21 ವರ್ಷಗಳ ಬಳಿಕ ಪಾಕಿಸ್ತಾನ್ ತಂಡಕ್ಕೆ ಪ್ರಚಂಡ ಜಯ

ಶ್ರೀಲಂಕಾ, ಇಂಗ್ಲೆಂಡ್ ವಿರುದ್ಧದ ತ್ರಿಕೋನ ಸರಣಿಯ ಮೊದಲೆರಡು ಪಂದ್ಯಗಳಲ್ಲೂ ಪಾಕಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ಶ್ರೀಲಂಕಾ ವಿರುದ್ಧ 37 ರನ್​ಗಳ ಗೆಲುವು ದಾಖಲಿಸಿದ್ದ ಪಾಕ್ ಪಡೆ ಇದೀಗ ಬಲಿಷ್ಠ ಇಂಗ್ಲೆಂಡ್ ತಂಡವನ್ನು 87 ರನ್​ಗಳಿಂದ ಮಣಿಸಿದೆ. ಈ ಗೆಲುವುಗಳ ಮೂಲಕ ಪಾಕಿಸ್ತಾನ್ ತಂಡ ತ್ರಿಕೋನ ಸರಣಿಯ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

21 ವರ್ಷಗಳ ಬಳಿಕ ಪಾಕಿಸ್ತಾನ್ ತಂಡಕ್ಕೆ ಪ್ರಚಂಡ ಜಯ
Pakistan
Image Credit source: GettyImages

Updated on: Oct 21, 2026 | 9:56 AM

ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಪ್ರಚಂಡ ಜಯ ಸಾಧಿಸಿದೆ. ಅದು ಕೂಡ ಬರೋಬ್ಬರಿ 21 ವರ್ಷಗಳ ಬಳಿಕ. ಅಂದರೆ ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನದಲ್ಲಿ ಪಾಕ್ ಪಡೆ ಸೋಲಿಸುತ್ತಿರುವುದು 2 ದಶಕಗಳ ಬಳಿಕ. ಇದಕ್ಕೂ ಮುನ್ನ 2005 ರಲ್ಲಿ ಪಾಕ್​​ನಲ್ಲಿ ಆಂಗ್ಲರ ಪಡೆಯನ್ನು ಸೋಲಿಸುವಲ್ಲಿ ಪಾಕಿಸ್ತಾನ್ ತಂಡ ಯಶಸ್ವಿಯಾಗಿತ್ತು. ಇದಾದ ಬಳಿಕ ಪಾಕ್​ನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಿರಲಿಲ್ಲ.

ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಪ್ರಚಂಡ ಜಯ ಸಾಧಿಸಿದೆ. ಅದು ಕೂಡ ಬರೋಬ್ಬರಿ 21 ವರ್ಷಗಳ ಸುದೀರ್ಘ ಅವಧಿಯ ಬಳಿಕ! ಅಂದರೆ, ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನದ ನೆಲದಲ್ಲೇ ಪಾಕ್ ಪಡೆ ಸೋಲಿಸುತ್ತಿರುವುದು ಬರೋಬ್ಬರಿ ಎರಡು ದಶಕಗಳ ನಂತರ ಎಂಬುದು ವಿಶೇಷ. ಇದಕ್ಕೂ ಮುನ್ನ 2005 ರಲ್ಲಿ ತಾಯ್ನಾಡಿನಲ್ಲಿ ಆಂಗ್ಲರ ಪಡೆಯನ್ನು ಮಣಿಸುವಲ್ಲಿ ಪಾಕಿಸ್ತಾನ್ ತಂಡ ಯಶಸ್ವಿಯಾಗಿತ್ತು. ಅದಾದ ಬಳಿಕ ಪಾಕ್ ನೆಲದಲ್ಲಿ ಇವರಿಬ್ಬರ ನಡುವೆ ಯಾವುದೇ ಏಕದಿನ ಮುಖಾಮುಖಿ ನಡೆದಿರಲಿಲ್ಲ. ಇದೀಗ 21 ವರ್ಷಗಳ ನಡೆದ ಮುಖಾಮುಖಿಯಲ್ಲಿ ಪಾಕಿಸ್ತಾನ್ ತಂಡ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು.

