಯ ಎಸೆತದಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿತು. ಎಂಐ ಪರ ಬೌಲಿಂಗ್​ನಲ್ಲಿ ಮಿಂಚಿದ ಟ್ರೆಂಟ್ ಬೌಲ್ಟ್ 4 ವಿಕೆಟ್ ಪಡೆದು ಮಿಂಚಿದರೆ, ಟಿಮ್ ಡೇವಿಡ್ 2 ವಿಕೆಟ್ ಪಡೆದರು.

ಬ್ರೆವಿಸ್- ಡೇವಿಡ್ ಸ್ಫೋಟಕ ಬ್ಯಾಟಿಂಗ್

ಇನ್ನು 159 ರನ್​ಗಳ ಗೆಲುವಿನ ಗುರಿ ಪಡೆದ ಎಂಐ ನ್ಯೂಯಾರ್ಕ್ ತಂಡದ ಆರಂಭವೂ ಅಷ್ಟು ಉತ್ತಮವಾಗಿರಲಿಲ್ಲ. 21 ರನ್​ಗಳಿದ್ದಾಗ ತಂಡದ ಮೊದ ವಿಕೆಟ್ ಪತನವಾಯಿತು. ಆರಂಭಿಕ ಸ್ಲೇಡ್ ವ್ಯಾನ್ ಸ್ಟೇಡೆನ್ 6 ರನ್​ಗಳಿಗೆ ಸುಸ್ತಾದರೆ, ಮತ್ತೊಬ್ಬ ಆರಂಭಿಕ ಶಯಾನ್ ಜಹಾಂಗೀರ್ 18 ಎಸೆತಗಳಲ್ಲಿ 36 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಡೇವಾಲ್ಡ್ ಬ್ರೆವಿಸ್ ಹಾಗೂ ಟಿಮ್ ಡೇವಿಡ್ ಕ್ರಮವಾಗಿ 41 ಹಾಗೂ 33 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಕೊನೆಯ ಹಂತದಲ್ಲಿ ಈ ಜೋಡಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದೆ ತಂಡದ ಗೆಲುವಿಗೆ ಕಾರಣವಾಯಿತು. ತಮ್ಮ ಇನ್ನಿಂಗ್ಸ್​ನಲ್ಲಿ 33 ಎಸೆತಗಳನ್ನು ಎದುರಿಸಿದ ಡೇವಾಲ್ಡ್ ಬ್ರೆವಿಸ್ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 41 ರನ್ ಬಾರಿಸಿದರೆ, ಮತ್ತೊಂದೆಡೆ ಟಿಮ್ ಡೇವಿಡ್20 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಸಹಿತ ಅಜೇಯ 33 ರನ್ ಕಲೆಹಾಕಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:22 pm, Sat, 29 July 23