ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ
World Test Championship 2025-27: 2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಲು ಟೀಮ್ ಇಂಡಿಯಾಗೆ ಮುಂದಿನ 9 ಟೆಸ್ಟ್ ಪಂದ್ಯಗಳು ನಿರ್ಣಾಯಕ. ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳ ಮೂಲಕ ಭಾರತ ತಂಡವು ಹೇಗೆ ಫೈನಲ್ಗೆ ತಲುಪಬಹುದು ಎಂಬುದರ ಲೆಕ್ಕಾಚಾರ ಈ ಕೆಳಗಿನಂತಿದೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025-27ರ ಫೈನಲ್ ರೇಸ್ ಅತ್ಯಂತ ರೋಚಕ ಘಟ್ಟಕ್ಕೆ ತಲುಪಿದೆ. ಸತತ ಎರಡು ಬಾರಿ ಫೈನಲ್ ಪ್ರವೇಶಿಸಿದ್ದ ಟೀಮ್ ಇಂಡಿಯಾ, ಈ ಬಾರಿ ಲಾರ್ಡ್ಸ್ ಮೈದಾನಕ್ಕೆ ಲಗ್ಗೆ ಇಡಬೇಕಾದರೆ ಅಸಾಧ್ಯವೆನಿಸುವ ಹಾದಿಯನ್ನು ಕ್ರಮಿಸಬೇಕಿದೆ. ಸದ್ಯದ ಅಂಕಪಟ್ಟಿಯಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಶುಭ್ಮನ್ ಗಿಲ್ ಪಡೆಗೆ ಮುಂದಿನ ಪ್ರತಿಯೊಂದು ಪಂದ್ಯವೂ ‘ಮಾಡೋ ಇಲ್ಲವೇ ಮಡಿ’ ಎಂಬಂತಾಗಿದೆ. ಹಾಗಾದರೆ ಭಾರತ ತಂಡ ಫೈನಲ್ ತಲುಪಲು ಇರುವ ಲೆಕ್ಕಾಚಾರಗಳೇನು? ಮುಂದಿರುವ ಕಠಿಣ ಸವಾಲುಗಳೇನು? ಎಂಬುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.
ಪ್ರಸ್ತುತ ಸ್ಥಿತಿ ಮತ್ತು ಮುಂದಿನ ಸವಾಲುಗಳು:
ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಒಟ್ಟು 18 ಪಂದ್ಯಗಳನ್ನು ಆಡಬೇಕಾಗಿದ್ದು, ಅದರಲ್ಲಿ ಈಗಾಗಲೇ 9 ಪಂದ್ಯಗಳನ್ನು ಮುಗಿಸಿದೆ. ಉಳಿದಿರುವ 9 ಪಂದ್ಯಗಳು ಭಾರತದ ಭವಿಷ್ಯವನ್ನು ನಿರ್ಧರಿಸಲಿವೆ.
- ಶ್ರೀಲಂಕಾ ಪ್ರವಾಸ (ವಿದೇಶಿ ಸರಣಿ): 2 ಟೆಸ್ಟ್ ಪಂದ್ಯಗಳು.
- ನ್ಯೂಝಿಲೆಂಡ್ ಪ್ರವಾಸ (ವಿದೇಶಿ ಸರಣಿ): 2 ಟೆಸ್ಟ್ ಪಂದ್ಯಗಳು.
- ಆಸ್ಟ್ರೇಲಿಯಾ ವಿರುದ್ಧ (ತವರಿನ ಸರಣಿ): 5 ಟೆಸ್ಟ್ ಪಂದ್ಯಗಳು.
ಟೀಮ್ ಇಂಡಿಯಾ ಲೆಕ್ಕಾಚಾರ:
WTC ನಿಯಮಾವಳಿಗಳ ಪ್ರಕಾರ ಫೈನಲ್ ತಲುಪಲು ತಂಡಗಳು ಕನಿಷ್ಠ ಶೇಕಡಾ 60 ರಿಂದ 65 ರಷ್ಟು ಶೇಕಡಾವಾರು ಅಂಕಗಳನ್ನು (PCT) ಹೊಂದಿರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಮುಖ್ಯವಾಗಿ ಎರಡು ಆಯ್ಕೆಗಳಿವೆ:
- ಆಯ್ಕೆ 1: ಉಳಿದಿರುವ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ 68.52 ಶೇಕಡಾವಾರು ಅಂಕಗಳನ್ನು ಪಡೆಯುವುದು.
- ಆಯ್ಕೆ 2: 6 ಗೆಲುವು ಮತ್ತು 2 ಡ್ರಾ ಸಾಧಿಸಿ 62.96 ಶೇಕಡಾವಾರು ಅಂಕಗಳನ್ನು ಪಡೆಯುವುದು.
