Updated on:Jan 02, 2023 | 11:20 AM
ಹೊಸ ವರ್ಷದ ಆರಂಭದಿಂದಲೇ ಟೀಂ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಲಾರಂಬಿಸಿದೆ. ಇದಕ್ಕೆ ಪೂರಕವಾಗಿ ಹೊಸ ವರ್ಷದ ಮೊದಲ ದಿನವೇ ಸಭೆ ಮಾಡಿದ ಬಿಸಿಸಿಐ ಭವಿಷ್ಯದ ತಂಡ ಕಟ್ಟಲು ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ. ಇದರೊಂದಿಗೆ ನಾಯಕತ್ವದ ಬಗ್ಗೆ ಇದ್ದ ಗೊಂದಲಗಳಿಗು ತೆರೆ ಎಳಿದಿದೆ.
ವಾಸ್ತವವಾಗಿ ಟಿ20 ನಾಯಕತ್ವದ ಹೊರತಾಗಿ ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲೂ ನಾಯಕತ್ವ ಬದಲಾಗಲಿದೆ ಎಂಬ ಸುದ್ದಿ ಹರಿದಾಡಲಾರಂಬಿಸಿತ್ತು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಸದ್ಯಕ್ಕೆ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ನಾಯಕರಾಗಿ ಮುಂದುವರಿಯಲಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಮಂಡಳಿಯ ಉನ್ನತ ಅಧಿಕಾರಿಗಳು ಈ ಎರಡು ಸ್ವರೂಪಗಳಲ್ಲಿ ಅವರ ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದ್ದಾರೆ. ರೋಹಿತ್ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವ ವಹಿಸುತ್ತಿದ್ದು, ಈ ಎರಡು ಮಾದರಿಗಳಲ್ಲಿ ನಾಯಕನಾಗಿ ಅವರ ಭವಿಷ್ಯದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಬಿಸಿಸಿಐ ಮೂಲ ತಿಳಿಸಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ, ಕಳೆದ ವರ್ಷ ಟಿ20 ವಿಶ್ವಕಪ್ ಮತ್ತು ಏಷ್ಯಾಕಪ್‌ನ ಫೈನಲ್‌ಗೆ ತಲುಪಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ. ಅಲ್ಲದೆ ಇಂಜರಿಯಿಂದ ಸಾಕಷ್ಟು ಬಾರಿ ತಂಡದಿಂದ ಹೊರಗುಳಿದಿದ್ದ ರೋಹಿತ್ ಟೆಸ್ಟ್ ಮಾದರಿಯಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದರು. ಹೀಗಾಗಿ ಅವರನ್ನು ಈ ಮಾದರಿಯಲ್ಲಿ ನಾಯಕನಾಗಿ ಮುಂದುವರೆಸುವ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.
ಆದರೆ ಸದ್ಯಕ್ಕೆ ಅವರ ನಾಯಕತ್ವದ ಬಗ್ಗೆ ಮಂಡಳಿ ಚಿಂತಿಸುತ್ತಿಲ್ಲ ಎಂದು ತೋರುತ್ತದೆ. ಜನವರಿ 1ರ ಭಾನುವಾರದಂದು ಮುಂಬೈನಲ್ಲಿ ಟೀಂ ಇಂಡಿಯಾ ಪ್ರದರ್ಶನದ ಕುರಿತು ಪರಿಶೀಲನಾ ಸಭೆ ನಡೆಸಲಾಯಿತು. ಇದರಲ್ಲಿ ಸ್ವತಃ ನಾಯಕ ರೋಹಿತ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಭಾಗವಹಿಸಿದ್ದರು.
ಈ ಸಭೆಯ ನಂತರ, ರೋಹಿತ್ ನಾಯಕತ್ವದಲ್ಲಿ ಸದ್ಯಕ್ಕೆ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಮೂಲಗಳು ತಿಳಿಸಿವೆ. ಸದ್ಯ ರೋಹಿತ್ ಹಾಗೂ ತಂಡದ ಗಮನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮೇಲಿದ್ದು, ಭಾರತ ಫೈನಲ್ ತಲುಪುವ ಭರವಸೆ ಬಲವಾಗಿದೆ. ಇದಲ್ಲದೇ 2023ರ ಏಕದಿನ ವಿಶ್ವಕಪ್ ಮೇಲೆಯೂ ಬಿಸಿಸಿಐ ಗಮನ ಹರಿಸಿದೆ.
Published On - 11:20 am, Mon, 2 January 23