
ಗುರುವಾರ ದುಬೈನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದ ನೇರ ಪ್ರಸಾರದ ಸಂದರ್ಭದಲ್ಲಿ ತೋರಿಸಲಾದ ಟೂರ್ನಮೆಂಟ್ ಲೋಗೋದಲ್ಲಿ ದೇಶದ ಹೆಸರು ಇಲ್ಲದಿರುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಐಸಿಸಿ ಬಳಿ ವಿವರಣೆ ಕೇಳಿದೆ. ವಾಸ್ತವವಾಗಿ ಪಂದ್ಯ ಮುಗಿದ ಬಳಿಕವೇ ಐಸಿಸಿ ಈ ಲೋಪದ ಬಗ್ಗೆ ವಿವರಣೆ ನೀಡಿತ್ತು. ಆದಾಗ್ಯೂ ತನ್ನ ಬೆಳೆ ಬೇಯಿಸಿಕೊಳ್ಳುವುದನ್ನು ಮುಂದುವರೆಸಿರುವ ಪಿಸಿಬಿ, ಐಸಿಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಮೂಲಗಳ ಪ್ರಕಾರ, ಈಗಾಗಲೇ ಐಸಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ದುಬೈನಲ್ಲಿ ನಡೆಯುವ ಎಲ್ಲಾ ಪಂದ್ಯಗಳಲ್ಲಿ ಪಾಕಿಸ್ತಾನದ ಹೆಸರಿರುವ ಲೋಗೋವನ್ನು ಬಳಸುವುದಾಗಿ ಭರವಸೆ ನೀಡಿದೆ.
ಭಾರತ-ಬಾಂಗ್ಲಾದೇಶ ಪಂದ್ಯದಲ್ಲಿ ಚಾಂಪಿಯನ್ಸ್ ಟ್ರೋಫಿ ಲೋಗೋ ಜೊತೆಗೆ ಪಾಕಿಸ್ತಾನದ ಹೆಸರು ಕಾಣಿಸದಿರುವ ಬಗ್ಗೆ ಐಸಿಸಿ ನೀಡಿದ ಸ್ಪಷ್ಟನೆಯಲ್ಲಿ, ತಾಂತ್ರಿಕ ದೋಷದಿಂದ ಈ ಲೋಪ ಉಂಟಾಗಿದೆ. ಭಾರತ-ಬಾಂಗ್ಲಾದೇಶ ಪಂದ್ಯದ ವೇಳೆ ಗ್ರಾಫಿಕ್ಸ್ ಸಂಬಂಧಿತ ಸಮಸ್ಯೆಯಿಂದಾಗಿ ಪಾಕಿಸ್ತಾನದ ಹೆಸರನ್ನು ಲೋಗೋದೊಂದಿಗೆ ಹಾಕಲು ಸಾಧ್ಯವಾಗಿರಲಿಲ್ಲ. ಆದರೆ ದುಬೈನಲ್ಲಿ ನಡೆಯುವ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಪಾಕಿಸ್ತಾನದ ಹೆಸರು ಲೋಗೋದಲ್ಲಿ ಗೋಚರಿಸುತ್ತದೆ ಎಂದು ಐಸಿಸಿ ವಕ್ತಾರರು ಭರವಸೆ ನೀಡಿದ್ದರು.
ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನ ನಡುವೆ ವಿವಾದ ಉಂಟಾಗಿರುವುದು ಇದೇ ಮೊದಲಲ್ಲ. ಟೂರ್ನಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಸರ್ಕಾರ ಅನುಮತಿ ನೀಡಲಿಲ್ಲ. ಹೀಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿರುವುದನ್ನೇ ಗಾಳವನ್ನಾಗಿ ಮಾಡಿಕೊಂಡಿದ್ದ ಪಿಸಿಬಿ, ಐಸಿಸಿ ಬಳಿ ತಾನು ಕೂಡ ಕೆಲವು ಷರತ್ತುಗಳನ್ನು ಮುಂದಿರಿಸಿತ್ತು.
ಐಸಿಸಿ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿತ್ತು. ಆ ಬಳಿಕ ಟೀಂ ಇಂಡಿಯಾ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರನ್ನು ಮುದ್ರಿಸುತ್ತಿಲ್ಲ ಎಂಬುದನ್ನೇ ಪಾಕ್ ಮೀಡಿಯಾಗಳು ದೊಡ್ಡ ವಿವಾದವನ್ನಾಗಿಸಿದ್ದವು. ಆದರೆ ಇದಕ್ಕೆ ತಕ್ಕ ತಿರುಗೇಟು ನೀಡಿದ್ದ ಬಿಸಿಸಿಐ, ನಾವು ಐಸಿಸಿ ನಿಯಮಗಳಿಗೆ ಬದ್ಧರಾಗಿದ್ದೇವೆ ಎಂದಿತ್ತು. ಇದೀಗ ಲೋಗೋದಲ್ಲಿ ಹೆಸರಿಲ್ಲದ್ದಿರುವುದಕ್ಕೆ ಐಸಿಸಿ ಸ್ಪಷ್ಟನೆ ನೀಡಿದರೂ ಪಿಸಿಬಿಗೆ ಮಾತ್ರ ಸಮಾಧಾನವಾದಂತೆ ಕಾಣುತ್ತಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Sat, 22 February 25