ಶಹಬಾಝ್ ನಿಂತಿದ್ರೆ, ನಾ ಮ್ಯಾಚ್ ಗೆಲ್ಲಿಸುತ್ತಿದ್ದೆ: ತಿಲಕ್ ವರ್ಮಾ ಅಚ್ಚರಿಯ ಹೇಳಿಕೆ

ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ 8ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ 'ಎ' ತಂಡ 49.2 ಓವರ್‌ಗಳಲ್ಲಿ 313 ರನ್‌ಗಳಿಗೆ ಆಲೌಟ್ ಆಯಿತು. ಈ ಬೃಹತ್ ಗುರಿ ಬೆನ್ನಟ್ಟಿದ ಭಾರತ 'ಎ' ತಂಡ 49.1 ಓವರ್‌ಗಳಲ್ಲಿ 265 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 48 ರನ್‌ಗಳಿಂದ ಸೋಲೊಪ್ಪಿಕೊಂಡಿದೆ.

ಶಹಬಾಝ್ ನಿಂತಿದ್ರೆ, ನಾ ಮ್ಯಾಚ್ ಗೆಲ್ಲಿಸುತ್ತಿದ್ದೆ: ತಿಲಕ್ ವರ್ಮಾ ಅಚ್ಚರಿಯ ಹೇಳಿಕೆ
Tilak Varma
Image Credit source: Sonyliv

Updated on: Nov 23, 2026 | 9:02 AM

ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ನ.22) ನಡೆದ ACC ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ‘ಬಿ’ ಗುಂಪಿನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ‘ಎ’ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ‘ಎ’ ವಿರುದ್ಧ 48 ರನ್‌ಗಳ ಸೋಲು ಅನುಭವಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಭಾರತ ಎ ತಂಡದ ನಾಯಕ ತಿಲಕ್ ವರ್ಮಾ, “ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದರು. ಬಳಿಕ ನಾನು ಮತ್ತು ಶಹಬಾಝ್ ಅಹ್ಮದ್ ನಿರ್ಮಿಸಿದ ಜೊತೆಯಾಟ ಬಹಳ ಮುಖ್ಯವಾಗಿತ್ತು. ಆದರೆ ನಾವು ರನ್ ವೇಗ ಹೆಚ್ಚಿಸಲು ಮುಂದಾದಾಗಲೇ ದುರದೃಷ್ಟವಶಾತ್ ಶಹಬಾಝ್ ಔಟಾದರು. ಅವರು ಇನ್ನೆರಡು ಓವರ್ ಕ್ರೀಸ್‌ನಲ್ಲಿದ್ದಿದ್ದರೆ, ನಾನು ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದೆ. ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ.”

Loading...

“ಎರಡನೇ ಇನ್ನಿಂಗ್ಸ್‌ನ ಮೊದಲ 10 ಓವರ್‌ಗಳಲ್ಲಿ ಚೆಂಡು ಸ್ವಲ್ಪ ಸ್ವಿಂಗ್ ಆಗುತ್ತಿತ್ತು. ಪಾಕ್ ವೇಗಿಗಳು ಉತ್ತಮ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡಿದರು, ಅವರಿಗೆ ಶ್ರೇಯಸ್ಸು ಸಲ್ಲಬೇಕು. ಆದರೆ ನಾವು ಮಧ್ಯದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡಿದ್ದೇ ಹಿನ್ನಡೆಯಾಯಿತು. ಇಲ್ಲದಿದ್ದರೆ 47 ಅಥವಾ 48ನೇ ಓವರ್‌ನಲ್ಲೇ ಪಂದ್ಯವನ್ನು ಮುಗಿಸಬಹುದಿತ್ತು” ಎಂದು ತಿಲಕ್ ವರ್ಮಾ ಹೇಳಿದ್ದಾರೆ.

ಶತಕಕ್ಕಿಂತ ತಂಡದ ಗೆಲುವೇ ಮುಖ್ಯ:

“ಇದು ನನ್ನ ಅತ್ಯುತ್ತಮ ಬ್ಯಾಟಿಂಗ್ ಎಂದು ನಾನು ಹೇಳುವುದಿಲ್ಲ. ನನ್ನ ಪ್ರಕಾರ ತಂಡವನ್ನು ಗೆಲ್ಲಿಸುವುದೇ ಅತ್ಯುತ್ತಮ ಪ್ರದರ್ಶನ. ತಂಡ ಗೆಲ್ಲದಿದ್ದರೆ ಆ ಇನ್ನಿಂಗ್ಸ್ ನನಗೆ ಶ್ರೇಷ್ಠವಲ್ಲ. ನಾಯಕನಾದವನು ಜವಾಬ್ದಾರಿ ಹೊರಬೇಕು ಮತ್ತು ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯಬೇಕು. ನನಗೆ ಆ ಜವಾಬ್ದಾರಿ ನಿಭಾಯಿಸಲು ಇಷ್ಟ. ಇನ್ನೊಬ್ಬ ಬ್ಯಾಟರ್ ಸಾಥ್ ನೀಡಿದ್ದರೆ ಖಂಡಿತ ಗೆಲ್ಲುತ್ತಿದ್ದೆವು ಎಂದು ತಿಲಕ್ ವರ್ಮಾ ಹೇಳಿದ್ದಾರೆ.

