ಹೊಸ ವರ್ಷ 2023 ರ (New Year 2023) ಮೊದಲ ಸರಣಿಯನ್ನು ಶ್ರೀಲಂಕಾ ವಿರುದ್ಧ ಆಡಲು ಭಾರತ ಕ್ರಿಕೆಟ್ ತಂಡ (India vs Sri Lanka) ಸಜ್ಜಾಗಿದೆ. ಟಿ20 ಸರಣಿ ಮೂಲಕ ಉಭಯ ತಂಡಗಳು ಮುಖಾಮುಖಿ ಆಗಲಿದ್ದು, ಜನವರಿ 3 ಮಂಗಳವಾರದಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲ ಟಿ20 ಪಂದ್ಯ ಆಯೋಜಿಸಲಾಗಿದೆ. ಈಗಾಗಲೇ ಲಂಕಾನ್ನರು ಕೊಲಂಬೊದಿಂದ ವಿಮಾನದ ಮೂಲಕ ಭಾರತಕ್ಕೆ ಬಂದಿಳಿದಿದ್ದಾರೆ. ಉಭಯ ತಂಡಗಳು ಇಂದು ಅಭ್ಯಾಸ ಶುರು ಮಾಡಲಿದೆ. ಪ್ರಮುಖ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ (Hardik Pandya) ಮುನ್ನಡೆಸುತ್ತಿದ್ದಾರೆ. ಇತ್ತ ದಸುನ್ ಶನಕಾ ಶ್ರೀಲಂಕಾ ತಂಡದ ನಾಯಕನಾಗಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ತಂಡಗಳು ಕೊನೆಯ ಬಾರಿಗೆ ಮುಖಾಮುಖಿ ಆಗಿದ್ದು ಏಷ್ಯಾಕಪ್ ಟೂರ್ನಿಯಲ್ಲಿ. ಇಲ್ಲಿ ಭಾರತ ತಂಡವನ್ನು ಸೋಲಿಸಿ ಏಷ್ಯಾಕಪ್ ಗೆಲ್ಲುವ ಆಸೆಗೆ ತಣ್ಣೇರೆರಚಿದ್ದರು. ಅಲ್ಲದೆ ಲಂಕಾನ್ನರು ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಹೀಗಾಗಿ ಶ್ರೀಲಂಕಾವನ್ನು ಕಡೆ ಗಣಿಸುವಂತಿಲ್ಲ. ಜೊತೆಗೆ ಭಾರತದ ಪ್ರವಾಸಕ್ಕೆ ಲಂಕಾ ಕ್ರಿಕೆಟ್ ಮಂಡಳಿ ತಂಡದಲ್ಲಿ ಕೆಲ ಬದಲಾವಣೆಗಳನ್ನೂ ಮಾಡಿದೆ. ಅನುಭವಿ ಲೆಗ್ ಸ್ಪಿನ್ನರ್ ವಾನಿಂದು ಹಸರಂಗ ಇದೇ ಮೊದಲ ಬಾರಿ ಶ್ರೀಲಂಕಾ ಟಿ20 ಕ್ರಿಕೆಟ್ ತಂಡದ ವೈಸ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮನ್ ಭಾನುಕ ರಾಜಪಕ್ಷ ಟಿ20 ಸರಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತ ಟಿ20 ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಇದೇ ಮೊದಲ ಬಾರಿ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ಉಪನಾಯಕನಾಗಿ ಆಯ್ಕೆ ಆಗಿದ್ದಾರೆ. ಋತುರಾಜ್ ಗಾಯಕ್ವಾಡ್ ಕಮ್‌ಬ್ಯಾಕ್ ಮಾಡಿದ್ದಾರೆ. ರಾಹುಲ್ ತ್ರಿಪಾಠಿ, ದೀಪಕ್ ಹೂಡ ಮತ್ತು ಸಂಜು ಸ್ಯಾಮ್ಸನ್ ಕೂಡ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಅಚ್ಚರಿಯ ಆಯ್ಕೆ ಎಂಬಂತೆ ಯುವ ಬೌಲರ್‌ಗಳಾದ ಶಿವಂ ಮಾವಿ ಮತ್ತು ಮುಖೇಶ್ ಕುಮಾರ್ ಇದೇ ಮೊದಲ ಬಾರಿ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗರ ಹೊಸ ವರ್ಷದ ಸಂಭ್ರಮಾಚರಣೆ ಹೇಗಿತ್ತು ಗೊತ್ತಾ? ಫೋಟೋ ನೋಡಿ
ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು ಜನವರಿ 3 ಮಂಗಳವಾರದಂದು ಈ ಪಂದ್ಯ ನಡೆಯಲಿದೆ. ಎರಡನೇ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸಿಸೊಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಜನವರಿ 5ರಂದು ಈ ಪಂದ್ಯ ಆಯೋಜನೆಯಾಗಲಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಜನವರಿ 7ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಮೊದಲ ಟಿ20 ಪಂದ್ಯ ನಡೆಯಲಿರುವ ವಾಂಖೆಡೆ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ವರ್ಗವಾಗಿದೆ. ಅನೇಕ ಐಪಿಎಲ್ ಪಂದ್ಯಗಳಲ್ಲಿ ಇಲ್ಲಿ ರನ್ ಮಳೆ ಸುರಿದಿರುವುದು ಕಂಡಿದ್ದೇವೆ. ಚೆಂಡು ಮೇಲ್ಮೈಯಿಂದ ಬರುತ್ತದೆ. ಬ್ಯಾಟರ್‌ಗಳು ಕೂಡ ಶಾರ್ಟ್ ಬೌಂಡರಿಗಳನ್ನು ಸಿಡಿಸಲು ಈ ಪಿಚ್ ಸಹಾಯಕವಾಗಿದೆ. ಇಬ್ಬನಿಯು ಬೌಲರ್‌ಗಳಿಗೆ ಹೆಚ್ಚು ಸಹಾಯಕಾರಿಯಾಗಿದ್ದು, ಪಂದ್ಯದ ತಿರುವಿಗೆ ಕಾರಣವಾಗಬಹುದು. ಆದಾಗ್ಯೂ, ವೇಗಿಗಳು ಆರಂಭಿಕ ಓವರ್‌ಗಳಲ್ಲಿ ಬೌಲರ್ಗಳು ಮೇಲುಗೈ ಸಾಧಿಸುತ್ತಾರೆ. ಮಳೆಯ ನಿರೀಕ್ಷೆ ಇಲ್ಲವೆಂದು ಹವಾಮಾನ ಇಲಾಖೆ ತಿಳಿಸಿದ್ದು, ಸಂಪೂರ್ಣ 40 ಓವರ್ಗಳ ಪಂದ್ಯ ನಡೆಯಲಿದೆ.
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ , ಶಿವಂ ಮಾವಿ, ಮುಖೇಶ್ ಕುಮಾರ್.
ಶ್ರೀಲಂಕಾ ತಂಡ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಸದೀರ ಸಮರವಿಕ್ರಮ, ಕುಸಲ್ ಮೆಂಡಿಸ್, ಭಾನುಕಾ ರಾಜಪಕ್ಸೆ, ಅಶೇನ್ ಬಂಡಾರ, ಮಹೇಶ್ ತೀಕ್ಷಣ, ದಿಲ್ಶನ್ ಮಧುಶಂಕ, ಕಸುನ್ ರಜಿತ, ಪ್ರಮೋದ್ ಮದುಶನ್, ಲಹಿರು ಕುಮಾರ, ನುವಾನ್ ತುಷಾರ, ದುನಿತ್ ವೆಲ್ಲಲಾಗೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:51 am, Mon, 2 January 23