
ಅಂತರರಾಷ್ಟ್ರೀಯ ಕ್ರಿಕೆಟ್ಗೆ ಇನ್ನಷ್ಟು ರಂಗು ತರಲು ಐಸಿಸಿ (ICC), ಹೊಸ ಆಟದ ನಿಯಮಗಳನ್ನು ಪರಿಚಯಿಸಲು ನಿರ್ಧರಿಸಿದೆ. ಈ ನಿಯಮಗಳು ಜೂನ್ 2025 ರಿಂದ ಜಾರಿಗೆ ಬರಲಿವೆ. ಬಿಳಿ ಚೆಂಡು (ಟಿ20 ಮತ್ತು ಏಕದಿನ) ಮತ್ತು ಕೆಂಪು ಚೆಂಡಿನ (ಟೆಸ್ಟ್) ಕ್ರಿಕೆಟ್‌ನಲ್ಲಿ ಹಲವು ನಿಯಮಗಳು ಬದಲಾಗಲಿವೆ, ಇದರಿಂದಾಗಿ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳ ನಡುವೆ ಸಮಾನ ಸ್ಪರ್ಧೆ ಕಂಡುಬರುತ್ತದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಏಕದಿನ ಪಂದ್ಯಗಳಲ್ಲಿ ಹಳೆಯ ಚೆಂಡು, ಕನ್ಕ್ಯುಶನ್ ಬದಲಿ, ಡಿಆರ್‌ಎಸ್ ಮತ್ತು ಬೌಂಡರಿ ಲೈನ್‌ನಲ್ಲಿ ತೆಗೆದುಕೊಳ್ಳುವ ಕ್ಯಾಚ್‌ಗಳ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ.
ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳ ನಡುವೆ ಸಮತೋಲನವನ್ನು ಸೃಷ್ಟಿಸುವುದು ಐಸಿಸಿಯ ಪ್ರಮುಖ ಉದ್ದೇಶವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಸೀಮಿತ ಓವರ್‌ಗಳ ಸ್ವರೂಪದಲ್ಲಿ, ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಸಾಧಿಸಿದ್ದಾರೆ, ಇದು ಬೌಲರ್‌ಗಳನ್ನು ಹಿನ್ನಡೆಗೆ ತಳ್ಳುತ್ತಿದೆ. ಹೀಗಾಗಿ ಏಕದಿನ ಕ್ರಿಕೆಟ್‌ನಲ್ಲಿ ಜಾರಿಯಲ್ಲಿರುವ ಎರಡು ಚೆಂಡುಗಳ ಬಳಕೆಯ ನಿಯಮವನ್ನು ತೆಗೆದುಹಾಕುವ ಯೋಜನೆ ಇದೆ. ಈ ನಿಯಮದಡಿಯಲ್ಲಿ, ಎರಡೂ ತುದಿಗಳಿಂದ ಎರಡು ಹೊಸ ಚೆಂಡುಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ಬೌಲರ್‌ಗಳಿಗೆ ಸ್ವಿಂಗ್ ಮತ್ತು ಸೀಮ್ ಮಾಡಲು ಕಷ್ಟ ಕರವಾಗುತ್ತಿತ್ತು. ಆದರೆ ಜೂನ್ 2025 ರಿಂದ ಜಾರಿಗೆ ಬರಲಿರುವ ಹೊಸ ನಿಯಮಗಳ ಪ್ರಕಾರ, ಈಗ ಏಕದಿನ ಮಾದರಿಯಲ್ಲಿ 34 ಓವರ್‌ಗಳವರೆಗೆ ಮಾತ್ರ ಎರಡು ಚೆಂಡುಗಳನ್ನು ಬಳಸಲಾಗುವುದು. ಇದರ ನಂತರ, 35 ರಿಂದ 50 ಓವರ್‌ಗಳವರೆಗೆ ಕೇವಲ 1 ಚೆಂಡನ್ನು ಮಾತ್ರ ಬಳಸಲಾಗುತ್ತದೆ.