ತಿಲಕ್ ಇನ್ನಿಂಗ್ಸ್ ಬಗ್ಗೆ ಚರ್ಚೆ:

ತಿಲಕ್ ವರ್ಮಾ ಸತತ ಎರಡನೇ ಶತಕ (ಹಿಂದಿನ ಪಂದ್ಯದಲ್ಲಿ ನೇಪಾಳ ವಿರುದ್ಧ 107 ರನ್ ಗಳಿಸಿದ್ದರು) ಬಾರಿಸಿ ನಾಯಕನ ಆಟವಾಡಿದರೂ, ಪಾಕಿಸ್ತಾನ್ ವಿರುದ್ಧ ಅವರ 67.11ರ ಸ್ಟ್ರೈಕ್ ರೇಟ್ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆ ಶುರುವಾಗಿದೆ. ಆರಂಭದಲ್ಲಿ 36 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ್ದು ಹಾಗೂ ಹೆಚ್ಚಿನ ಡಾಟ್ ಬಾಲ್‌ಗಳನ್ನು ಆಡಿದ್ದರಿಂದ ಅಗತ್ಯ ರನ್‌ರೇಟ್ ಏರುತ್ತಲೇ ಹೋಯಿತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಒಂದೆಡೆ ಶಹಬಾಝ್ ಅಹ್ಮದ್ ಕೇವಲ 49 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 56 ರನ್ ಸಿಡಿಸಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರೆ, ಮತ್ತೊಂದೆಡೆ ನಾಯಕ ತಿಲಕ್ ವರ್ಮಾ ತಮ್ಮ ನಿಧಾನಗತಿಯ ಆಟವನ್ನೇ ಮುಂದುವರೆಸಿದ್ದರು. 314 ರನ್‌ಗಳ ಬೃಹತ್ ಗುರಿ ಬೆನ್ನಟ್ಟುವಾಗ ಅಗತ್ಯ ರನ್‌ರೇಟ್ ಏರುತ್ತಲೇ ಇದ್ದರೂ, ತಿಲಕ್ ಕ್ರೀಸ್‌ನಲ್ಲಿ ನೆಲೆಯೂರಲು ಹೆಚ್ಚಿನ ಎಸೆತಗಳನ್ನು ತೆಗೆದುಕೊಂಡರು.

149 ಎಸೆತಗಳನ್ನು ಎದುರಿಸಿ 67.11ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 100 ರನ್ ಗಳಿಸಿದ್ದು, ಇನ್ನೊಂದು ತುದಿಯಲ್ಲಿದ್ದ ಶಹಬಾಝ್ ಮೇಲೆ ರನ್ ವೇಗ ಹೆಚ್ಚಿಸುವ ಅನಗತ್ಯ ಒತ್ತಡವನ್ನು ಹೇರಿತು. ಪರಿಣಾಮವಾಗಿ, ದೊಡ್ಡ ಹೊಡೆತಕ್ಕೆ ಕೈಹಾಕಿದ ಶಹಬಾಝ್ ವಿಕೆಟ್ ಒಪ್ಪಿಸಬೇಕಾಯಿತು ಮತ್ತು ಅಂತಿಮವಾಗಿ ತಿಲಕ್ ವರ್ಮಾ ಅವರ ಈ ನಿಧಾನಗತಿಯ ಇನ್ನಿಂಗ್ಸ್ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ಹೈಡ್ರಾಮಾ… ಹರ್ಷಿತ್​ ರಾಣಾರನ್ನು ಗುಂಪಾಗಿ ಗುರಿಯಾಗಿಸಿದ ಪಾಕ್ ಆಟಗಾರರು!

ಒಟ್ಟಾರೆಯಾಗಿ, ನಾಯಕ ತಿಲಕ್ ವರ್ಮಾ ಅವರ ಶತಕದ ಹೋರಾಟದ ಹೊರತಾಗಿಯೂ ಮಧ್ಯಮ ಕ್ರಮಾಂಕದ ವೈಫಲ್ಯ ಮತ್ತು ರನ್ ವೇಗದ ಕೊರತೆಯಿಂದಾಗಿ ಭಾರತ ‘ಎ’ ತಂಡ ಪಾಕಿಸ್ತಾನ್ ವಿರುದ್ಧ ಸೋಲೊಪ್ಪಿಕೊಳ್ಳಬೇಕಾಯಿತು. ವೈಯಕ್ತಿಕ ಶತಕಕ್ಕಿಂತ ತಂಡದ ಗೆಲುವೇ ಮುಖ್ಯ ಎಂಬ ತಿಲಕ್ ಅವರ ನಾಯಕತ್ವದ ನಿಲುವು ಮೆಚ್ಚುಗೆಗೆ ಪಾತ್ರವಾಗಿದ್ದರೂ, ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗದ ಸಂಘಟಿತ ಪ್ರದರ್ಶನ ಭಾರತಕ್ಕೆ ಅನಿವಾರ್ಯವಾಗಿದೆ. ಈ ಸೋಲಿನ ಪಾಠಗಳೊಂದಿಗೆ ಟೀಮ್ ಇಂಡಿಯಾ ಮುಂದಿನ ಹಂತದಲ್ಲಿ ಯಾವ ರೀತಿ ಪುಟಿದೇಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us