ಹಸನ್, ಮಿನ್ಹಾಸ್ ಮಿಂಚಿಂಗ್:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕದ ದಾಂಡಿಗ ಫಖರ್ ಝಮಾನ್ ಶೂನ್ಯಕ್ಕೆ ಔಟಾದರೆ, ಸೈಮ್ ಅಯ್ಯೂಬ್ 8 ರನ್​​ಗೆ ಇನಿಂಗ್ಸ್ ಅಂತ್ಯಗೊಳಿಸಿದರು. ಆ ಬಳಿಕ ಬಂದ ಬಾಬರ್ ಆಝಂ ಕೇವಲ 34 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ಹಸನ್ ನವಾಝ್ 74 ಎಸೆತಗಳಲ್ಲಿ 79 ರನ್ ಬಾರಿಸಿದರೆ, ಅರಾಫತ್ ಮಿನ್ಹಾಸ್ 58 ಎಸೆತಗಳಲ್ಲಿ 59 ರನ್ ಸಿಡಿಸಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಪಾಕಿಸ್ತಾನ್ ತಂಡ 50 ಓವರ್​​ಗಳಲ್ಲಿ 9 ವಿಕೆಟ್ ಕಳೆದುಕೊಂಡು 302 ರನ್ ಕಲೆಹಾಕಿತು.

ಭದ್ರ ಬುನಾದಿಯಿಂದ ದಿಢೀರ್ ಕುಸಿತ:

303 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಓಪನರ್‌ಗಳಾದ ಟಾಮ್ ಬ್ಯಾಂಟನ್ (57) ಮತ್ತು ಬೆನ್ ಡಕೆಟ್ (45) ಮೊದಲ ವಿಕೆಟ್‌ಗೆ 91 ರನ್‌ಗಳ ಭರ್ಜರಿ ಜೊತೆಯಾಟ ನೀಡಿ ಭದ್ರ ಬುನಾದಿ ಹಾಕಿಕೊಟ್ಟರು. ಇಂಗ್ಲೆಂಡ್ ಸುಲಭವಾಗಿ ಗೆಲುವಿನತ್ತ ಮುನ್ನುಗ್ಗುತ್ತಿದೆ ಎನ್ನುವಷ್ಟರಲ್ಲಿ ಪಾಕ್ ಬೌಲರ್‌ಗಳು ಕಂಬ್ಯಾಕ್ ಮಾಡಿದರು. ಹ್ಯಾರಿಸ್ ರೌಫ್ ಮೊದಲ ವಿಕೆಟ್ ಉರುಳಿಸುತ್ತಿದ್ದಂತೆ ಇಂಗ್ಲೆಂಡ್ ಬ್ಯಾಟಿಂಗ್ ಲೈನ್‌ಅಪ್ ತರಗೆಲೆಯಂತೆ ಉದುರಿತು.

ಇದರ ನಡುವೆ ಅತ್ಯುತ್ತಮ ದಾಳಿ ಸಂಘಟಿಸಿದ ಅರಾಫತ್ ಮಿನ್ಹಾಸ್ ಕೇವಲ 40 ರನ್ ನೀಡಿ 6 ಪ್ರಮುಖ ವಿಕೆಟ್ ಕಿತ್ತು ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಪರಿಣಾಮವಾಗಿ ಇಂಗ್ಲೆಂಡ್ ತಂಡ 38.4 ಓವರ್‌ಗಳಲ್ಲಿ 215 ರನ್‌ಗಳಿಗೆ ಆಲೌಟ್ ಆಯಿತು. ವಿಶೇಷ ಎಂದರೆ ಇಂಗ್ಲೆಂಡ್ ತಂಡ ತನ್ನ ಕೊನೆಯ 5 ವಿಕೆಟ್‌ಗಳನ್ನು ಕೇವಲ 18 ರನ್‌ಗಳ ಅಂತರದಲ್ಲಿ ಕಳೆದುಕೊಂಡಿದ್ದು ಪಾಕ್ ಬೌಲಿಂಗ್ ತೀವ್ರತೆಗೆ ಸಾಕ್ಷಿಯಾಗಿತ್ತು.

