ಟಾಮ್ ಹೈನ್ಸ್ ಭರ್ಜರಿ ಶತಕ: ಭಾರತ ಎ ತಂಡಕ್ಕೆ ಇಂಗ್ಲೆಂಡ್ ಲಯನ್ಸ್ ದಿಟ್ಟ ಉತ್ತರ
England Lions vs India A: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ನಡುವಣ ಟೆಸ್ಟ್ ಪಂದ್ಯವು ಮೂರನೇ ದಿನದಾಟಕ್ಕೆ ಕಾಲಿಟ್ಟಿದೆ. ಮೊದಲ ದಿನದಾಟದಲ್ಲಿ ಭಾರತೀಯ ಬ್ಯಾಟರ್ಗಳು ಭರ್ಜರಿ ಪ್ರದರ್ಶನ ನೀಡಿದರೆ, ದ್ವಿತೀಯ ದಿನದಾಟದಲ್ಲಿ ಇಂಗ್ಲೆಂಡ್ ಬ್ಯಾಟರ್ಗಳಿಂದ ದಿಟ್ಟ ಉತ್ತರ ಮೂಡಿಬಂದಿದೆ.

ಕ್ಯಾಂಟರ್ಬರ್ರಿಯಲ್ಲಿನ ಸೆಂಟ್ ಲಾರೆನ್ಸ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಭಾರತ ಎ (India A) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ಲಯನ್ಸ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ಪರ ಕರುಣ್ ನಾಯರ್ ದ್ವಿಶತಕ ಸಿಡಿಸಿ ಅಬ್ಬರಿಸಿದ್ದರು.
ಇದಕ್ಕೂ ಮುನ್ನ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ (24) ಹಾಗೂ ಅಭಿಮನ್ಯು ಈಶ್ವರನ್ (8) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ಕರುಣ್ ನಾಯರ್ ಹಾಗೂ ಸರ್ಫರಾಝ್ ಖಾನ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. 119 ಎಸೆತಗಳನ್ನು ಎದುರಿಸಿದ ಸರ್ಫರಾಝ್ 13 ಫೋರ್ಗಳೊಂದಿಗೆ 92 ರನ್ ಬಾರಿಸಿ ಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತ ಕರುಣ್ ನಾಯರ್ 281 ಎಸೆತಗಳಲ್ಲಿ 26 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 204 ರನ್ ಬಾರಿಸಿ ಮಿಂಚಿದರು. ಆ ಬಳಿಕ ಬಂದ ಧ್ರುವ್ ಜುರೇಲ್ 94 ರನ್ ಬಾರಿಸಿ ಗಮನ ಸೆಳೆದರು. ಈ ಮೂಲಕ ಭಾರತ ಎ ತಂಡವು ಮೊದಲ ಇನಿಂಗ್ಸ್ನಲ್ಲಿ 557 ರನ್ ಕಲೆಹಾಕಿ ಆಲೌಟ್ ಆಗಿದೆ.
ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಲಯನ್ಸ್ ತಂಡಕ್ಕೆ ಟಾಮ್ ಹೈನ್ಸ್ ಉತ್ತಮ ಆರಂಭ ಒದಗಿಸಿದ್ದಾರೆ. ಆರಂಭದಿಂದಲೇ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಹೈನ್ಸ್ 147 ಎಸೆತಗಳಲ್ಲಿ 11 ಫೋರ್ಗಳೊಂದಿಗೆ ಅಜೇಯ ಶತಕ ಸಿಡಿಸಿದ್ದಾರೆ. ಆದರೆ ಮತ್ತೋರ್ವ ಆರಂಭಿಕ ಬೆನ್ ಮೆಕ್ಕೆನ್ನಿ ಕೇವಲ 16 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಮಿಲೊ ಗೇ 46 ರನ್ಗಳ ಕೊಡುಗೆ ನೀಡಿದರು. ಆ ಬಳಿಕ ಬಂದ ಮ್ಯಾಕ್ಸ್ ಹೋಲ್ಡನ್ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದರು. ಪರಿಣಾಮ ಹೋಲ್ಡನ್ ಬ್ಯಾಟ್ನಿಂದ 61 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 64 ರನ್ಗಳು ಮೂಡಿಬಂದಿವೆ.
ಇದನ್ನೂ ಓದಿ: IPL 2025: ಫೈನಲ್ ಪಂದ್ಯಕ್ಕೂ ಮುನ್ನ RCB ಅಭಿಮಾನಿಗಳಿಗೆ ಗುಡ್ ನ್ಯೂಸ್
ಅದರಂತೆ 2ನೇ ದಿನದಾಟದ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ಲಯನ್ಸ್ ತಂಡವು 2 ವಿಕೆಟ್ ಕಳೆದುಕೊಂಡು 237 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಟಾಮ್ ಹೈನ್ಸ್ (103) ಹಾಗೂ ಮ್ಯಾಕ್ಸ್ ಹೋಲ್ಡನ್ (64) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಎ ತಂಡದ ಪರ ಹರ್ಷಿತ್ ರಾಣಾ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