ಟೀಮ್ ಇಂಡಿಯಾ ಮುಮದಿನ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದರೆ ಫೈನಲ್ಗೇರುವುದು ಖಚಿತ. ಒಂದು ವೇಳೆ 7 ಅಥವಾ 6 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ. ಇದಕ್ಕಾಗಿ ಟೀಮ್ ಇಂಡಿಯಾ ಏನು ಮಾಡಬೇಕೆಂಬುದರ ವಿಶ್ಲೇಷಣೆ ಈ ಕೆಳಗಿನಂತಿದೆ..
ಕ್ಲೀನ್ ಸ್ವೀಪ್ ಪ್ಲ್ಯಾನ್:
ಆಗಸ್ಟ್ 2026 ರಲ್ಲಿ ನಡೆಯಲಿರುವ ಶ್ರೀಲಂಕಾ ಪ್ರವಾಸ ಮತ್ತು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ನ್ಯೂಝಿಲೆಂಡ್ ಪ್ರವಾಸದಲ್ಲಿ ಭಾರತ ಎಲ್ಲಾ 4 ಪಂದ್ಯಗಳನ್ನು ಗೆಲ್ಲಲೇಬೇಕು. ನ್ಯೂಝಿಲೆಂಡ್ ಮಣ್ಣಿನಲ್ಲಿ ಭಾರತದ ಹಿಂದಿನ ದಾಖಲೆ ಕಳಪೆಯಾಗಿದ್ದರೂ, ಈ ಬಾರಿ ಅಲ್ಲಿ ಗೆಲುವು ಅನಿವಾರ್ಯವಾಗಿದೆ. ಇಲ್ಲಿ ಶ್ರೀಲಂಕಾ ಹಾಗೂ ನ್ಯೂಝಿಲೆಂಡ್ ವಿರುದ್ಧ ತಲಾ 2 ಗೆಲುವು ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೇಲೇರಬಹುದು.
ಆಸ್ಟ್ರೇಲಿಯಾ ವಿರುದ್ಧ ಪ್ರಾಬಲ್ಯ:
ನ್ಯೂಝಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡರೆ, ಭಾರತದ ಪಾಲಿಗೆ ಆಸ್ಟ್ರೇಲಿಯಾ ಸರಣಿ ನಿರ್ಣಾಯಕವಾಗಲಿದೆ. ಆದರೆ ಈ ಸರಣಿಯು ಭಾರತದಲ್ಲಿ ನಡೆಯಲಿರುವುದು ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್.
ಈ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 4 ಮ್ಯಾಚ್ ಗೆದ್ದರೆ ಫೈನಲ್ ಆಡುವುದು ಖಚಿತವಾಗಲಿದೆ. ಒಂದು ವೇಳೆ 3 ಪಂದ್ಯಗಳಲ್ಲಿ ಗೆದ್ದು ಒಂದರಲ್ಲಿ ಡ್ರಾ ಸಾಧಿಸಿದರೂ ಫೈನಲ್ಗೇರಲು ಅವಕಾಶ ಸೃಷ್ಟಿಯಾಗಲಿದೆ.
ಟೀಮ್ ಇಂಡಿಯಾ ಸೋತರೆ?
ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಬೇಕಿದ್ದರೆ ಸೋಲಿನಿಂದ ದೂರವೇ ಉಳಿಯಬೇಕು. ಒಂದು ವೇಳೆ ಮುಂದಿನ ಸರಣಿಗಳಲ್ಲಿ ಭಾರತ ತಂಡವು ಒಂದೆರಡು ಪಂದ್ಯಗಳಲ್ಲಿ ಸೋತರೆ WTC ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಸೋಲುವುದನ್ನು ಎದುರು ನೋಡಬೇಕು. ಆಗ ಮಾತ್ರ ಭಾರತಕ್ಕೆ ಫೈನಲ್ ರೇಸ್‌ನಲ್ಲಿ ಮುಂದುವರಿಯಲು ಅವಕಾಶ ಸಿಗಲಿದೆ.
ಇದನ್ನೂ ಓದಿ: IPL ‘ತಿಂಗಳ’ ಬದಲಾವಣೆಗೆ ಭರ್ಜರಿ ಪ್ಲ್ಯಾನ್
ಹೀಗಾಗಿಯೇ ಟೀಮ್ ಇಂಡಿಯಾ ಪಾಲಿಗೆ ಮುಂಬರುವ 9 ಟೆಸ್ಟ್ ಪಂದ್ಯಗಳು ನಿರ್ಣಾಯಕ. ಈ ನಿರ್ಣಾಯಕ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಲಿದೆಯಾ ಕಾದು ನೋಡಬೇಕಿದೆ.
Published On - 9:53 am, Thu, 11 June 26




