ಒಳ್ಳೆ ಶಾಲಾ ಕ್ರಿಕೆಟಿಗನಂತೆ ಆಡ್ತಾನೆ..ಸುರೇಶ್ ರೈನಾ ಬ್ಯಾಟಿಂಗ್ ಬಗ್ಗೆ ಮಾಜಿ RCB ಆಟಗಾರ ಅಪಹಾಸ್ಯ

CSK: ತಂಡದ ಆಧಾರ ಸ್ತಂಭಗಳಾದ ಡು ಪ್ಲೆಸಿಸ್, ಮೊಯೀನ್ ಅಲಿ ಗೋಲ್ಡನ್ ಡಕ್​ನೊಂದಿಗೆ ಮರಳಿದರೆ, ಅಂಬಾಟಿ ರಾಯುಡು ಗಾಯದಿಂದಾಗಿ ನಿವೃತ್ತರಾದರು.

ಒಳ್ಳೆ ಶಾಲಾ ಕ್ರಿಕೆಟಿಗನಂತೆ ಆಡ್ತಾನೆ..ಸುರೇಶ್ ರೈನಾ ಬ್ಯಾಟಿಂಗ್ ಬಗ್ಗೆ ಮಾಜಿ RCB ಆಟಗಾರ ಅಪಹಾಸ್ಯ
Suresh Raina
Updated By: ಝಾಹಿರ್ ಯೂಸುಫ್

Updated on: Sep 23, 2021 | 5:59 PM

ಐಪಿಎಲ್ 2021 ರ ದ್ವಿತಿಯಾರ್ಧದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು (CSK-MI ) 20 ರನ್​ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಸಿಎಸ್​ಕೆ ಗೆಲುವು ದಾಖಲಿಸಿದರೂ ಬ್ಯಾಟಿಂಗ್​ನಲ್ಲಿ ರುತುರಾಜ್ ಗಾಯಕ್ವಾಡ್​ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್​ಮನ್​ಗಳು ಮುಗ್ಗರಿಸಿದ್ದರು. ತಂಡದ ಆಧಾರ ಸ್ತಂಭಗಳಾದ ಡು ಪ್ಲೆಸಿಸ್, ಮೊಯೀನ್ ಅಲಿ ಗೋಲ್ಡನ್ ಡಕ್​ನೊಂದಿಗೆ ಮರಳಿದರೆ, ಅಂಬಾಟಿ ರಾಯುಡು ಗಾಯದಿಂದಾಗಿ ನಿವೃತ್ತರಾದರು. ಇನ್ನು ಆಲ್​ರೌಂಡರ್ ಡ್ವೇನ್ ಬ್ರಾವೋ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದು ಸಿಎಸ್​ಕೆ ಪಾಲಿಗೆ ವರದಾನವಾಯಿತು. ಇನ್ನು ಅಜೇಯ ಇನಿಂಗ್ಸ್​ ಆಡಿದ ರುತುರಾಜ್ ಗಾಯಕ್ವಾಡ್ 88 ರನ್​ ಬಾರಿಸಿ ತಂಡದ ಮೊತ್ತವನ್ನು 156ಕ್ಕೆ ತಂದು ನಿಲ್ಲಿಸಿದ್ದರು. ಅತ್ತ ಮುಂಬೈ ಇಂಡಿಯನ್ಸ್​ 136 ರನ್​ಗಳಿಸಲಷ್ಟೇ ಶಕ್ತರಾದರು.

ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್​ ಬ್ಯಾಟ್ಸ್​ಮನ್​ಗಳ ಬ್ಯಾಟಿಂಗ್ ಪರಿಣಾಮಕಾರಿಯಾಗಿರಲಿಲ್ಲ. ಈ ಬಗ್ಗೆ ಮಾತನಾಡಿರುವ ಮಾಜಿ ಆರ್​ಸಿಬಿ ಆಟಗಾರ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಡೇಲ್ ಸ್ಟೇನ್, ಸಿಎಸ್​ಕೆ ಆಟಗಾರ ಸುರೇಶ್ ರೈನಾ ಅವರ ಬ್ಯಾಟಿಂಗ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಸುರೇಶ್ ರೈನಾ ಟ್ರೆಂಟ್ ಬೌಲ್ಟ್ ಬೌಲಿಂಗ್​ನಲ್ಲಿ ಔಟಾಗಿರುವ ರೀತಿ ನೋಡಿದ್ರೆ ಆತ ಅಂತಾರಾಷ್ಟ್ರೀಯ ಕ್ರಿಕೆಟಿಗ ಎನ್ನುವ ಬಗ್ಗೆ ಅನುಮಾನ ಮೂಡುತ್ತದೆ ಎಂದಿದ್ದಾರೆ ಸ್ಟೇನ್.

‘ರೈನಾ ಬೌನ್ಸರ್ ಆಡಲು ಬಯಸುತ್ತಿರಲಿಲ್ಲ. ಹೀಗಾಗಿಯೇ ನನಗೆ ರೈನಾ ಶಾಲಾ ಕ್ರಿಕೆಟಿಗನಂತೆ ಕಾಣುತ್ತಿದ್ದ. ನಿಜವಾಗಲೂ ನನಗೆ ಆತ ಅಂತಾರಾಷ್ಟ್ರೀಯ ಕ್ರಿಕೆಟಿಗ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ರೈನಾ ಔಟ್ ಆದ ರೀತಿ ನಿಜಕ್ಕೂ ಮುಜುಗರದ ಸಂಗತಿ. ಶಾಟ್ ಆಡುವಾಗ ಅವರ ಬ್ಯಾಟ್ ಕೂಡ ಮುರಿಯಿತು. ಆ ಚೆಂಡು ಸಿಕ್ಸರ್‌ಗೆ ಹೋಗಿದ್ದರೆ, ನಾನು ಇದನ್ನು ಹೇಳುತ್ತಿರಲಿಲ್ಲ. ಆದರೆ ಮುಂಬೈ ವಿರುದ್ದ ರೈನಾ ತುಂಬಾ ಕಳಪೆಯಾಗಿ ಬ್ಯಾಟ್ ಮಾಡಿದ್ದರು ಎಂದು ಡೇಲ್ ಸ್ಟೇನ್ ಅಭಿಪ್ರಾಯಪಟ್ಟಿದ್ದಾರೆ.

(“He Looked Like School Boy Cricketer” – Dale Steyn Slams Suresh Raina)