Hardik Pandya: ಅಗ್ರಸ್ಥಾನಕ್ಕೇರಿದ ಖುಷಿಯಲ್ಲಿ ಪಂದ್ಯ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು ಕೇಳಿ
IPL 2022, RR vs GT: ಗುಜರಾತ್ ಟೈಟಾನ್ಸ್ ತಂಡ 37 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ (RR vs GT) ತಂಡವನ್ನು ಮಣಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಗೆದ್ದ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಏನು ಹೇಳಿದರು ಕೇಳಿ.
ಐಪಿಎಲ್ 2022ರ (IPL 2022) ಹೊಸ ತಂಡವಾಗಿರುವ ಗುಜರಾತ್ ಟೈಟಾನ್ಸ್ ತಂಡ ತನ್ನ ಚೊಚ್ಚಲ ಆವೃತ್ತಿಯಲ್ಲೇ ಬೊಂಬಾಟ್ ಪ್ರದರ್ಶನ ನೀಡುತ್ತಿದೆ. ಹ್ಯಾಟ್ರಿಕ್ ಗೆಲುವಿನ ಬಳಿಕ ಹಿಂದಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ಗುಜರಾತ್ ತಂಡ ಇದೀಗ ಮತ್ತೆ ಗೆಲುವಿನ ಲಯಕ್ಕೆ ಮರಳಿ ಅಗ್ರಸ್ಥಾನಕ್ಕೇರಿದೆ. ನಾಯಕ ಹಾರ್ದಿಕ್ ಪಾಂಡ್ಯ (Hardik Pandya) 87*ರನ್, 52 ಎಸೆತ, 8 ಬೌಂಡರಿ, 4 ಸಿಕ್ಸರ್, 18ಕ್ಕೆ 1 ಆಲ್ರೌಂಡ್ ನಿರ್ವಹಣೆ ಹಾಗೂ ವೇಗಿ ಲಾಕಿ ಫರ್ಗ್ಯುಸನ್ (23ಕ್ಕೆ 3) ಮಾರಕ ದಾಳಿ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ 37 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ (RR vs GT) ತಂಡವನ್ನು ಮಣಿಸಿತು. ಜೋಸ್ ಬಟ್ಲರ್ (54ರನ್, 24 ಎಸೆತ, 8 ಬೌಂಡರಿ, 3 ಸಿಕ್ಸರ್) ಬಿರುಸಿನ ಆರಂಭದ ನಡುವೆಯೂ ಆರ್ಆರ್ 9 ವಿಕೆಟ್‌ಗೆ 155 ರನ್‌ಗಳಿಸಲಷ್ಟೇ ಶಕ್ತವಾಯಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಗೆದ್ದ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಏನು ಹೇಳಿದರು ಕೇಳಿ.
“ಈ ಪಂದ್ಯವನ್ನು ಗೆದ್ದಿರುವುದಕ್ಕೆ ತುಂಬಾ ಖುಷಿ ಇದೆ. ನಾನು ಕೆಲ ಸಮಯದಿಂದ ಬ್ಯಾಟಿಂಗ್ ಅಭ್ಯಾಸ ಮಾಡಿರಲಿಲ್ಲ. ಇವತ್ತು ನನಗೆ ಉತ್ತಮ ಲಯ ಸಿಕ್ಕಿತು ಜೊತೆಗೆ ಯೋಜನೆ ಮಾಡಿ ಆಟವಾಡಿದೆ. ಇದರಿಂದ ಇತರ ಬ್ಯಾಟರ್ಗಳು ಆರಾಮವಾಗಿ ಆಡಲು ನೆರವಾಗುತ್ತದೆ. ನಾನು 12 ಎಸೆತಗಳಲ್ಲಿ 30 ರನ್ ಬಾರಿಸಿ ಮತ್ತೊಂದು ಜವಾಬ್ದಾರಿ ಕೂಡ ನಿಭಾಯಿಸಿದ್ದೇನೆ. ನಾಯಕತ್ವ ಯಾವಾಗಲು ಖುಷಿ ನೀಡುತ್ತದೆ. ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಇದರಿಂದ ನಾವೆಲ್ಲರೂ ಪರಸ್ಪರ ಸಂತೋಷದಿಂದ ಇರಬೇಕೆಂದು ನಾನು ಬಯಸುತ್ತೇನೆ. ಇದು ತಂಡದಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಮಾಡುತ್ತಿದೆ,” ಎಂದು ಪಾಂಡ್ಯ ಹೇಳಿದ್ದಾರೆ.