  •  21 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ: 2005ರ ಬಳಿಕ ಪಾಕಿಸ್ತಾನದ ಮಣ್ಣಿನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ್ ತಂಡಕ್ಕೆ ಸಿಕ್ಕ ಮೊದಲ ಏಕದಿನ ಜಯ ಇದಾಗಿದೆ.
  • ಪಾಕ್ ನೆಲದಲ್ಲಿ 2ನೇ ಅತ್ಯುತ್ತಮ ಬೌಲಿಂಗ್: ಅರಾಫತ್ ಮಿನ್ಹಾಸ್ ಅವರ 6/40 ಸಾಧನೆಯು ಪಾಕಿಸ್ತಾನದ ನೆಲದಲ್ಲಿ ಪಾಕ್ ಬೌಲರ್ ಒಬ್ಬರು ದಾಖಲಿಸಿದ ಜಂಟಿ ಎರಡನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
  • ಅಪರೂಪದ ಸಾಧನೆ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಅರ್ಧಶತಕ ಹಾಗೂ 5 ಪ್ಲಸ್ ವಿಕೆಟ್ ಪಡೆದ ಪಾಕಿಸ್ತಾನದ ಕೇವಲ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಅರಾಫತ್ ಪಾತ್ರರಾದರು.

ಇನ್ನು ಈ ಪ್ರಚಂಡ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ತ್ರಿಕೋನ ಸರಣಿಯಲ್ಲಿ ಸತತ ಎರಡನೇ ವಿಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್ , ಸೈಮ್ ಅಯ್ಯೂಬ್, ಬಾಬರ್ ಆಝಂ , ಸಾದ್ ಬೇಗ್ (ವಿಕೆಟ್ ಕೀಪರ್) , ಸಲ್ಮಾನ್ ಅಘಾ , ಹಸನ್ ನವಾಝ್ , ಅರಾಫತ್ ಮಿನ್ಹಾಸ್ , ಫಹೀಮ್ ಅಶ್ರಫ್ , ಶಾಹೀನ್ ಅಫ್ರಿದಿ (ನಾಯಕ) , ನಸೀಮ್ ಶಾ , ಹಾರಿಸ್ ರೌಫ್.

ಇದನ್ನೂ ಓದಿ: ಭಾರತೀಯ ಪಿಚ್​ನಲ್ಲಿ ಹೊಸ ಇತಿಹಾಸ ಬರೆದ ಹರ್ಮನ್​ಪ್ರೀತ್ ಕೌರ್

ಇಂಗ್ಲೆಂಡ್ ಪ್ಲೇಯಿಂಗ್ 11: ಟಾಮ್ ಬ್ಯಾಂಟನ್ , ಬೆನ್ ಡಕೆಟ್ , ಜೋ ರೂಟ್ , ಹ್ಯಾರಿ ಬ್ರೂಕ್ (ನಾಯಕ) , ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್), ಸ್ಯಾಮ್ ಕರನ್ , ವಿಲ್ ಜ್ಯಾಕ್ಸ್ , ಜೇಮೀ ಓವರ್ಟನ್ , ಗಸ್ ಅಟ್ಕಿನ್ಸನ್ , ಆದಿಲ್ ರಶೀದ್ , ಸನ್ನಿ ಬೇಕರ್.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us