ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಅನಾರೋಗ್ಯಕ್ಕೆ ತುತ್ತಾದ ಟೀಂ ಇಂಡಿಯಾದ ಸ್ಟಾರ್ ಆಟಗಾರ
IND vs PAK: ಭಾರತ ಮತ್ತು ಪಾಕಿಸ್ತಾನ ನಡುವಿನ ಫೆಬ್ರವರಿ 23ರ ದುಬೈ ಕ್ರಿಕೆಟ್ ಪಂದ್ಯಕ್ಕೆ ಮುನ್ನ, ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ವೈರಲ್ ಜ್ವರದಿಂದ ಬಳಲುತ್ತಿರುವ ಪಂತ್ ಅಭ್ಯಾಸದಿಂದ ದೂರ ಉಳಿದಿದ್ದಾರೆ. ಆದರೂ, ಅವರ ಅನುಪಸ್ಥಿತಿಯು ಆಡುವ ಬಳಗದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಶುಭ್ಮನ್ ಗಿಲ್ ತಿಳಿಸಿದ್ದಾರೆ.

ಫೆಬ್ರವರಿ 23 ರ ಭಾನುವಾರದಂದು ದುಬೈನಲ್ಲಿ ಅತಿದೊಡ್ಡ ಕ್ರಿಕೆಟ್ ಪಂದ್ಯ ನಡೆಯಲಿದೆ. 2025 ರ ಚಾಂಪಿಯನ್ಸ್ ಟ್ರೋಫಿಯ ಗುಂಪು ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ಭರ್ಜರಿ ತಯಾರಿ ನಡೆಸುತ್ತಿರುವಾಗಲೇ ಟೀಂ ಇಂಡಿಯಾ ಪಾಳಯದಿಂದ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದೆ. ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಪಂದ್ಯಕ್ಕೂ ಒಂದು ದಿನ ಮೊದಲು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.
ಮಾಹಿತಿ ನೀಡಿದ ಗಿಲ್
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ದೊಡ್ಡ ಪಂದ್ಯಕ್ಕೆ ಕೇವಲ ಒಂದು ದಿನ ಮೊದಲು ಟೀಂ ಇಂಡಿಯಾದ ಉಪನಾಯಕ ಶುಭ್ಮನ್ ಗಿಲ್, ಪಂತ್ ಬಗ್ಗೆ ಈ ಮಾಹಿತಿಯನ್ನು ನೀಡಿದರು. ಫೆಬ್ರವರಿ 22 ರ ಶನಿವಾರ ಟೀಂ ಇಂಡಿಯಾ ಅಭ್ಯಾಸ ಅವಧಿಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಿಲ್, ಪಂತ್ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಅವರು ಈ ಅಭ್ಯಾಸದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಪಂತ್ ವೈರಲ್ ಜ್ವರದಿಂದ ಬಳಲುತ್ತಿದ್ದಾರೆ, ಆದ್ದರಿಂದ ಈ ಅಭ್ಯಾಸ ಅವಧಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಗಿಲ್ ಮಾಹಿತಿ ನೀಡಿದ್ದಾರೆ.
ಭಾನುವಾರದ ಪಂದ್ಯಕ್ಕೂ ಮುನ್ನ ಪಂತ್ ಫಿಟ್ ಆಗುತ್ತಾರೋ ಇಲ್ಲವೋ ಎಂಬುದರ ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ. ಆದಾಗ್ಯೂ, ಪಂತ್ ಅನುಪಸ್ಥಿತಿಯು ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಪಂತ್ಗೆ ಈ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತಿರಲಿಲ್ಲ. ಈ ಟೂರ್ನಿಗೆ ಟೀಂ ಇಂಡಿಯಾ ಕೆಎಲ್ ರಾಹುಲ್ ಅವರನ್ನು ಮೊದಲ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಿಕೊಂಡಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಅವರು ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಪಂತ್ ಬೇಗ ಗುಣಮುಖರಾಗಲಿ
ಇದರ ಹೊರತಾಗಿಯೂ, ಪಂತ್ ಅನಾರೋಗ್ಯಕ್ಕೆ ಒಳಗಾಗುವುದು ಟೀಂ ಇಂಡಿಯಾಕ್ಕೆ ಕಳವಳಕಾರಿ ವಿಷಯವಾಗಿದೆ. ಏಕೆಂದರೆ ಪಂದ್ಯದ ಮೊದಲು ಅಥವಾ ಪಂದ್ಯದ ಸಮಯದಲ್ಲಿ ರಾಹುಲ್‌ಗೆ ಏನಾದರೂ ಸಂಭವಿಸಿ ಪಂತ್ ಕೂಡ ಫಿಟ್ ಆಗಿಲ್ಲದಿದ್ದರೆ, ಟೀಂ ಇಂಡಿಯಾ ವಿಕೆಟ್ ಕೀಪರ್ ಆಯ್ಕೆ ಮಾಡುವ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇವರಿಬ್ಬರನ್ನು ಹೊರತುಪಡಿಸಿ, ಭಾರತೀಯ ತಂಡದಲ್ಲಿ ಮೂರನೇ ಪ್ರಮುಖ ವಿಕೆಟ್ ಕೀಪರ್ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ, ರಾಹುಲ್ ಸಂಪೂರ್ಣ ಫಿಟ್ ಆಗಿರುವುದು ಮಾತ್ರವಲ್ಲದೆ, ಪಂತ್ ಕೂಡ ಜ್ವರದಿಂದ ಆದಷ್ಟು ಬೇಗ ಚೇತರಿಸಿಕೊಳ್ಳಬೇಕೆಂದು ಭಾರತ ತಂಡ ಆಶಿಸುತ್ತದೆ.
ಭಾರತ- ಪಾಕ್ ಮುಖಾಮುಖಿ
ಪಂದ್ಯದ ಬಗ್ಗೆ ಹೇಳುವುದಾದರೆ, 2023 ರ ವಿಶ್ವಕಪ್ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಏಕದಿನ ಕ್ರಿಕೆಟ್ ಮುಖಾಮುಖಿ ಇದಾಗಿದ್ದು, 2018 ರ ಏಷ್ಯಾಕಪ್ ನಂತರ ಉಭಯ ತಂಡಗಳು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಸ್ವರೂಪದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನಲ್ಲಿ ಎರಡು ಪಂದ್ಯಗಳು ನಡೆದಿದ್ದವು. ಟೀಂ ಇಂಡಿಯಾ ಆ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಟೀಂ ಇಂಡಿಯಾ ಹ್ಯಾಟ್ರಿಕ್ ಜಯ ದಾಖಲಿಸಲು ಪ್ರಯತ್ನಿಸಿದರೆ, ಇತ್ತ ಪಾಕಿಸ್ತಾನ ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲುವ ಮೂಲಕ ಸೆಮಿಫೈನಲ್ ತಲುಪುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಪ್ರಯತ್ನಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:46 pm, Sat, 22 February 25
