IND vs ENG: ಹಾರ್ದಿಕ್ ಆಲ್ರೌಂಡ್ ಪ್ರದರ್ಶನಕ್ಕೆ ಬೆಚ್ಚಿಬಿದ್ದ ಇಂಗ್ಲೆಂಡ್: ಭಾರತಕ್ಕೆ 50 ರನ್‌ಗಳ ಅಮೋಘ ಜಯ
ENG vs IND 1st T20I: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಕಂಡಿದೆ. ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಪ್ರದರ್ಶನಕ್ಕೆ ತಬ್ಬಿಬ್ಬಾದ ಆಂಗ್ಲರು ಟೀಮ್ ಇಂಡಿಯಾ ನೀಡಿದ್ದ ಟಾರ್ಗೆಟ್ ಬೆನ್ನಟ್ಟಲು ಸಾಧ್ಯವಾಗದೆ ಸೋಲಿಗೆ ಶರಣಾಗಿದ್ದಾರೆ.
ಸೌಥ್‌ಹ್ಯಾಮ್ಟನ್‌ನ ರೋಸ್ ಬೌಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ (India vs England) ತಂಡ ಭರ್ಜರಿ ಗೆಲುವು ಕಂಡಿದೆ. ಹಾರ್ದಿಕ್ ಪಾಂಡ್ಯ (Hardik Pandya) ಅವರ ಆಲ್ರೌಂಡ್ ಪ್ರದರ್ಶನಕ್ಕೆ ತಬ್ಬಿಬ್ಬಾದ ಆಂಗ್ಲರು ಟೀಮ್ ಇಂಡಿಯಾ ನೀಡಿದ್ದ ಟಾರ್ಗೆಟ್ ಬೆನ್ನಟ್ಟಲು ಸಾಧ್ಯವಾಗದೆ ಸೋಲಿಗೆ ಶರಣಾಗಿದ್ದಾರೆ. 50 ರನ್‌ಗಳ ಅಮೋಘ ಗೆಲುವಿನೊಂದಿಗೆ ರೋಹಿತ್ ಶರ್ಮಾ ಬಳಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಬ್ಯಾಟಿಂಗ್ನಲ್ಲಿ ಆಕರ್ಷಕ ಅರ್ಧಶತಕ ಗಳಿಸಿ ತಂಡಕ್ಕೆ ಆಧಾರವಾಗುವ ಜೊತೆಗೆ 4 ಓವರ್ ಬೌಲಿಂಗ್ ಮಾಡಿ 33 ರನ್ ನೀಡಿ 4 ವಿಕೆಟ್ ಕಿತ್ತ ಹಾರ್ದಿಕ್ ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರವಾಹಿಸಿದರು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಜಿಕೊಂಡರು. ಇವರ ಜೊತೆಗೆ ಪದಾರ್ಪಣೆ ಪಂದ್ಯದಲ್ಲಿ ಆರ್ಶ್ದೀಪ್ ಸಿಂಗ್ (Arshdeep Singh) 2 ವಿಕೆಟ್ ಪಡೆದು ಭರವಸೆ ಮೂಡಿಸಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬಿರುಸಿನ ಆರಂಭ ಪಡೆದಿದ್ದ ರೋಹಿತ್ ಶರ್ಮಾ ಆಟ ಹೆಚ್ಚುಹೊತ್ತು ನಡೆಯಲಿಲ್ಲ. ಮೊಯೀನ್ ಅಲಿ ಬೌಲಿಂಗ್‌ನಲ್ಲಿ 24 ರನ್ ಗಳಿಸಿದ್ದಾಗ ಬಟ್ಲರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ತಮ್ಮ ಮುಂದಿನ ಓವರ್‌ನಲ್ಲಿ ಅಲಿ, 8 ರನ್ ಗಳಿಸಿದ್ದ ಇಶಾನ್ ವಿಕೆಟ್ ಕೂಡ ಪಡೆದರು. ಈ ವೇಳೆ ಜತೆಯಾದ ದೀಪಕ್ ಹೂಡಾ ಮತ್ತು ಸೂರ್ಯಕುಮಾರ್ ಯಾದವ್, ಎದುರಾಳಿ ಬೌಲರ್‌ಗಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ.
Wimbledon 2022: ಜರ್ಮನಿಯ ಮರಿಯಾರನ್ನು ಮಣಿಸಿ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ಪ್ರವೇಶಿಸಿದ ಓನ್ಸ್ ಜಬೇರ್..!
