
ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಸರಣಿಗೆ ವಿರಾಟ್ ಕೊಹ್ಲಿ (Virat Kohli) ಅವರನ್ನು ಭಾರತ ತಂಡದ ನಾಯಕರನ್ನಾಗಿ ನೇಮಿಸಬೇಕು ಎಂದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ಹೇಳಿದ್ದಾರೆ. ಪ್ರಸ್ತುತ ನಿವೃತ್ತಿ ಸೂಚನೆ ನೀಡಿರುವ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಬೇಕು. ಅಲ್ಲದೆ ಶುಭ್ಮನ್ ಗಿಲ್ ಅವರನ್ನು ಉಪನಾಯಕನ್ನಾಗಿ ಮಾಡಬೇಕು ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮಾ ಅವರ ಟೆಸ್ಟ್ ನಿವೃತ್ತಿಯ ಬಳಿಕ ಬಿಸಿಸಿಐ ಹೊಸ ನಾಯಕನ ನೇಮಕಕ್ಕೆ ಮುಂದಾಗಿದೆ. ಇತ್ತ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವ ಸೂಚನೆ ನೀಡಿದ್ದಾರೆ. ಹೀಗಾಗಿ ಬಿಸಿಸಿಐ ಇಂಗ್ಲೆಂಡ್ ಸರಣಿಗೆ ವಿರಾಟ್ ಕೊಹ್ಲಿ ಅವರನ್ನೇ ಕ್ಯಾಪ್ಟನ್ ಆಗಿ ನೇಮಿಸಬೇಕು. ಈ ಮೂಲಕ ಕಿಂಗ್ ಕೊಹ್ಲಿಯ ಮನವೊಲಿಸಲು ಮುಂದಾಗಬೇಕು ಎಂದು ಮೈಕಲ್ ವಾನ್ ಹೇಳಿದ್ದಾರೆ.
ನಾನು ಭಾರತದವನಾಗಿದ್ದರೆ ಇಂಗ್ಲೆಂಡ್‌ನಲ್ಲಿ ನಡೆಯುವ ಟೆಸ್ಟ್ ಸರಣಿಗೆ ವಿರಾಟ್‌ಗೆ ನಾಯಕತ್ವ ನೀಡುತ್ತಿದ್ದೆ. ಶುಭಮನ್ ಗಿಲ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡುತ್ತಿದ್ದೆ ಎಂದು ವಾನ್ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಪ್ರಮುಖ ಸರಣಿಗೆ ಅನುಭವಿ ಆಟಗಾರನಾಗಿರುವ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡುವುದು ಸೂಕ್ತ ಎಂದಿದ್ದಾರೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕ ಎಂಬುದು. ಕೊಹ್ಲಿ ಭಾರತೀಯ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಇತಿಹಾಸವನ್ನು ಹೊಂದಿದ್ದಾರೆ. 2022 ರಲ್ಲಿ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ನೀಡುವ ಮುನ್ನ ಕೊಹ್ಲಿ ಟೆಸ್ಟ್ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು.
ಅಲ್ಲದೆ ಭಾರತ ತಂಡವನ್ನು 68 ಟೆಸ್ಟ್‌ಗಳಲ್ಲಿ ಪಂದ್ಯಗಳಲ್ಲಿ ಮುನ್ನಡೆಸಿರುವ ಕೊಹ್ಲಿ ಟೀಮ್ ಇಂಡಿಯಾಗೆ 40 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಅಂದರೆ ಅವರ ಗೆಲುವಿನ ಶೇಕಡಾವಾರು 58.82 ರಷ್ಟಿದೆ. ಹೀಗಾಗಿಯೇ ಟೆಸ್ಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿಯೇ ಸೂಕ್ತ ಆಯ್ಕೆ ಎಂದು ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಬ್ಯಾಟ್ಸ್‌ಮನ್ ಆಗಿಯೂ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ. ಈವರೆಗೆ 123 ಪಂದ್ಯಗಳನ್ನು ಆಡಿರುವ ಅವರು 46.9 ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಇದರ ನಡುವೆ 254* ಬಾರಿಸಿದ್ದು ಅವರು ವೈಯುಕ್ತಿಕ ಗರಿಷ್ಠ ಸ್ಕೋರ್. ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ 31 ಅರ್ಧಶತಕಗಳು ಮತ್ತು 30 ಶತಕಗಳನ್ನು ಸಹ ಬಾರಿಸಿದ್ದಾರೆ.
ಇದನ್ನೂ ಓದಿ: IPL 2025: ಐಪಿಎಲ್ ಪುನರಾರಂಭ: RCB ತಂಡಕ್ಕೆ ಮೊದಲ ಮ್ಯಾಚ್
ಅಂದರೆ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದೊಂದಿಗೆ ಉತ್ತಮ ಪ್ರದರ್ಶನ ನೀಡಿದ ಆಟಗಾರ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ನಾಯಕತ್ವದ ಜವಾಬ್ದಾರಿವಹಿಸುವುದು ಸೂಕ್ತ ಎಂದು ಮೈಕಲ್ ವಾನ್ ಹೇಳಿದ್ದಾರೆ. ಈ ಮೂಲಕ ಕಿಂಗ್ ಕೊಹ್ಲಿಯ ನಿವೃತ್ತಿಯನ್ನು ಮುಂದೂಡಬಹುದು ಎಂಬ ಸಲಹೆಯನ್ನು ಸಹ ಇಂಗ್ಲೆಂಡ್ ತಂಡದ ಮಾಜಿ ನಾಯಕ ನೀಡಿದ್ದಾರೆ.