ಫೀಲ್ಡಿಂಗ್ ತಂಡವು 35 ರಿಂದ 50 ಓವರ್‌ಗಳಿಗೆ ಬಳಸಬೇಕಾದ ಎರಡು ಚೆಂಡುಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ. ಆಯ್ಕೆ ಮಾಡಿದ ಚೆಂಡನ್ನು ಪಂದ್ಯದ ಉಳಿದ ಭಾಗಕ್ಕೆ ಎರಡೂ ತುದಿಗಳಲ್ಲಿಯೂ ಬಳಸಲಾಗುತ್ತದೆ. ಅದೇ ಸಮಯದಲ್ಲಿ, ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಯಾವುದೇ ಏಕದಿನ ಪಂದ್ಯವನ್ನು 25 ಓವರ್‌ಗಳಿಗಿಂತ ಕಡಿಮೆ ಆಡಿದರೆ, ಎರಡೂ ಇನ್ನಿಂಗ್ಸ್‌ಗಳಲ್ಲಿ ಒಂದೇ ಚೆಂಡನ್ನು ಬಳಸಲಾಗುತ್ತದೆ. ಜುಲೈ 2 ರಿಂದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿರುವ ಏಕದಿನ ಸರಣಿಯಿಂದ ಈ ಹೊಸ ಏಕದಿನ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
IND vs PAK: ಸಂಪ್ರದಾಯಕ್ಕೆ ಬ್ರೇಕ್; ಇನ್ಮುಂದೆ ಐಸಿಸಿ ಈವೆಂಟ್ನಲ್ಲೂ ಭಾರತ- ಪಾಕ್ ದೂರ ದೂರ..!
ಕನ್ಕ್ಯುಶನ್ ಬದಲಿ ನಿಯಮದ ಬಗ್ಗೆಯೂ ಸಾಕಷ್ಟು ಗೊಂದಲಗಳಿವೆ. ಹೀಗಾಗಿ ಈ ನಿಯಮದಲ್ಲೂ ಬದಲಾವಣೆ ತರಲಾಗುತ್ತಿದ್ದು, ಈಗ ತಂಡಗಳು ಪಂದ್ಯ ಆರಂಭವಾಗುವ ಮೊದಲು ಐದು ಕನ್ಕ್ಯುಶನ್ ಬದಲಿ ಆಟಗಾರರ ಹೆಸರುಗಳನ್ನು ಮ್ಯಾಚ್ ರೆಫರಿಗೆ ತಿಳಿಸಬೇಕಾಗುತ್ತದೆ. ಈ 5 ಆಟಗಾರರಲ್ಲಿ ಒಬ್ಬರು ವಿಕೆಟ್ ಕೀಪರ್, ಒಬ್ಬ ಬ್ಯಾಟ್ಸ್‌ಮನ್, ಒಬ್ಬ ವೇಗದ ಬೌಲರ್, ಒಬ್ಬ ಸ್ಪಿನ್ನರ್ ಮತ್ತು ಒಬ್ಬ ಆಲ್‌ರೌಂಡರ್ ಇರಲಿದ್ದಾರೆ. ಮತ್ತೊಂದೆಡೆ, ಬೌಂಡರಿ ಲೈನ್ ಕ್ಯಾಚ್ ಮತ್ತು ಡಿಆರ್‌ಎಸ್ ಪ್ರೋಟೋಕಾಲ್ ನಿಯಮಗಳಲ್ಲಿನ ಬದಲಾವಣೆಗಳ ಬಗ್ಗೆ ಐಸಿಸಿ ಶೀಘ್ರದಲ್ಲೇ ಎಲ್ಲಾ ತಂಡಗಳಿಗೆ ತಿಳಿಸಲಿದೆ. ಆದಾಗ್ಯೂ, ಟೆಸ್ಟ್‌ನಲ್ಲಿನ ಹೊಸ ನಿಯಮಗಳನ್ನು 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಂತರ ಜಾರಿಗೆ ತರಲಾಗುವುದು ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