ಸೋತ ತಂಡದ ನಾಯಕ ಸಂಜು ಸ್ಯಾಮ್ಸನ್ ಮಾತನಾಡಿ, “ನಾವು ಗುಜರಾತ್ ತಂಡಕ್ಕೆ 10-15 ರನ್ಗಳನ್ನು ಹೆಚ್ಚು ಬಿಟ್ಟುಕೊಟ್ಟೆವು ಎಂದು ಹೇಳಬಹುದು. ನಾನು ಗುಜರಾತ್ ಬ್ಯಾಟರ್ಗಳಿಗೆ ಕ್ರೆಡಿಟ್ ನೀಡುತ್ತೇನೆ. ಹಾರ್ದಿಕ್ ಬ್ಯಾಟ್ನಿಂದ ಅತ್ಯುತ್ತಮ ಆಟ ಮೂಡಿಬಂತು, ಅವರು ರನ್ ಗಳಿಸುತ್ತಲೇ ಇದ್ದರು. ನಮ್ಮ ಕೈಯಲ್ಲಿ ವಿಕೆಟ್ಗಳಿದ್ದರೆ ಈ ಪಂದ್ಯವನ್ನು ಗೆಲ್ಲಬಹುದಿತ್ತು. ಪವರ್ ಪ್ಲೇನಲ್ಲಿ ನಮ್ಮ ರನ್ರೇಟ್ ಅದ್ಭುತವಾಗಿತ್ತು. ಆದರೆ, ಇದರ ಬೆನ್ನಲ್ಲೇ ವಿಕೆಟ್ಗಳನ್ನು ಕಳೆದುಕೊಂಡೆವು. ಟ್ರೆಂಟ್ ಬೌಲ್ಟ್ ಅಲಭ್ಯತೆ ಎದ್ದು ಕಾಣಿಸಿತು. ಅವರು ಮುಂದಿನ ಪಂದ್ಯಕ್ಕೆ ಲಭ್ಯರಾಗುತ್ತಾರೆಂದು ನಂಬಿದ್ದೇನೆ. ಇಂದು ಹಾರ್ದಿಕ್ ದಿನವಾಗಿತ್ತು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲಿ ಕೂಡ ಅವರು ಉತ್ತಮ ಆಟವಾಡಿದರು. ಪ್ರತಿ ಪಂದ್ಯ ಕೂಡ ಮುಖ್ಯ. ಇದರಿಂದ ಕಲಿತು ಮುಂದಿನ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಬೇಕಾದ ಅಗತ್ಯವಿದೆ,” ಎಂದಿದ್ದಾರೆ.
ಇನ್ನು ಮೂರನೇ ಕ್ರಮಾಂಕದಲ್ಲಿ ಆರ್. ಅಶ್ವಿನ್ ಅವರನ್ನು ಕಣಕ್ಕಿಳಿಸಿದ ಬಗ್ಗೆ ಮಾತನಾಡಿದ ಸ್ಯಾಮ್ಸನ್, “ಕೊನೆಯ ಸೀಸನ್ ವರೆಗೂ ನಾನು ಮೂರನೇ ಕ್ರಮಾಂಕದಲ್ಲೇ ಆಡುತ್ತಿದ್ದೆ. ಆದರೆ, ಈ ಬಾರಿ ಕೊಂಚ ಬದಲಾವಣೆ ಮಾಡಿ 4 ಅಥವಾ 5ನೇ ಕ್ರಮಾಂಕದಲ್ಲಿ ತಂಡಕ್ಕೆ ಅಗತ್ಯವಿರುವ ಸ್ಥಾನದಲ್ಲಿ ಆಡೋಣ ಎಂಬ ಯೋಜನೆ ಮಾಡಿಕೊಂಡೆ. ಹೀಗಾಗಿ ಅಶ್ವಿನ್ರನ್ನು ಬೇಗ ಕಳುಹಿಸಿದೆವು. ದೇವದತ್ ಪಡಿಕ್ಕಲ್ ಆರಂಭದ ಮೂರು ಮೂರು ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಇದೆಲ್ಲ ತಂಡಕ್ಕಾಗಿ,” ಎಂಬುದು ಸ್ಯಾಮ್ಸನ್ ಮಾತು.
ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಮಿಂಚಿದ ಹಾರ್ದಿಕ್ ಪಡೆ 37 ರನ್ಗಳ ಜಯ ತನ್ನದಾಗಿಸಿತು. ಈ ಮೂಲಕ ಜಿಟಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆಡಿದ ಐದು ಪಂದ್ಯಗಳಲ್ಲಿ ಕೇವಲ ಒಂದು ಸೋಲನ್ನಷ್ಟೆ ಕಂಡು ನಾಲ್ಕು ಗೆಲುವಿನೊಂದಿಗೆ 8 ಅಂಕ ಸಂಪಾದಿಸಿದೆ. ಇತ್ತ ಸ್ಯಾಮ್ಸನ್ ಪಡೆ ಎರಡನೇ ಸೋಲಿನ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ.
SRH vs KKR, IPL 2022: ಗೆಲುವಿನ ಓಟ ಮುಂದುವರೆಸುತ್ತಾ ಹೈದರಾಬಾದ್?: ಕೆಕೆಆರ್ಗಿಂದು ಮತ್ತೊಂದು ಸವಾಲು
RR vs GT, IPL 2022: ಅಗ್ರಸ್ಥಾನಕ್ಕೇರಿದ ಗುಜರಾತ್: ಚೊಚ್ಚಲ ಆವೃತ್ತಿಯಲ್ಲೇ ಹಾರ್ದಿಕ್ ಟೀಮ್ ಬೊಂಬಾಟ್ ಆಟ