ಇವರಿಬ್ಬರು ತಂಡದ ಮೊತ್ತವನ್ನು 100ರ ಅಂಚಿಗೆ ತಂದಿಟ್ಟರು. ಭರ್ಜರಿ ಫಾರ್ಮ್ನಲ್ಲಿದ್ದ ಹೂಡಾ ಕೇವಲ 17 ಎಸೆತಗಳಲ್ಲಿ 33 ರನ್ ಸಿಡಿಸಿ ಔಟಾದ ಬಳಿಕ ಬಂದ ಹಾರ್ದಿಕ್ ಪಾಂಡ್ಯ ಆಕ್ರಮಣಕಾರಿ ಆಟವಾಡಿದರು. ಸೂರ್ಯಕುಮಾರ್ ಜತೆ ನಾಲ್ಕನೇ ವಿಕೆಟ್‌ಗೆ 37 ರನ್ ಹಾಗೂ ಐದನೇ ವಿಕೆಟ್‌ಗೆ ಅಕ್ಷರ್ ಪಟೇಲ್ ಜತೆ 45 ರನ್‌ಗಳ ಜತೆಯಾಟ ನೀಡಿದರು. ಸೂರ್ಯ 19 ಎಸೆತಗಳಲ್ಲಿ 39 ರನ್ ಗಳಿಸಿದರು. ಅಕ್ಷರ್ 17 ಹಾಗೂ ದಿನೇಶ್ ಕಾರ್ತಿಕ್ 11 ರನ್ಗೆ ಔಟಾದರು.
ಇದರ ನಡುವೆ ಸ್ಫೋಟಕ ಆಟವಾಡಿದ ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ 6 ಫೋರ್ ಹಾಗೂ 1 ಸಿಕ್ಸರ್ ಸಿಡಿಸಿ 51 ರನ್ ಚಚ್ಚಿ ನಿರ್ಗಮಿಸಿದರು. ಆದರೆ, ಕೊನೆಯ ಮೂರು ಓವರ್‌ಗಳಲ್ಲಿ ಭಾರತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. 18 ಎಸೆತಗಳಲ್ಲಿ 20 ರನ್ ಮಾತ್ರ ಗಳಿಸಿತು. ಇದರಿಂದ ಸ್ಕೋರ್ 200ರ ಗಡಿ ದಾಟಲಿಲ್ಲ. ಅಂತಿಮವಾಗಿ ಭಾರತ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಇಂಗ್ಲೆಂಡ್ ಪರ ಕ್ರಿಸ್ ಜೋರ್ಡನ್ ಹಾಗೂ ಮೊಯೀನ್ ಅಲಿ ತಲಾ 2 ವಿಕೆಟ್ ಪಡೆದರು.
ದೊಡ್ಡ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಿಂದಲೇ ವೈಫಲ್ಯ ಅನುಭವಿಸಿತು. 50 ರನ್ಗು ಮೊದಲೇ 4 ಮುಖ್ಯ ವಿಕೆಟ್ ಕಳೆದುಕೊಂಡಿತು. ಹಾರ್ದಿಕ್ ಹಾಗೂ ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ಆರಂಭಿಕರ ಮೇಲೆ ದಾಳಿ ಮಾಡಿದರು. ನಾಯಕ ಜೋಸ್ ಬಟ್ಲರ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಸೊನ್ನೆ ಸುತ್ತಿದರೆ, ಜೇಸನ್ ರಾಯ್ 4 ಮತ್ತು ಡೇವಿಡ್ ಮಲನ್ 21 ರನ್ಗೆ ಔಟಾದರು. ಈ ಸಂದರ್ಭ ಜೊತೆಯಾದ ಹ್ಯಾರಿ ಬ್ರೂಕ್ (28) ಹಾಗೂ ಮೊಯೀನ್ ಅಲಿ (36) ಭರವಸೆ ಮೂಡಿಸಿದರೂ ಚಹಾಲ್ ಸ್ಪಿನ್ ಮೋಡಿಗೆ ಬಲಿಯಾಗಿ ಇಂಗ್ಲೆಂಡ್ ಸೋಲು ಖಚಿತವಾಯಿತು.
ಕೊನೆಯಲ್ಲಿ ಕ್ರಿಸ್ ಜೋರ್ಡನ್ ಅಜೇಯ 26 ರನ್ ಗಳಿಸಿದರೂ ಯಾವುದೆ ಪ್ರಯೋಜನ ಆಗಲಿಲ್ಲ. ಇಂಗ್ಲೆಂಡ್ 19.3 ಓವರ್‌ನಲ್ಲಿ 148 ರನ್ಗೆ ಆಲೌಟ್ ಆಯಿತು. ಭಾರತ ಪರ ಹಾರ್ದಿಕ್ 4 ವಿಕೆಟ್ ಕಿತ್ತರೆ, ಅರ್ಶ್ದೀಪ್ ಹಾಗೂ ಚಹಾಲ್ ತಲಾ 2 ಮತ್ತು ಭುವನೇಶ್ವರ್, ಹರ್ಷಲ್ ಪಟೇಲ್ 1 ವಿಕೆಟ್ ಪಡೆದರು. ದ್ವಿತೀಯ ಟಿ20 ಪಂದ್ಯ ಜುಲೈ 9 ರಂದು ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿದೆ.
ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನ; ಕೋಚ್ ದ್ರಾವಿಡ್‌ಗೆ ಹೆಚ್ಚಿದ ಆತಂಕ
Published On - 7:19 am, Fri, 8 July 22