ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಇಂದು ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ದಿನದಂದು ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಥಾನದ ಆಕಾಂಕ್ಷಿಯಾಗಿರುವ ಯುವ ಆಟಗಾರ ಕರ್ನಾಟಕದ ದೇವದತ್ ಪಡಿಕ್ಕಲ್ (Devdutt Padikkal) ಅವರ ಹುಟ್ಟುಹಬ್ಬ ಕೂಡ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ 2020ರಲ್ಲಿ ತಮ್ಮ 19ನೇ ವಯಸ್ಸಿಗೆ ಪದಾರ್ಪಣೆ ಮಾಡಿದ ಎಡಗೈ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ ಇಂದು 22ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅನೇಕ ಅಭಿಮಾನಿಗಳು ಇವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಆರ್ಸಿಬಿ (RCB) ಕೂಡ ತನ್ನ ಟ್ವಿಟರ್ ಖಾತೆಯಲ್ಲಿ ಶುಭಕೋರಿದೆ.
ಕರ್ನಾಟಕದ ಪ್ರತಿಭಾನ್ವಿತ ಬ್ಯಾಟಿಂಗ್ ಪ್ರತಿಭೆ ದೇವದತ್ ಪಡಿಕ್ಕಲ್ ಮೂಲತಃ ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಾಲ್ ಪಟ್ಟಣದವರು. ಇವರು ಅಲ್ಲಿ ಹುಟ್ಟಿದರೂ ದೇವದತ್ ಅಪ್ಪಟ ಕರ್ನಾಟಕದ ಹುಡುಗ. ಭಾರತದ ಅಂಡರ್-19 ತಂಡದಲ್ಲಿ ಆಡಿದ ಪಡಿಕ್ಕಲ್ 2018 ನವೆಂಬರ್ನಲ್ಲಿ ಮಹಾರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ರಣಜಿ ತಂಡದಲ್ಲಿ ಸ್ಥಾನ ಪಡೆದರು. ಪಡಿಕ್ಕಲ್ ಅಂಡರ್ 14ನಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಕರ್ನಾಟಕ ಅಂಡರ್ 19ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಪಡಿಕ್ಕಲ್ಗೆ ಅಂಡರ್ 19 ಟೀಮ್ ಇಂಡಿಯಾದಲ್ಲಿ ಸ್ಥಾನ ಲಭಿಸಿತು.
Wishing one of our favourites, @devdpd07 a very Happy 2️⃣2️⃣nd Birthday. ?
Have a great one, Champ! ????#PlayBold #WeAreChallengers pic.twitter.com/UafJBcGqnh
— Royal Challengers Bangalore (@RCBTweets) July 7, 2022
ದ್ರಾವಿಡ್ ಗರಡಿಯಲ್ಲಿ ಪಳಗಿದ ಪಡಿಕ್ಕಲ್ ಬ್ಯಾಟಿಂಗ್ನಲ್ಲಿ ಮತ್ತಷ್ಟು ಪಕ್ವವಾದರು. ಲಿಸ್ಟ್ ಎ ಕ್ರಿಕೆಟ್ನಲ್ಲಿ ಇವರ ಸರಾಸರಿ ಬರೋಬ್ಬರಿ 86 ರನ್ನಷ್ಟಿದೆ. ಇನ್ನು, ಐಪಿಎಲ್ ಸೇರಿದಂತೆ ಟಿ20 ಕ್ರಿಕೆಟ್ನಲ್ಲಿ ಸಾಕಷ್ಟು ಪಂದ್ಯ ಆಡಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಬಳ್ಳಾರಿ ಟಸ್ಕರ್ಸ್ ಪರ ಮಿಂಚಿದ್ದ ಎಡಗೈ ಬ್ಯಾಟ್ಸ್ಮನ್ಗೆ ಐಪಿಎಲ್ನಲ್ಲೂ ಅವಕಾಶ ಲಭಿಸಿತು. ಅದರಂತೆ 2019 ರಲ್ಲಿ ಆರ್ಸಿಬಿ ತಂಡದಲ್ಲಿ ಸ್ಥಾನ ಪಡೆದರೂ ಆಡುವ ಅವಕಾಶ ದೊರೆತಿರಲಿಲ್ಲ. 2020 ರ ಐಪಿಎಲ್ ಮೂಲಕ ಪದಾರ್ಪಣೆ ಮಾಡಿದ್ದ ಪಡಿಕ್ಕಲ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ 56 ರನ್ ಬಾರಿಸಿ ಮೊದಲ ಐಪಿಎಲ್ ಪಂದ್ಯದಲ್ಲೇ ಅರ್ಧ ಶತಕ ಗಳಿಸಿದ ಕೆಲವೇ ಆಟಗಾರರ ಪಟ್ಟಿಯಲ್ಲಿ ಗುರುತಿಸಿಕೊಂಡರು.
ಐಪಿಎಲ್ನಲ್ಲಿ ಅವರು ಮೂರು ಋತು ಆಡಿರುವ ಪಂದ್ಯಗಳಲ್ಲಿ ಕೆಲವು ಅವಿಸ್ಮರಣೀಯ ಇನ್ನಿಂಗ್ಸ್ ಕೊಟ್ಟಿದ್ದಾರೆ. ಎರಡು ಸೀಸನ್ನಲ್ಲಿ ಆರ್ಸಿಬಿ ಪರ ಹಾಗೂ ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿದಿದ್ದರು. ದೇವದತ್ ಪಡಿಕ್ಕಲ್ ಅವರ ನೆಚ್ಚಿನ ಆಟಗಾರ ಗೌತಮ್ ಗಂಭೀರ್ ಎಂಬುದು ವಿಶೇಷ. ಅಷ್ಟೇ ಅಲ್ಲದೆ ರಾಹುಲ್ ದ್ರಾವಿಡ್ ಹಾಗೂ ಗಂಭೀರ್ ಅವರ ಕ್ರಿಕೆಟ್ ಐಕಾನ್ಗಳು. ಹಾಗೆಯೇ ಅವರ ನೆಚ್ಚಿನ ಬೌಲರ್ ಇಂಗ್ಲೆಂಡ್ನ ಜೇಮ್ಸ್ ಅಂಡರ್ಸನ್.
ಒಟ್ಟಾರೆ ಬ್ಯಾಟಿಂಗ್ಗೆ ತನ್ನದೇ ಆದ ವಿಶೇಷ ಟೆಕ್ನಿಕ್ ಹೊಂದಿರುವ ದೇವದತ್ ಪಡಿಕ್ಕಲ್ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿ ಎಂಬುದು ಎಲ್ಲರ ಆಶಯ. ಹ್ಯಾಪಿ ಬರ್ತ್ ಡೇ ಡಿಡಿಪಿ.
IND vs ENG: ಇಂದು ಭಾರತ- ಇಂಗ್ಲೆಂಡ್ ಮೊದಲ ಟಿ20: ರೋಹಿತ್ ಮೇಲೆ ಎಲ್ಲರ ಕಣ್ಣು