
T20 World Cup 2026: ಟಿ20 ವಿಶ್ವಕಪ್ನ 45ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಸೋಲನುಭವಿಸಿದೆ. ಶ್ರೀಲಂಕಾದ ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 164 ರನ್ ಕಲೆಹಾಕಿದ್ದರು.
165 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 19.1 ಓವರ್ಗಳಲ್ಲಿ 166 ರನ್ ಬಾರಿಸಿ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಇತ್ತ ಸೋತಿರುವ ಪಾಕಿಸ್ತಾನ್ ತಂಡ ಇನ್ನೂ ಸಹ ಟೂರ್ನಿಯಿಂದ ಹೊರಬಿದ್ದಿಲ್ಲ. ಬದಲಾಗಿ ಮುಂದಿನ ಪಂದ್ಯಗಳ ಮೂಲಕ ಸೆಮಿಫೈನಲ್ಗೇರಬಹುದು. ಆದರೆ ಇಂತಹದೊಂದು ಅವಕಾಶ ಸೃಷ್ಟಿಯಾಗಲು ಉಳಿದ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಿದೆ.
ಅಂದರೆ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶಿಸಿರುವ ಇಂಗ್ಲೆಂಡ್ ತಂಡದ ಮುಂದಿನ ಗೆಲುವು ಪಾಕ್ ತಂಡದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಗೆಲ್ಲುವುದನ್ನು ಪಾಕಿಸ್ತಾನ್ ಎದುರು ನೋಡಬೇಕು.
ಇದನ್ನೂ ಓದಿ: ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಬಾಬರ್ ಆಝಂ
ಇನ್ನು ನ್ಯೂಝಿಲೆಂಡ್ ವಿರುದ್ಧ ಶ್ರೀಲಂಕಾ ಗೆದ್ದರೆ ಪಾಕಿಸ್ತಾನ್ ತಂಡದ ಹಾದಿ ಸುಗಮವಾಗಲಿದೆ. ಏಕೆಂದರೆ ಈ ಗೆಲುವಿನೊಂದಿಗೆ ಲಂಕಾ ಪಡೆ ಪಡೆಯಲಿರುವುದು ಕೇವಲ 2 ಪಾಯಿಂಟ್ಸ್ ಮಾತ್ರ. ಅಲ್ಲದೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಗೆದ್ದರೆ ಒಟ್ಟು ಪಾಯಿಂಟ್ಸ್ 3 ಆಗಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದು.